ಸಮನ್ವಯ ಬದುಕಿಗೆ ಭಾಷೆ ಮುಖ್ಯ -ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ

Picture of RB NEWS

RB NEWS

Bureau Report

ಕಾರ್ಕಳ : ಸಮನ್ವಯ ಬದುಕಿಗೆ ಬಾಷೆ ಮುಖ್ಯವಾಗಿದೆ. ಮಾತುಗಾರಿಕೆಯಿಂದ ಹೊಸ ಶಬ್ದದ ಜೊತೆಗೆ ಹೊಸ ವಿಚಾರಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಬಾಷೆಯನ್ನು ಅರಿತುಕೊಂಡಾಗ ಮತ್ತೊಬ್ಬರನ್ನು ಗೌರವಿಬಹುದು. ಬಾಷೆಯ ಮೂಲಕ ತಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿತುಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಸಾಹಿತ್ಯ ಸಂಘ ಇದರ ಸಹಯೋಗದೊಂದಿಗೆ “ನಾಡು ನುಡಿ, ಚಿಂತನೆ ಮತ್ತು ಸಂವಾದ ” ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.‌

ಮಾತೃಭಾಷೆ ಯಾವುದಾದರೂ ಕನ್ನಡ ಭಾಷೆ ಸದಾ ನಮಗೆ ಮುಖ್ಯವಾಗಬೇಕು. ಕನ್ನಡ ಭಾಷೆಯು ಬೇರೆಬೇರೆ ಪ್ರದೇಶಗಳಿಗೆ ವಿಸ್ತರಿಸಿದಾಗ ಅದರ ಸ್ವರೂಪ ಬದಲಾಗುತ್ತದೆ. ಭಾಷೆಯಲ್ಲಿ ಏಕವಚನ, ಬಹುವಚನ ಪದಪ್ರಯೋಗ ಇದ್ದರೂ ಭಾವ ಬದಲಾಗುವುದಿಲ್ಲ. ನಾನು ಹುಟ್ಟಿದ್ದು ಬೆಳೆದಿದ್ದು, ಕೆಲಸ ಕಾರ್ಯಗಳೆಲ್ಲವೂ ಬೇರೆ ಬೇರೆ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಅದರೊಳಗಿನ ಎಲ್ಲ ಭಾವಗಳೂ ನನಗೆ ಅರಿವಾಗುತ್ತವೆ. ನಮ್ಮ ಹಿರಿಯರನ್ನು ಮಾತನಾಡಿಸಿದಾಗ ಅನೇಕ ಹೊಸ ಶಬ್ದಗಳು ನಮಗೆ ಸಿಗುತ್ತವೆ ಎಂದರು.

ಬರಹಗಾರರ ಭಾಷಣಗಳನ್ನು ಕೇಳುವಾಗ ಬೇಕಾದ ಎಲ್ಲ ಮಾಹಿತಿಗಳು ಸಿಗುತ್ತವೆ. ಅದನ್ನು ನಾವು ಆಲಿಸಬೇಕು. ಮಾತನಾಡುವಾಗ ಎರಡು ಮೂರು ಭಾಷೆಗಳನ್ನು ಬಳಸಿ, ಅಪಾರ್ಥವೆನಿಸುವಂತೆ ಮಾತನಾಡಿದರೆ, ಭಾಷೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಎಚ್ಚರ ಎಲ್ಲ ತಲೆಮಾರಿನಲ್ಲೂ ಇರಬೇಕು. ಮುಂದಿನ ಪೀಳಿಗೆಯವರೆಲ್ಲ ಒಟ್ಟಿಗೆ ಬದುಕಬೇಕಾದರೆ, ಭಾಷೆ ಬಹಳ ಮುಖ್ಯವಾಗುತ್ತದೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಯಾವ ಮುಜುಗರೂ ಇರಕೂಡದು. ಸಭ್ಯವಿರುವ ಟೀಕೆಗಳು ಒಳ್ಳೆಯದು. ಸಮಾಜಕ್ಕೆ ನಾವೇನು ಕೊಡಬಲ್ಲೆವು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಆಲೋಚನೆ ಮಾಡಬೇಕು. ನಾಡು ನುಡಿ ಚಿಂತನೆಯ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಓದಿನ ಮೂಲಕ ಆಲೋಚನಾ ಕ್ರಮ ವಿದ್ಯಾರ್ಥಿಗಳಲ್ಲಿ ಮೂಡುತ್ತವೆ. ಓದನ್ನು ಭಾಷೆ ಕಟ್ಟಿ ಕೊಡುತ್ತದೆ. ಚಿಂತನಾ ಕ್ರಮಗಳು ಕನ್ನಡದಲ್ಲಿ ಇದ್ದಾಗ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ. ಇನ್ನೊಬ್ಬರೆ ಅಭಿಪ್ರಾಯಗಳಿಗೆ ಬೆಲೆಕೊಡುವ ಗುಣವನ್ನು ವಿದ್ಯಾರ್ಥಿವರ್ಗ ಬೆಳೆಸಿಕೊಂಡರೆ, ಮನಸ್ತಾಪಗಳಾಗದು. ಎಲ್ಲ ವಿಚಾರಗಳಲ್ಲೂ ವೈರುಧ್ಯಗಳು ಇದ್ದೇ ಇರುತ್ತವೆ. ವೈರುಧ್ಯಗಳ ಹಿಂದಿನ ವಿವೇಕಪ್ರಜ್ಞೆಯನ್ನು ನಾವು ಅರಿತಿರಬೇಕು. ಆಗ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಲು ಸಾಧ್ಯ. ಭಾಷೆಯನ್ನು ವಿವೇಕದಿಂದ ಬಳಸಿದಾಗ ಅದು ಮುಂದಿನ ಕಾಲಕ್ಕೂ ಪ್ರಸಾರ ಆಗುತ್ತಿರುತ್ತದೆ. ಈ ಪ್ರಸರಣವೇ ಭಾಷೆಯ ಗೆಲುವು ಎಂದು ಹೇಳಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ. ಲಕ್ಷ್ಮೀ ನಾರಾಯಣ ಕೆ.ಎಸ್., ಸಾಹಿತ್ಯ ಸಂಘದ ಪ್ರತಿನಿಧಿಗಳಾದ ಕು.ಹಿತ ಹಾಗೂ ಶ್ರೀನಿಧಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ಹಾಗೂ ವಿಭಾಗ ಮುಖ್ಯಸ್ಥ ವನಿತಾ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಸುಲೋಚನಾ ಪಚ್ಚಿನಡ್ಕ ಧನ್ಯವಾದ ಸಮರ್ಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top