ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಅದ್ಧೂರಿಯಾಗಿ ಫುಡ್ ಫೆಸ್ಟ್–2026: ಚಾಲನೆ ನೀಡಿದ ದಾಯ್ಜಿವರ್ಲ್ಡ್ ಚಾನೆಲ್ನ ನಿರ್ದೇಶಕ ವಾಲ್ಟರ್ ನಂದಳಿಕೆ
RB NEWS
Bureau Report
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಅದ್ಧೂರಿಯಾಗಿ ಫುಡ್ ಫೆಸ್ಟ್–2026
ಚಾಲನೆ ನೀಡಿದ ದಾಯ್ಜಿವರ್ಲ್ಡ್ ಚಾನೆಲ್ನ ನಿರ್ದೇಶಕ ವಾಲ್ಟರ್ ನಂದಳಿಕೆ
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಅಂತಿಮ ಪದವಿ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ಫುಡ್ ಫೆಸ್ಟ್–2026 ಆಹಾರ ಮೇಳವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಒಟ್ಟು 14 ಆಹಾರ ಮಳಿಗೆಗಳನ್ನು ಒಳಗೊಂಡ ಈ ಮೇಳದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ, ತಮ್ಮ ಸೃಜನಶೀಲತೆ ಹಾಗೂ ಸಂಘಟನಾ ಕೌಶಲ್ಯವನ್ನು ಅನಾವರಣಗೊಳಿಸಿದರು. ದಾಯ್ಜಿವರ್ಲ್ಡ್ ಚಾನೆಲ್ನ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ಆಹಾರ ಮೇಳವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ತುಳುನಾಡಿನ ಆಹಾರ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಸ್ವಾದಿಷ್ಟ ಆಹಾರ ಪದಾರ್ಥಗಳನ್ನು ಕಾಲೇಜುಗಳಲ್ಲಿ ಈ ರೀತಿಯಾಗಿ ಹಬ್ಬದ ವಾತಾವರಣದಲ್ಲಿ ಪರಿಚಯಿಸುವುದು ಸಂತಸದ ವಿಚಾರ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಪರಸ್ಪರ ಸಹಕಾರ, ಸೃಜನಶೀಲತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಇಂತಹ ಪ್ರಯತ್ನಗಳು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ” ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಮೇರಿ ಜಾನ್ ಪೇಜ್ನ ವಾಸಿಮ್ ಶಾನ್ ಅವರು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪದವಿ ವಿಭಾಗದ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಇಂತಹ ಸೃಜನಾತ್ಮಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇವು ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಸಾಮರ್ಥ್ಯ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ನರೇಂದ್ರ ಕಾಮತ್ ಕೆ., ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ್ ಎಸ್.ಸಿ., ಐಕ್ಯೂಎಸಿ ಸಂಯೋಜಕ ಲಕ್ಷ್ಮಿನಾರಾಯಣ ಕೆ.ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಿಜಯ ಕುಮಾರಿ, ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಂದಕಿಶೋರ್ ಕೆ. ಉಪಸ್ಥಿತರಿದ್ದರು. ಫುಡ್ ಫೆಸ್ಟ್ನ ಸಂಯೋಜನೆಯಲ್ಲಿ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ಶ್ರೀಕಾಂತ್ ಮತ್ತು ವಿಲಾಸ್ ಭಟ್ ಹಾಗೂ ಬಿಬಿಎ ವಿದ್ಯಾರ್ಥಿ ಸೃಜನ್ ಪ್ರಮುಖ ಪಾತ್ರ ವಹಿಸಿದರು. ತೃತೀಯ ಪದವಿ ವಿದ್ಯಾರ್ಥಿನಿ ಅಮೃತಾ ಆರ್. ಮತ್ತು ದ್ವಿತೀಯ ಪದವಿ ವಿದ್ಯಾರ್ಥಿನಿ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ, ವಿವಿಧ ಆಹಾರ ಮಳಿಗೆಗಳ ವ್ಯವಸ್ಥೆ ಹಾಗೂ ಉತ್ಸಾಹಭರಿತ ವಾತಾವರಣದೊಂದಿಗೆ ಫುಡ್ ಫೆಸ್ಟ್–2026 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.