ಕುಂದಾಪುರ: 8 ತಿಂಗಳ ಹಿಂದೆ ಚಿನ್ನದ ರಖಂ ವ್ಯಾಪಾರಿಯೊಬ್ಬರು ಕುಂದಾಪುರದ ಲಾಡ್ಜ್‌ನಲ್ಲಿ ತಂಗಿದ್ದ ವೇಳೆಗೆ ಅವರಲ್ಲಿದ್ದ 22.56 ಲಕ್ಷ ರೂ. ಮೌಲ್ಯದ 420 ಗ್ರಾಂ. ತೂಕದ ಚಿನ್ನಾಭರಣ ಕಳವುಗೈದ ಪ್ರಕರಣವನ್ನು ಕುಂದಾಪುರ ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರನ್ನು ಮುಂಬಯಿಯಲ್ಲಿ ರಾಜಸ್ಥಾನ ಮೂಲದ ರಾಮ್ ರಾಯ್ (21) ಹಾಗೂ ಪ್ರವೀಣ್ ಕುಮಾರ್ (25) ಎಂಬವರನ್ನು ಬಂಧಿಸಿ ಅವರಿಂದ ರೂ. 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿದ್ದಾರೆ.
ಮೊಹಮ್ಮದ್ ಶಾಹಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ ಜ್ಯುವೆಲರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಮೇಶ್ ಕುಮಾರ್ ಅವರು ಚಿನ್ನಾ ಭರಣ ಮಾರಾಟಕ್ಕೆಂದು 2023ರ ಜೂ. 10ರಂದು ಕುಂದಾಪುರ ಕಡೆಗೆ ಬಂದಿದ್ದರು. ಉಪ್ಪುಂದಕ್ಕೆ ತೆರಳಿ, ಅಲ್ಲಿಂದ ಸಂಜೆ ವಾಪಸಾಗಿ, ರಾತ್ರಿ ಕುಂದಾಪುರದ ಹೊಟೇಲೊಂದರ ಲಾಡ್ಜ್ ವೊಂದರಲ್ಲಿ ಸ್ನೇಹಿತ ರಾಜಸ್ಥಾನ ಮೂಲದ ರಾಮ್ ಎಂಬಾತನ ಜತೆ 421 ಗ್ರಾಂ. ತೂಕದ ಚಿನ್ನಾಭರಣವನ್ನು ಮಂಚದ ಕೆಳಗಿಟ್ಟು ಮಲಗಿದ್ದರು.
ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ನೋಡಿದಾಗ ರಾಮ್ ನಾಪತ್ತೆಯಾಗಿದ್ದನಲ್ಲದೇ, ಚಿನ್ನಾಭರಣದ ಬ್ಯಾಗ್ ಇರಲಿಲ್ಲ. ರೂಮ್ ಗೆ ಹೊರಗಿನಿಂದ ಬಾಗಿಲು ಹಾಕಲಾಗಿತ್ತು.
ಚಿನ್ನದ ಸಾನಿಯಾ ಬಾಲಿ 43 ಜತೆ (52 ಗ್ರಾಂ.), ಚಿನ್ನದ ಮೂಗುತಿ 153 ಫೀಸ್ (61 ಗ್ರಾಂ.), ಚಿನ್ನದ ಜೆ ಬಾಲಿ 44 ಫೀಸ್ (61 ಗ್ರಾಂ.), ಚಿನ್ನದ ಕಿವಿಯೋಲೆ-158 ಜತೆ (150 ಗ್ರಾಂ.), ಕಿವಿಯ ಚಿನ್ನದ ಟಾಪ್ಸ್ 60 ಜತೆ (81 ಗ್ರಾಂ.), 14 ಗ್ರಾಂ ಚಿನ್ನದ ಗಟ್ಟಿ ಸಹಿತ ಒಟ್ಟು 420 ಗ್ರಾಂ. ಚಿನ್ನಾಭರಣ ಕಳವಾಗಿತ್ತು.ಈ ಸಂಬಂಧ ಕುಂದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ 8 ತಿಂಗಳುಗಳಿಂದ ತನಿಖೆ ಮುಂದುವರಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಚರಣೆ ನಡೆಸಲಾಗಿತ್ತು.
ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಯು.ಬಿ.ನಂದಕುಮಾರ್ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ವಿನಯ ಎಂ. ಕೊರ್ಲಹಳ್ಳಿ, ಪ್ರಸಾದ ಕುಮಾರ್ ಕೆ., ಸಿಬ್ಬಂದಿಗಳಾದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿಯವರ ತಂಡ ನಿರಂತರ ಶ್ರಮಿಸಿದೆ.






































