ಶಿಕ್ಷಕರಿಂದ ವಿದ್ಯಾರ್ಥಿನಿಯ ಅತ್ಯಾಚಾರ: ಮೂವರ ಬಂಧನ

Picture of RB NEWS

RB NEWS

Bureau Report

ಮಹದೇವಪುರ: ಶಿಕ್ಷಕರು ತಲೆ ತಗ್ಗಿಸುವ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿನಿಯೋರ್ವಳ ಮೇಲೆ ಆಕೆಯ ಉಪನ್ಯಾಸಕರು ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಕರಣ ಸಂಬಂಧ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಪನ್ಯಾಸಕ ನರೇಂದ್ರ, ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.

ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯೊಂದಿಗೆ ಹತ್ತಿರವಾಗಿದ್ದ. ಬಳಿಕ ಚಾಟ್ ಮಾಡುವುದು, ನೋಟ್ಸ್ ನೀಡುವುದು ಮಾಡುತ್ತಿದ್ದ. ಹಾಗೆಯೇ ಹಂತ ಹಂತವಾಗಿ ವಿದ್ಯಾರ್ಥಿನಿ ಜತೆ ಉಪನ್ಯಾಸಕ ಸಲುಗೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ಆಕೆ ಬೆಂಗಳೂರಿಗೆ ಹೋದ ನಂತರವೂ (ಪ್ರಸ್ತತ ಬೆಂಗಳೂರಿನಲ್ಲಿ ವ್ಯಾಸಂಗ) ಉಪನ್ಯಾಸಕ ಚಾಟ್ ಮಾಡುವುದು ಮುಂದುವರಿಸಿದ್ದ ಎಂದು ವರದಿ ತಿಳಿಸಿದೆ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿದೆ.

ಉಪನ್ಯಾಸಕನ ಕೃತ್ಯವನ್ನಿಟ್ಟುಕೊಂಡು ಮತ್ತೊಬ್ಬ ಉಪನ್ಯಾಸಕ ಬ್ಲ್ಯಾಕ್‌ಮೇಲ್, ರೇಪ್

ಉಪನ್ಯಾಸಕ ನರೇಂದ್ರ ದುಷ್ಕೃತ್ಯ ಎಸಗಿದ ಬಳಿಕ ಮತ್ತೊಬ್ಬ ಉಪನ್ಯಾಸಕ ಸಂದೀಪ್ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ಸಂದರ್ಭ ಆಕೆ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ. ಆಗ, ‘ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವಿಡಿಯೋ ತನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವೆ’ ಎಂದು ಸಂದೀಪ್‌ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ.

ವಿದ್ಯಾರ್ಥಿನಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ
ವಿದ್ಯಾರ್ಥಿನಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ ರೂಮ್ ಅನೂಪ್ ಎಂಬಾತನದ್ದಾಗಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ರೂಮ್‌ಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್‌ನಲ್ಲಿ ಸಿಸಿಟಿವಿ ಇದೆ’ ಎಂದು ಬೆದರಿಕೆ ಹಾಕಿ ಬಳಿಕ ಆತನಿಂದಲೂ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉಪನ್ಯಾಸಕರ ಕಾಮುಕತನ ಎದುರಿಸಲು ಸಾಧ್ಯವಾಗದೆ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಸಮಸ್ಯೆ ಹೆಚ್ಚಾಗಲು ಆರಂಭವಾದಾಗ ಕೃತ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.

ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಗೆ ಕೌನ್ಸೆಲಿಂಗ್‌ ಮಾಡಿ ಪೊಲೀಸರಿಗೆ ದೂರು ಕೊಡಿಸಿದ್ದಾರೆ.

ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top