



ಸಮಗ್ರ ಸಾಧಕ ಪ್ರಶಸ್ತಿ ವಿಜೇತ ನಾರಾಯಣ ಪಿ ಎಂ
- ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಮಗ್ರ ಸಾಧಕ ಪ್ರಶಸ್ತಿಯನ್ನು ನಿಶ್ಮಿತಾ ಸಮೂಹ ಸಂಸ್ಥೆಯ ಮಾಲಕ ನಾರಾಯಣ ಪಿ ಎಂ ರವರು ಪಡೆದಿರುತ್ತಾರೆ.
ಮೂಡುಬಿದಿರೆಯ ಮಾಸ್ತಿ ಕಟ್ಟೆಯ ಸುಬ್ಬ ಮಹಲ್ ನ ಸುಬ್ಬ ಪೂಜಾರಿ ಹಾಗೂ ದೇವಕಿಯರ 3 ನೇ ಪುತ್ರ ನಾರಾಯಣ ಪಿ ಎಂ. 1955 ಅಕ್ಟೋಬರ್ 23ರಂದು ಜನಿಸಿದ ಇವರು ಸ್ಥಳೀಯ ಶಾಲೆ ಕಾಲೇಜುಗಳಲ್ಲಿ ಕಲಿತರು. ಸಕ್ರಿಯ ಎನ್ ಸಿ ಸಿ ಕ್ಯಾಡೆಟ್ ಆಗಿದ್ದು, ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡರು.
ಬಿಎಸ್ಸಿ ಪದವಿ ಪಡೆದು 1978 ರಿಂದ 1990ರ ವರೆಗೆ ನಾರಾಯಣ ಸ್ವಾ ಮಿಲ್ ನಲ್ಲಿ ಕೆಲಸ ಮಾಡಿದರು. ತರುವಾಯ ನಿಶ್ಮಿತಾ ಟ್ರಾವೆಲ್ಸ್, ನಿಶ್ಮಿತಾ ಟವರ್, ಶ್ವೇತ ವೈನ್ ಶಾಪ್, ಶೃಂಗಾರ ಬಾರ್, ಮಿಡ್ ಟೌನ್ ಬಾರ್, ಸುಗಮ ಟೂರಿಸ್ಟ್ ಗಳಲ್ಲಿ ಸುಮಾರು 300ಕ್ಕೂ ಮಿಕ್ಕಿ ಜನರಿಗೆ ಉದ್ಯೋಗ ನೀಡಿ ಮುನ್ನಡೆಸುತ್ತಿದ್ದಾರೆ.
ರೋಟರಿ ಕ್ಲಬ್ ಮೂಡಬಿದ್ರೆಯ ಸಕ್ರಿಯ ಸದಸ್ಯರಾಗಿದ್ದು, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟ್ ನ ಕಾರ್ಯದರ್ಶಿಯಾಗಿ, ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 31 ವರ್ಷಗಳಿಂದ ಮೂಡುಬಿದ್ರೆಯ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ನಿ ಮೀನಾಕ್ಷಿ ಯೊಂದಿಗೆ ಮಾಸ್ತಿ ಕಟ್ಟೆಯಲ್ಲಿ ವಾಸವಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳಲ್ಲಿ ಡಾ. ಮನೀಷಾ ಅತ್ತಾವರ ಕೆಎಂಸಿಯಲ್ಲಿ ವೈದ್ಯರಾಗಿದ್ದಾರೆ. ನಿರೀಕ್ಷಾ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ.
ಇವರು ಈತನಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ, ಸಮಾಜ ಮಂದಿರ, ಕೋರಿಯೊಲು ಗುತ್ತು ಸುಬ್ಬಪ್ಪ ಪೂಜಾರಿ, ರಂಗ ಸಮಾಜ ಬೆಂಗಳೂರು, ಜ್ಞಾನ ಮಂದಾರ, ಮೂಡುಬಿದಿರೆ ಜೆ ಸಿ ಎಸ್, ಕನ್ನಡ ಸಾಹಿತ್ಯ ಪರಿಷತ್, ರೋಟರಾಕ್ಟ್ ಕ್ಲಬ್, ಸೋಮಪ್ಪ ಸುವರ್ಣ ಎಕ್ಸ್ ಎಂ ಎಲ್ಎ ಇತ್ಯಾದಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೀಗ ನವೆಂಬರ್ 15ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಮಗ್ರ ಸಾಧಕ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.




































