ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸಲು ಒತ್ತಾಯ

Picture of RB NEWS

RB NEWS

Bureau Report

ಕರ್ನಾಟಕ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಡಿ ಘೋಷಿಸಿರುವ ಸವಲತ್ತುಗಳು ಈ ಸಮುದಾಯಗಳನ್ನು ತಲುಪುತ್ತಿಲ್ಲ. ಅಲೆಮಾರಿ ಸಮುದಾಯಗಳು ತಮ್ಮ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ತಲತಲಾಂತರಗಳಿಂದ ಅಲೆಮಾರಿಯಾಗಿ ಬದುಕುತ್ತಿದ್ದ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಇವತ್ತು ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶಕ್ಕೆ ಒಂದೇ ಕಡೆ ನೆಲೆಯೂರಲು ಪ್ರಯತ್ನಿಸಿದರೂ ಅಂತಹ ಪ್ರಯತ್ನಕ್ಕೆ ಸರಕಾರಗಳು ಸ್ಪಂದಿಸದೆ ಅಲೆಮಾರಿ ಸಮುದಾಯಗಳ ವಿರೋಧಿಯಾಗಿ ವರ್ತಿಸುತ್ತಿದೆ. ಇನ್ನು ಸ್ಥಳೀಯರಿಂದ ಅನ್ಯರೆಂಬ ಅನುಮಾನಕ್ಕೂ ಅವಮಾನಕ್ಕೂ ಒಳಗಾಗಿ ದಿನನಿತ್ಯ ಕಿರುಕುಳ ದೌರ್ಜನ್ಯಗಳಿಗೆ ಒಳಗಾಗುವ ಹೀನಾಯ ಪರಿಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಗುಲ್ವಾಡಿ ಹೊಳೆ ಬದಿಯಲ್ಲಿ ಅಲೆಮಾರಿಗಳು ಬದುಕುವ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ತಪ್ಪಿತಸ್ತರ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಸಹಿತ ಹಲವು ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ. ಇಷ್ಟೆಲ್ಲಾ ಘಟನೆಗಳಾದರೂ ಈ ಭಾಗದ ಒಬ್ಬನೇ ಒಬ್ಬ ಶಾಸಕರಾಗಲಿ, ಸಂಸದರಾಗಲಿ ಅಲೆಮಾರಿ ಗುಡಿಸಲಿಗೆ ಭೇಟಿ ನೀಡಿಲ್ಲ ಕನಿಷ್ಟ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡದೆ ಅಲೆಮಾರಿ ಸಮುದಾಯದ ವಿರೋಧಿಯಾಗಿ ವರ್ತಿಸಿದ್ದಾರೆ. ಆಳುವ ಸರಕಾರ ಕೂಡ ಈ ಸಮುದಾಯಕ್ಕೆ ಆಸರೆಯಾಗಿ ನಿಂತಿಲ್ಲ. ಈ ರೀತಿ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿರುವ ಬಡಜನ ವಿರೋಧಿ ಸರಕಾರಗಳ ವಿರುದ್ಧ ಮತ್ತು ಸಮುದಾಯದ ಮೇಲಾಗುವ ಕಿರುಕುಳ ದೌರ್ಜನ್ಯಗಳ ವಿರುದ್ಧ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಧ್ವನಿ ಎತ್ತಲಿದೆ ಮತ್ತು ಅಲೆಮಾರಿ ವಿರೋಧಿ ಸರಕಾರದ ವಿರುದ್ದ ಸಂಘಟಿತ ಹೋರಾಟ ನಡೆಸಲು ಮುಂದಾಗಲಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ ಕರವಾಳಿ ಭಾಗದಲ್ಲಿ ವಾರದಿಂದ ಸುರಿದ ನಿರಂತರ ಮಳೆಯಿಂದ ನದಿ ಪಾತ್ರಗಳೆಲ್ಲಾ ತುಂಬಿ ಹರಿಯುತ್ತಿದ್ದೆ. ಪ್ರವಾಹ ಸೃಷ್ಟಿಯಾಗುವ ಎಲ್ಲಾ ಮುನ್ಸೂಚನ ಉಂಟಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಡಳಿತ ಮಳೆಗಾಲದ ಅವಘಡಗಳಿಂದ ಡೆಂಗು ಮಲೇರಿಯಾ ಎಂಬ ಸಾಂಕ್ರಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡುವ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ ಅದೇ ನದಿ ತೀರದಲ್ಲಿ ಗುಡಿಸಲಿನಲ್ಲಿ ಬದುಕುವ ಈ ಅಲೆಮಾರಿ ಸಮುದಾಯ ವಿಪರೀತವಾಗಿ ಸುರಿಯುವ ಮಳೆ, ಸಿಡಿಲು, ಮಿಂಚಿನಿಂದ ರಕ್ಷಿಸಲು ಜಿಲ್ಲಾ ಉಸ್ತವಾರಿ ಮಂತ್ರಿ ಮತ್ತು ಜಿಲ್ಲಾಡಳಿತ ಯಾವ ರಕ್ಷಣಾ ಕ್ರಮಕೈಗೊಂಡಿದೆ ಎಂದು ಉತ್ತರಿಸಬೇಕು. ಇಷ್ಟೊಂದು ವರುಷಗಳಿಂದ ನದಿ ತಟದಲ್ಲಿ ಬದುಕುವ ಅಲೆಮಾರಿ ಸಮುದಾಯಗಳ ಬಗೆಗೆ ಇಷ್ಟೊಂದು ನಿರ್ಲಕ್ಷ್ಯ ಯಾಕಾಗಿ ಎಂದು ಪ್ರಶ್ನಿಸಿದರು.

ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳಂತಹ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಅವರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಸಲುವಾಗಿಯೇ ಕರ್ನಾಟಕ ರಾಜ್ಯ ಸರಕಾರದಡಿಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮವೂ ರಚನೆಯಾಗಿವೆ. ಕರ್ನಾಟಕ ರಾಜ್ಯಾದ್ಯಂತ ಗುಡಿಸಲು ಮುಕ್ತಗೊಳಿಸುವ ಹೇಳಿಕೆಗಳು ಜಾಹೀರಾತುಗಳು ಭರವಸೆಗಳಿಗಷ್ಟೇ ಸೀಮಿತವೇ ಎಂದು ಸರಕಾರಗಳು ಉತ್ತರಿಸಲಿ. ಸರಕಾರದ ವಿವಿಧ ವಸತಿ ಯೋಜನೆಗಳು ಈ ಸಮುದಾಯಕ್ಕೆ ಆಧ್ಯತೆಯಲ್ಲಿ ಸಿಗುವಂತ ನಿಟ್ಟಿನಲ್ಲಿ ರಾಜ್ಯ ಸರಕಾರ ಗಮನಹರಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ಹಿನ್ನಲೆಯಲ್ಲಿ ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ಗುಲ್ವಾಡಿಯಲ್ಲಿ ದೌರ್ಜನ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಕೆಳಕಂಡ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.‌

ಸಂತೋಷ್ ಬಜಾಲ್ ಗೌರವ ಸಲಹೆಗಾರರು ಕರಾವಳಿ ವೃತ್ತಿನಿರತ ಅಲೆಮಾರಿ ( ಶಿಳ್ಳೆಕ್ಯಾತ ) ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಕವಿರಾಜ್ ಎಸ್ ಕಾಂಚನ್ ಗೌರವಾಧ್ಯಕ್ಷರು, ಶಂಕರ (ಅಧ್ಯಕ್ಷರು ಕರಾವಳಿ ವೃತ್ತಿನಿರತ ಅಲೆಮಾರಿ ( ಶಿಳ್ಳೆಕ್ಯಾತ ) ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ) ರಾಮ ( ಕಾರ್ಯದರ್ಶಿ ಕರಾವಳಿ ವೃತ್ತಿನಿರತ ಅಲೆಮಾರಿ ( ಶಿಳ್ಳೆಕ್ಯಾತ ) ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ)ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top