ವಿಶ್ವದ ಕಣ್ಣು ತೆರೆಸುವಂತೆ ಮಾಡಿದ ಭಾರತೀಯ ಸೈನಿಕರು : ಮುಖ್ಯಮಂತ್ರಿ ಸಿದ್ಧರಾಮಯ್ಯ
ಸಿಂಧೂರ ಇಟ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು: ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನ್ಯ ನಡೆಸಿದ ಯಶಸ್ವಿ ದಾಳಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಾತನಾಡಿ, ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ, ಆ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಭೂ ಬಿಡುತ್ತಿದ್ದ ಪಾಕಿಸ್ತಾನಕ್ಕೂ ನೀಡಿರುವ ಎಚ್ಚರಿಕೆಯಾಗಿದೆ.
ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.


























