ಕಾರ್ಕಳ (ಉಡುಪಿ): ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲ್ಪಡುವ ಪರಶುರಾಮ ಮೂರ್ತಿಯನ್ನು ಮುಂದಿನ ದಿನಗಳಲ್ಲಿ ಬೈಲೂರಿನಲ್ಲಿ ಸರ್ಕಾರದ ವತಿಯಿಂದ ಪ್ರತಿಷ್ಠಾಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಾಂಗ್ರೆಸ್ ಕ್ರೀಡಾಕೂಟಕ್ಕೆ ಸ್ವರಾಜ್ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪರಶುರಾಮನ ಪುಣ್ಯಭೂಮಿಯಾದ ಕಾರ್ಕಳದ ಹೆಸರಿಗೆ ಇತ್ತೀಚಿನ ದಿನಗಳಲ್ಲಿ ಕಪ್ಪುಚುಕ್ಕೆ ಅಂಟಿದೆ. ಮುಂದಿನ ದಿನಗಳಲ್ಲಿ ಅದೇ ಸ್ಥಳದಲ್ಲಿ ಸರ್ಕಾರದ ವತಿಯಿಂದ ಪರಶುರಾಮ ಮೂರ್ತಿಯನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಉದಯ್ ಶೆಟ್ಟಿ ಅವರು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಾನೂ ಕೂಡ ಎರಡು ಬಾರಿ ಸೋತ ಅನುಭವ ಹೊಂದಿದ್ದು, ಜನರ ಸಂಪರ್ಕವನ್ನು ಎಂದಿಗೂ ಬಿಡಲಿಲ್ಲ. ಅದರ ಫಲವಾಗಿ 2018 ಮತ್ತು 2023ರ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಸಚಿವೆ ಹೇಳಿದರು. ಉದಯ್ ಶೆಟ್ಟಿ ಅವರು ಸದಾ ಕಾರ್ಕಳ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತಿಸುವ ನಾಯಕರು. ಬೆಂಗಳೂರಿಗೆ ಬಂದಾಗಲೆಲ್ಲಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕುರಿತಾಗಿ ಮಾತ್ರ ಚರ್ಚಿಸುತ್ತಾರೆ. ಶಾಸಕರಾಗಲು ಅವರು ಸಂಪೂರ್ಣ ಅರ್ಹ ವ್ಯಕ್ತಿ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮನೆಮನೆಗೂ ತಲುಪುವ ಕೆಲಸ ಮಾಡುತ್ತಿದ್ದಾರೆ. ಇದು ತಮಗೂ ಪ್ರೇರಣೆಯಾಗಿದ್ದು, ತಮ್ಮ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿ ಇದೇ ಮಾದರಿಯಲ್ಲಿ ಕಾಂಗ್ರೆಸ್ ಕ್ರೀಡಾಕೂಟ ಆಯೋಜಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್, ಗೋಪಿನಾಥ್ ಭಟ್, ಗುರು ನಾರಾಯಣ ಸ್ವಾಮಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಸುಧಾಕರ್ ಕೋಟ್ಯಾನ್, ಅಜಿತ್ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.