
ದೇಹದ ಆರೋಗ್ಯ ಕಾಳಜಿ ಬಹಳ ಮುಖ್ಯ
ಕಾರ್ಕಳ: ಮಹಿಳೆಯರು ತಮ್ಮ ದೇಹದ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸುವುದು ಈ ದಿನಗಳಲ್ಲಿ ಬಹು ಅಗತ್ಯವಾಗಿದೆ. ಗೊತ್ತಾಗದೇ ಇರುವ ಸಮಸ್ಯೆಗಳು ಆವರಿಸಿದ ಬಳಿಕ ಕಾಳಜಿ ಮಾಡುವುದಕ್ಕಿಂತ ಮಹಿಳೆಯರು ಪೂರ್ವಭಾವಿಯಾಗಿ ತಪಾಸಣೆ ನಡೆಸಲೇಬೇಕು. ಹೀಗೆ ಮಾಡುವುದರಿಂದ ಕ್ಯಾನ್ಸರ್ ನಂತಹ ಗಂಭೀರವಾದ ಹಾಗೂ ಮಾರಕವಾದ ಕಾಯಿಲೆಗಳಿಂದ ರಕ್ಷಣೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಸಂಕೋಚಗಳನ್ನು ಬದಿಗಿರಿಸಿ ವೈದ್ಯಕೀಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು, ಎಸ್.ಡಿ.ಎಂ ಆಯುರ್ವೇದ ಕಾಲೇಜು, ಉಡುಪಿ ಇಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಶ್ರೇಯಶ್ರೀ ಸುವರ್ಣ ಹೇಳಿದರು.

ಅವರು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಮಹಿಳಾ ದೌರ್ಜನ್ಯ ಮತ್ತು ಪರಿಹಾರ ಘಟಕ,ಹಾಗೂ ಮಹಿಳಾ ಸಬಲೀಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಆರಂಭಗೊಳ್ಳುವ ಪ್ರಕ್ರಿಯೆ, ಅದರ ಲಕ್ಷಣ, ಹಾಗೂ ಅದರ ಚಿಕಿತ್ಸೆ ಇತ್ಯಾದಿಗಳ ಕುರಿತು ಸವಿವರ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ನೀಡಿದರು.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ.ಮಂಜುನಾಥ ಎ.ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಘಟಕದ ಸಂಚಾಲಕರಾದ ಶ್ರೀಮತಿ ದೀಪ್ತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ವೇತಾ, ಪ್ರತ್ವಿಕ ಉಪಸ್ಥಿತರಿದ್ದರು.
ಪ್ರೊ.ಸೋಫಿಯಾ ಪಿರೇರಾ ಸ್ವಾಗತಿಸಿ, ಕವನ ವಂದನಾರ್ಪಣೆಗೈದರು, ಚೈತ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.






































