
ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತ್ಯು
ಸರ್ಜನ್ ವರದಿಯಂತೆ ವೈದ್ಯರ ವಿರುದ್ಧ ಪ್ರಕರಣ ದಾಖಲು
ಕಾರ್ಕಳ, ಡಿ.30: ಆರು ತಿಂಗಳ ಹಿಂದೆ ಸಂಭವಿಸಿದ ವೈದ್ಯರ ನಿರ್ಲಕ್ಷ್ಯ ಘಟನೆಯ ಕುರಿತು ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಲ್ಲಿ ಕಾರ್ಕಳ ಸ್ಪಂದನಾ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಪರೀತ ಹೊಟ್ಟೆನೋವು ಕಾಣಿಸಿಕೊಂಡ ಕಾರಣಕ್ಕೆ ಝಬೇದಾ (52) ಎಂಬವರು ಮೇ 10ರಂದು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಡ್ರಿಪ್ಸ್ ಹಾಕಿದ್ದರು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಝುಬೇದಾರ ಪುತ್ರಿ ಮುಬೀನಾ ಕೇಳಿಕೊಂಡರು. ಬಳಿಕ ಬಂದ ಡಾ.ನಾಗರತ್ನಾ ಕೂಡಲೇ ಆಪರೇಷನ್ ಮಾಡಬೇಕು. ಝುಬೇದಾರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದ್ದರೆನ್ನಲಾಗಿದೆ.
ಬಳಿಕ ಅವರನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದು, ಡಾ.ನಾಗರತ್ನ, ಡಾ.ರಹತುಲ್ಲಾ ಹಾಗೂ ಡಾ.ತುಷಾರ ಥಿಯೇಟರ್ ಒಳಗಡೆ ಹೋಗಿದ್ದರು. ಬಳಿಕ ಹೊರ ಬಂದ ಡಾ.ರಹತುಲ್ಲಾ, ಝುಬೇದಾ ಮೃತಪಟ್ಟಿರುವುದಾಗಿ ತಿಳಿಸಿದ್ದರೆನ್ನಲಾಗಿದೆ.

ಝಬೇದಾರಿಗೆ ವೈದ್ಯಾಧಿಕಾರಿಯವರು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಹಾಗೂ ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷ್ಯತನದಿಂದ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ರಿ ಮುಬೀನಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






































