ಶೈಕ್ಷಣಿಕದೊಂದಿಗೆ ಸಂಸ್ಕೃತಿ, ಸಂಸ್ಕಾರ ಮುಖ್ಯ -ಶಾಸಕ ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳದಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ಕಾರ್ಯಗಾರ
ಕಾರ್ಕಳ: ಮಲೆಕುಡಿಯ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗಾಭಿವೃದ್ಧಿಯನ್ನು ಉದ್ದೇಶಿಸಿಕೊಂಡು ಉದ್ಯೋಗ ಆಧಾರಿತ ಶಿಕ್ಷಣ ಕಾರ್ಯಗಾರವು ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿ ಸರ್ಕಾರಿ ಉದ್ಯೋಗ, ಖಾಸಗಿ ಕ್ಷೇತ್ರ ಹಾಗೂ ಸ್ವಉದ್ಯೋಗದತ್ತ ಮುನ್ನಡೆಯಲು ಇಂತಹ ತರಬೇತಿಗಳು ಪೂರಕವಾಗುತ್ತವೆ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣದ ಅಗತ್ಯತೆ ಹೆಚ್ಚಿದ್ದು, ಶಿಕ್ಷಣವೆಂದರೆ ಕೇವಲ ಓದು-ಬರಹವಲ್ಲ; ಅದರೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರವೂ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಜಿಲ್ಲಾ ಮಲೆಕುಡಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾರದಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಮಾತನಾಡಿ, “ಶಿಕ್ಷಣ, ಸಂಘಟನೆ ಮತ್ತು ಜಾಗೃತಿ” ಎಂಬ ಧ್ಯೇಯದೊಂದಿಗೆ ಮಲೆಕುಡಿಯ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಶೈಕ್ಷಣಿಕ ಸಮಿತಿಯನ್ನು ರಚಿಸಲಾಗಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಸಮಿತಿಯು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಸಮಿತಿಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್, ಕಲಾ ವೈಭವ ಸಂಯೋಜಕ ಪ್ರದೀಪ ಅಂಡಾರು, ತರಬೇತುದಾರ ಡಾ. ಸೋಮಶೇಖರ್ ಎಂ., ನೋಣಯ್ಯಗೌಡ ರೆಂಜಾಳ ಉಪಸ್ಥಿತರಿದ್ದರು.
ಪುಷ್ಪ ಶ್ರೀಧರ ಗೌಡ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪಣಪಿಲ ಪ್ರಾರ್ಥಿಸಿದರು. ನೋಣಯ್ಯ ರೆಂಜಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ಸಮಿತಿ ಸಂಯೋಜಕ ನವೀನ್ ತೆಳ್ಳಾರು ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top