ಶುಭಲಕ್ಷಣ
ಶುಭಲಕ್ಷಣ
ಪ್ರತಿಯೊಂದನ್ನೂ ಶುಭಲಕ್ಷಣವೆಂತಲೇ ಸ್ವೀಕರಿಸಿದರೆ ಅದರ ಸತ್ಪರಿಣಾಮ ಮುಂದೊಂದು ದಿನ ಕಾಣಿಸುತ್ತದೆ. ಎಲ್ಲರನ್ನೂ ಸುಮಂಗಲೆ ಅಂತ ಗೌರವಿಸಿದರೆ ಅಮಂಗಲ ಎನ್ನುವ ಕೆಟ್ಟ ಭ್ರಮೆಯೇ ಇಲ್ಲವೆಂದಾಗುತ್ತದೆ.
ದೇವದಾಸ ಈಶ್ವರಮಂಗಲ ಅವರು ಬರೆದ ಯಕ್ಷಗಾನ ಕಥಾನಕ ಶುಭಲಕ್ಷಣ ಈ ಬಾರಿ ಸಾಲಿಗ್ರಾಮ ಮೇಳದ ಅತಿರಥರು ಮತ್ತು ಕಿರಿಯ ಕಲಾವಿದರಿಗೆ ದೊರೆತಿದೆ. ಪ್ರಸಂಗ ಕೂಡಾ ಯಕ್ಷಗಾನ ರಂಗದಲ್ಲಿ ಹೊಸದೊಂದು ಶುಭಲಕ್ಷಣ ಅರ್ಥದಲ್ಲಿಯೇ ಪ್ರದರ್ಶನವಾಗಲಿಕ್ಕಿದೆ.
ದೇವದಾಸ ಈಶ್ವರಮಂಗಲ,ಆತ ರಚಿಸುವ ಯಾವ ಕಥಾ ಪ್ರಸಂಗ ಕೂಡಾ ಶುಭಲಕ್ಷಣವೇ ಹೌದು !
ಪ್ರಸಿದ್ಧ, ಸುಪ್ರಸಿದ್ದ, ಖ್ಯಾತ, ಪ್ರಖ್ಯಾತ ,ಹಿರಿಯ, ಶ್ರೇಷ್ಠ ,ಅನುಭವಿ ಹಾಗೆ ಬಗೆ ಬಗೆಯ ಉಪಮೆಗಳಿಗೆ ಪಾತ್ರರಾಗಿರುವ ಹೆಮ್ಮೆಯ ಕಲಾವಿದರ ಜೊತೆಗೆ ,ಚಿಗರೆಲೆಯಲ್ಲೇ ಎಲ್ಲ ಸಾರಾಂಶವನ್ನೂ ತುಂಬಿಕೊಂಡು ತೋರಿಸಿಕೊಡಬಲ್ಲ ಸಾಮರ್ಥ್ಯದ ಕಿರು ಕಲಾವಿದರುಗಳ ಸಂಗಮದಂತಿರುವ ಸಾಲಿಗ್ರಾಮ ಮೇಳದ ಕಲಾವಿದರು ತಮ್ಮ ಇಚ್ಛಾಶಕ್ತಿಯ ಪ್ರದರ್ಶನಕ್ಕೆ ಸವಾಲಾಗಿ ಇರುವ ಶುಭಲಕ್ಷಣ ಯಕ್ಷಗಾನ ಪ್ರಸಂಗವನ್ನು ಯಶಸ್ವೀಯಾಗಿ ಅಭಿನಯಿಸಿ ಜನರ ಪ್ರೀತಿ ಅಭಿಮಾನಕ್ಕೆ ಪಾತ್ರರಾಗುವುದಷ್ಟೇ ಅಲ್ಲ ಮೇಳದ ಸಮಗ್ರತೆಯನ್ನು ವೈಭವೀಕರಿಸಬಲ್ಲರು ಎಂಬ ವಿಶ್ವಾಸವನ್ನು ಆ ಪ್ರಸಂಗ ಪೂರ್ತಿಗೊಳಿಸಲಿದೆ.
ಶುಭಲಕ್ಷಣ ಶೀರ್ಷಿಕೆಯು ಒಂದೇ ಪದವಾಗಿರುತ್ತದೆ ಎಂಬುದು ಗಮನೀಯ. ಶುಭ ಮತ್ತು ಲಕ್ಷಣ ಎರಡು ಹೆಸರನ್ನು ಜೋಡಿಸಿ ಬರೆದರೇ ಹೇಗೆ? ಎಂದು ಗೊಂದಲ ಪಡುವಂತಿಲ್ಲ . ಯಾಕೆಂದರೆ ಅದು ಶುಭಲಕ್ಷಣ !
