









ಸಂಸದ ಬೃಜೇಶ್ ಚೌಟ ಪುತ್ತಿಗೆ ಕ್ಷೇತ್ರಕ್ಕೆ ಭೇಟಿ : ಕಾಮಗಾರಿ ವೀಕ್ಷಣೆ, ವೆಬ್ಸೈಟ್ ಅನಾವರಣ
ಮೂಡುಬಿದಿರೆ: ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಆಗಮಿಸಿ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ವೆಬ್ ಸೈಟ್ ನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ದೇವಸ್ಥಾನಗಳು ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರ ಕಾಣುತ್ತಿವೆ. ಅದರಂತೆ ಐತಿಹಾಸಿಕ ಪರಂಪರೆ, ವೈಶಿಷ್ಟ್ಯತೆಯನ್ನು ಹೊಂದಿರುವ ಪುತ್ತಿಗೆ ಕ್ಷೇತ್ರವೂ ಉತ್ತಮ ದೇವಸ್ಥಾನವಾಗಿ ಮೂಡಿ ಬರಲಿದೆ.
ವಿದ್ಯಾ ಕಾಶಿಯಾಗಿರುವ ಮೂಡುಬಿದಿರೆಗೆ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿದ್ದು ಇಂತಹ ಸಂದರ್ಭದಲ್ಲಿ ನಮ್ಮ ಪ್ರತಿಯೊಬ್ಬರ ನಡೆ ನುಡಿ, ಆಚಾರ ವಿಚಾರಗಳು, ನಡವಳಿಕೆ ಉತ್ತಮವಾಗಿರಬೇಕು. ಇಲ್ಲಿನ ಸನಾತನ ಸಂಸ್ಕೃತಿ, ಆಚಾರ ವಿಚಾರವನ್ನು ವಿದ್ಯಾಥಿ೯ಗಳು ಮೈಗೂಡಿಸಿಕೊಂಡು ಬೇರೆ ಬೇರೆ ಕಡೆಗಳಿಗೆ ಪಸರಿಸಲು ಅವಕಾಶ ಮಾಡಿಕೊಡುವ ಮೂಲಕ ದೇವಸ್ಥಾನಗಳು ಮಾದರಿಯಾಗಬೇಕಿದೆ.
ಚುನಾವಣಾ ಪೂರ್ವದಲ್ಲಿ ಕ್ಷೇತ್ರಕ್ಕೆ ಬಂದು ಸೋಮನಾಥನ ಆಶೀರ್ವಾದ ಪಡೆದುಕೊಂಡಿದ್ದೆ ಅದರಂತೆ ಜಿಲ್ಲೆಯ ಜನರ ಜೊತೆ ಬೆರೆಯಲು ಅವಕಾಶ ಸಿಕ್ಕಿದೆ. ಅದಕ್ಕಾಗಿ ಮಕರ ಸಂಕ್ರಮಣ ದಿನವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರಕ್ಕೆ ಬಂದಿದ್ದೇನೆ. ಬ್ರಹ್ಮಕಲಶದ ಸಂದರ್ಭದಲ್ಲಿ ಭಕ್ತನಾಗಿ ಭಾಗವಹಿಸುವೆ ಎಂದ ಅವರು ಎಲ್ಲರೂ ಒಟ್ಟಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡೋಣ ಎಂದರು.
ಅದೇ ಸಂದರ್ಭದಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ., ಕೆಎಂಎಫ್ ನ ದ.ಕ. ಜಿಲ್ಲಾ ಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮಹೇಂದ್ರ ಹೆಗ್ಡೆ, ಜೋಯ್ಲಸ್ ತಾಕೊಡೆ, ಮೂಡುಬಿದಿರೆ ಹಾಗೂ ಜೀರ್ಣೋದ್ಧಾರದ ಪದಾಧಿಕಾರಿಗಳು ಈ ಸಂದಭ೯ ಉಪಸ್ಥಿತರಿದ್ದರು.

































