ಶುಭದ ರಾವ್ ವಿರುದ್ಧ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪೊಲೀಸರಿಗೆ ದೂರು: ಗರಿಕೆದರಿದ ಪರಶುರಾಮ ಥೀಮ್ ಪಾಕ್೯ ವಿವಾದ
ಕಾರ್ಕಳ : ಕಾರ್ಕಳದ ಪೆರ್ವಾಜೆ ಬಿಲ್ಲವ ಸಂಘದ ಸಭಾಂಗಣದಲ್ಲಿ ಜುಲಾಯಿ 12ರಂದು ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸರಕಾರಿ ಕಾರ್ಯಕ್ರಮದಲ್ಲಿ ನಿಯಮಾವಳಿಯನ್ನು ಧಿಕ್ಕರಿಸಿ ಸಾಮಾಜಿಕ ಶಾಂತಿ ಕದಡುವ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ಕಾರ್ಕಳ ಪುರಸಭೆ ಸದಸ್ಯ ಶುಭದ ರಾವ್ ನಡೆದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಯುವ ಮೋರ್ಚಾ ಮಂಡಲದ ಪದಾಧಿಕಾರಿಗಳು ನಗರ ಪೊಲೀಸ್ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.


ಜನಸ್ಪಂದನ ಸರಕಾರಿ ಕಾರ್ಯಕ್ರಮದಲ್ಲಿ ಕಾನೂನುಬಾಹಿರವಾಗಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಲ್ಲದೆ ಅದನ್ನು ಪ್ರಶ್ನಿಸಿದ ಅಧಿಕಾರಿಯ ವಿರುದ್ಧ
ಏರು ದನಿಯಲ್ಲಿ ಮಾತಾಡಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಶುಭದ ರಾವ್ ಅವರು ಶಾಂತಿ ಭಂಗ ಮಾಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಿಂಗಳ ಹಿಂದೆಯೂ ಕೂಡ ಬೈಲೂರಿನ ಉಮಿಕಲ್ ಬೆಟ್ಟಕ್ಕೆ ಕಾನೂನುಬಾಹಿರವಾಗಿ ತೆರಳಿ, ಪರಶುರಾಮ ಮೂರ್ತಿಯ ಭಾಗಗಳನ್ನು ಕಿತ್ತು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಕಳ ಶಾಸಕರನ್ನು ತುಚ್ಛ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದಾರೆ.
ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ರೀತಿ ವರ್ತನೆ ಮಾಡುವುದು ಸಮಾಜದಲ್ಲಿ ಅಹಿತಕರ ಘಟನೆ ನಡೆಯುವಂತೆ ಪ್ರಚೋದನೆ ಮಾಡುವುದಲ್ಲದೇ, ಸಾರ್ವಜನಿಕ ಶಾಂತಿ ಭಂಗ ಹಾಗೂ ವೈಯಕ್ತಿಕ ನಿಂದನೆಯನ್ನು ಕೂಡ ಮಾಡುತ್ತಿದ್ದಾರೆ. ಇಂತಹ ಶಾಂತಿ ಕದಡುವ ಕಾರ್ಯಗಳು ಮರುಕಳಿಸಬಾರದು. ಶುಭದ್ ರಾವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ ಮಂಡಲದಿಂದ ದೂರು ಸಲ್ಲಿಸಿದೆ.



