ಪೌರಾಣಿಕವಲ್ಲದ ಪ್ರಸಂಗ ರಚನೆಗೆ ಯಾವುದೇ ಸಿನೆಮಾ ಕತೆ, ಕಾದಂಬರಿಯ, ಸಾಮಾಜಿಕ ಘಟನೆಯ ಒಂದು ಚಿಕ್ಕ ಎಳೆಯನ್ನೇ ಆಧರಿಸಿ ಯಕ್ಷಗಾನ ಕಥಾಪ್ರಸಂಗ ಬರೆಯುವುದರಲ್ಲಿ ದೇವದಾಸ್ ಈಶ್ವರಮಂಗಲ ನಿಸ್ಸೀಮನಾಗಿದ್ದಾರೆ. ಇಲ್ಲೀ ತನಕ ಬರೆದಿರುವುದರಲ್ಲಿ ಹೆಚ್ಚಿನ ಪ್ರಸಂಗಗಳು ದಾಖಲೆಯ ಪ್ರದರ್ಶನ ಹಾಗೂ ಗಲ್ಲಾಪೆಟ್ಟಿಗೆಯನ್ನೂ ಭರ್ಜರಿಯಾಗಿ ತುಂಬಿಸಿಕೊಟ್ಟಿದೆ. ‘ಲಕ್ಷಣ ‘ ಪದಕ್ಕೆ ಎದುರುಗಡೆ ಯಾವುದೇ ಉಪಮೆ ಸೇರಿಸಿ ಹೊಸ ಶೀರ್ಷಿಕೆ ಬರೆಯುವುದಕ್ಕೆ ಇನ್ನು ಯಾರಿಗೂ ಅವಕಾಶ ಇಲ್ಲದಂತೆ ದೇವದಾಸ ಈಶ್ವರಮಂಗಲ ಪ್ರಸಂಗ ಶೀರ್ಷಿಕೆ ಬರೆದಿರುವುದು ಕೂಡ ಶುಭಲಕ್ಷಣವೇ ಸರಿ !
ಗುಜರಾಥಿ ಭಾಷೆಯ ಖ್ಯಾತ ಕಾದಂಬರಿಕಾರ ಪನ್ನಲಾಲ್ ಪಟೇಲ್ ಅವರ ಪ್ರಸಿದ್ಧ ಕೃತಿ Malela Jeev ಅದರ ಒಂದು ಎಳೆಯನ್ನು ಆಧರಿಸಿ ಶುಭಲಕ್ಷಣ ಕಥಾಪ್ರಸಂಗವನ್ನು ರಚಿಸಿದ್ದಾರೆ. ನಾಗಾಭರಣ ನಿರ್ದೇಶಿತ , ಶಿವರಾಜ್ ಕುಮಾರ್ ಅಭಿನಯದ ಜನುಮದ ಜೋಡಿ ಕನ್ನಡ ಸಿನೆಮ ಕೂಡಾ ಪನ್ನಲಾಲ್ ಪಟೇಲ್ ಅವರ Malela Jeev ಕಾದಂಬರಿಯಾಧರಿಸಿದ್ದು.
ಶುಭಲಕ್ಷಣ ಕಥಾಪ್ರಸಂಗ ಸಾಲಿಗ್ರಾಮ ಮೇಳಕ್ಕಷ್ಟೇ ಅಲ್ಲ ಯಕ್ಷಗಾನ ಕಲಾ ಮಕುಟಕ್ಕೇ ಹೊಳಪಿನ ಮಣಿಯಾಗಲಿದೆ ಖಚಿತ. ಈ ಬಾರಿ ಆ ಪ್ರಸಂಗವನ್ನೇ ಪ್ರಧಾನವಾಗಿ ಆಡಿತೋರಿಸುವುದಕ್ಕೆ ಮೇಳಕ್ಕೆ ಮನವಿ ಬರುತ್ತಿರುವ ಶುಭಲಕ್ಷಣ ಗೋಚರಿಸುತ್ತಿದೆ.
ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಮತ್ತು ಹೊಸ ಪ್ರಯೋಗಗಳಿಗೆ ಜೀವತುಂಬಿಸಿ ಪ್ರೋತ್ಸಾಹಿಸುವ ಸಾಲಿಗ್ರಾಮ ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆ ಅವರಿಗೆ ಅಭಿನಂದನೆಗಳು.
ಬಹಳ ಕುತೂಹಲವನ್ನು ಸೃಷ್ಠಿಸಿ ,ಕಲಾಸಕ್ತರ ನಿರೀಕ್ಷೆಯನ್ನು ಇಮ್ಮಡಿಗೊಳಿಸುತ್ತಿರುವ ಶುಭಲಕ್ಷಣ ಯಕ್ಷಗಾನ ಪ್ರಸಂಗವು ನಾಡಿನಾದ್ಯಂತ ಅಭೂತಪೂರ್ವ ಪ್ರದರ್ಶನ ಕಾಣುವಂತಾಗಲಿ ಎನ್ನುವ ಹೃತ್ಪೂರ್ವಕ ಹಾರೈಕೆ ನನ್ನದಾಗಿದೆ.
-ವಿ. ಕೆ. ವಾಲ್ಪಾಡಿ















