ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಯಶಸ್ವಿ
RB NEWS
Bureau Report
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಯಶಸ್ವಿ
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸತತ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಿ ನೆರವೇರಿತು. ಪಂದ್ಯಾಟವನ್ನು ಉದ್ಘಾಟಿಸಿದ ಪವರ್ ಪಾಯಿಂಟ್ ಸಂಸ್ಥೆಯ ಮಾಲಕರೂ ಉದ್ಯಮಿ ಮಹಾವೀರ ಹೆಗ್ಡೆ ಮಾತನಾಡಿ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು ಒಂದು ಕಲೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನದಿಂದ ಇಂತಹ ಕ್ರೀಡಾಕೂಟವನ್ನು ವೈಭವದಿಂದ ಆಯೋಜಿಸುವುದು ಎಲ್ಲರಲ್ಲೂ ಉತ್ಸಾಹ ಮೂಡಿಸುತ್ತದೆ ಎಂದರು. ಜೀವನವು ಹೋರಾಟದಿಂದ ಕೂಡಿದ್ದು, ಸೋಲಿನ ಮೆಟ್ಟಿಲುಗಳನ್ನು ಹತ್ತಿದಾಗಲೇ ಯಶಸ್ಸಿನ ಮೌಲ್ಯ ತಿಳಿಯುತ್ತದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೈಟ್ ಟ್ಯಾಕ್ಸ್ ಮೇಟ್ ಸಂಸ್ಥೆಯ ಮಾಲಕರೂ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸಿ.ಎ. ಹರೀಶ್ ರಾವ್ ಅವರು ಮಾತನಾಡಿ, ಕಾಲೇಜಿಗೆ ಮತ್ತೆ ಬಂದ ಅನುಭವ ಸಂತೋಷವನ್ನುಂಟು ಮಾಡಿದೆ. ಭುವನೇಂದ್ರ ಕಾಲೇಜು ಪಠ್ಯದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡುತ್ತದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ವೇದಿಕೆಗಳು ಅಗತ್ಯ. ಗೆದ್ದವರೇ ಮಾತ್ರ ವಿನ್ನರ್ ಅಲ್ಲ, ಭಾಗವಹಿಸಿದವರೂ ಗೆಲುವಿನ ಪಥದಲ್ಲೇ ಇದ್ದಾರೆ ಎಂದರು. ಪುರಸಭಾ ಸದಸ್ಯ ಪ್ರದೀಪ್ ರಾಣೆ ಮಾತನಾಡಿ, ಭುವನೇಂದ್ರ ಕಾಲೇಜಿಗೆ ವಿಶಿಷ್ಟ ಇತಿಹಾಸವಿದೆ. ಈ ಸಂಸ್ಥೆಯಲ್ಲಿ ಪಡೆದ ಶಿಕ್ಷಣ ಹಾಗೂ ಕ್ರೀಡಾ ಪ್ರೋತ್ಸಾಹದಿಂದಲೇ ಅವಕಾಶಗಳ ಬಾಗಿಲು ತೆರೆದಿದೆ. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತೋಷಕರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ನಿಯಮಿತ ಅಭ್ಯಾಸ ಹಾಗೂ ನಿಧಾನ ಪ್ರಗತಿಯ ಮೂಲಕ ಯಶಸ್ಸನ್ನು ಸಾಧಿಸಬಹುದು. ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳೇ ಇಂದು ಅತಿಥಿಗಳಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂಸ್ಥೆಯ ಹೆಮ್ಮೆ. ಈ ಪರಂಪರೆ ಮುಂದುವರಿಯಬೇಕು ಎಂದರು ಹಾಗೂ ಪಂದ್ಯಾಟದಲ್ಲಿ ಭಾಗವಹಿಸಿದ ತಂಡಗಳಿಗೆ ಶುಭ ಕೋರಿದರು. ಪೆರ್ವಾಜೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ, ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ್ ಭಟ್, ಸಹ ಕ್ಷೇಮಪಾಲನಾ ಅಧಿಕಾರಿ ನಂದಕಿಶೋರ್, ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಚಂದ್ರ ಉಪಸ್ಥಿತರಿದ್ದರು. ಹಿತ ನಿರೂಪಿಸಿದರು. ಕೀರ್ತಿ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಅನನ್ಯ ವಂದಿಸಿದರು