ವಿಶ್ವ ಹೃದಯ ದಿನಾಚರಣೆ – ಸೆಪ್ಟೆಂಬರ್ 29 ರಂದು ಹೃದಯಕ್ಕಾಗಿ ನಡಿಗೆ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟ್ರಾಕ್ಟ್ ಕ್ಲಬ್ ಶ್ರೀಭುವನೇಂದ್ರ ಕಾಲೇಜು ಜಂಟಿ ಆಶ್ರಯದಲ್ಲಿ ಕಾರ್ಕಳ ಟಿಎಮ್ಎ ಪೈ ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಸೆ.29ರಂದು ಕಾರ್ಕಳದಲ್ಲಿ ಹೃದಯಕ್ಕಾಗಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಶ್ವದ್ಯಾಂತ ಸೆಪ್ಟೆಂಬರ್ ತಿಂಗಳ ಕೊನೆಯ ರವಿವಾರ ಆಚರಿಸಲ್ಪಡುವ ಈ ಕಾರ್ಯಕ್ರಮದ ಅನ್ವಯ ಅಂದು ಬೆಳಗ್ಗೆ 7.30ಕ್ಕೆ ಕಾರ್ಕಳ ಅನಂತಶಯನ ವೃತ್ತದಲ್ಲಿ ಕಾರ್ಕಳದ ನಿವೃತ್ತ ಸಿ. ಎ ಕೆ.ಕಮಲಾಕ್ಷ ಕಾಮತ್ ಅವರು ಚಾಲನೆ ನೀಡಲಿದ್ದಾರೆ.
ಅಲ್ಲಿಂದ ಹೊರಟ ನಡಿಗೆ ಕಾರ್ಕಳ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಸಮೀಪದ ಡಾ. ಟಿಎಮ್ಎ ಪೈ ರೋಟರಿ ಆಸ್ಪತ್ರೆಯ ಬಳಿ ಸಂಪನ್ನಗೊಳ್ಳಲಿದೆ.
ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಜೊತೆಗೆ “ಇರುವುದೊಂದೇ ಹೃದಯ ಅದನ್ನು ರಕ್ಷಿಸಿ” ಎಂಬ ಕಿರು ಪ್ರಹಸನದ ಸ್ಪರ್ಧೆ ಆಯೋಜಿಸಲಾಗಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆಎಮ್ಸಿ ಮಂಗಳೂರು ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಇವರು ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಡಾ.ದಿತೇಶ್, ಹೃದ್ರೋಗ ತಜ್ಞರು, ಕೆಎಮ್ಸಿ ಮಂಗಳೂರು ಮತ್ತು ರೋಟರಿ ಮಾಜಿ ಜಿಲ್ಲಾ ಗವರ್ನರ್ ರೋ. ಡಾ.ಭರತೇಶ್ ಆದಿರಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

































