ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ

Picture of RB NEWS

RB NEWS

Bureau Report

ಕಾರ್ಕಳ : ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ವಿರುದ್ದ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸಿಐಟಿಯುಗೆ ಸಂಯೋಜಿತಗೊಂಡಿರುವ ಕಟ್ಟಡ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಮಂಗಳೂರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.

ರಾಜ್ಯಾದ್ಯಂತ ಹೋರಾಟದ ಭಾಗವಾಗಿ 600ಕ್ಕೂ ಮಿಕ್ಕಿದ ಕಟ್ಟಡ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಶೈಕ್ಷಣಿಕ, ಮದುವೆ,ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆ ಯಾದ ಸಾವಿರಾರು ಅರ್ಜಿಗಳು ಇಂದಿಗೂ ಬಾಕಿಯಾಗಿದ್ದು, ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ.ಕಲ್ಯಾಣ ಮಂಡಳಿಯಲ್ಲಿದ್ದ ಸಾವಿರಾರು ಕೋಟಿ ಹಣವನ್ನು ಲ್ಯಾಪ್ ಟಾಪ್,ವೈದ್ಯಕೀಯ ತಪಾಸಣೆ,ಮಹಿಳೆಯರಿಗೆ ಪ್ಯಾಡ್ ಖರೀದಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ.ಮಾತ್ರವಲ್ಲದೆ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸುವ ಕೇಂದ್ರ ಸರಕಾರದ ಹುನ್ನಾರಕ್ಕೆ ಕಟ್ಟಡ ಕಾರ್ಮಿಕರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವುದು ತೀರಾ ಆತಂಕಕಾರಿಯಾಗಿದೆ* ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು ಮಾತನಾಡುತ್ತಾ, ರಾಜ್ಯ ಸರಕಾರದ ಮುಂದಿಟ್ಟಿರುವ 12 ಬೇಡಿಕೆಗಳ ಬಗ್ಗೆ ಸವಿವರವಾಗಿ ವಿವರಿಸುತ್ತಾ,ರಾಜ್ಯ ಸರಕಾರದ ಅನ್ಯಾಯಗಳ ಬಗ್ಗೆ ಬೆಳಕು ಚೆಲ್ಲಿದರು._

ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್,ಜಯಂತ ನಾಯಕ್ ರವರು ಮಾತನಾಡಿ ಕಟ್ಟಡ ಕಾರ್ಮಿಕರ ಬದುಕಿನ ಬವಣೆಯನ್ನು ವಿವರಿಸುತ್ತಾ ಸರಕಾರದ ನಡೆಯನ್ನು ಟೀಕಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಕಾರ್ಮಿಕ ಆಯುಕ್ತರು ಭೇಟಿಯಾಗಿ ಮನವಿಯನ್ನು ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು._

ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕರ ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ,ಜನಾರ್ದನ ಕುತ್ತಾರ್,ಚಂದ್ರಹಾಸ್ ಪಿಲಾರ್,ರೋಹಿದಾಸ್, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಶಂಕರ ವಾಲ್ಪಾಡಿ, ರಾಧಾ ಮೂಡಬಿದ್ರೆ, ಬಿಜು ಆಗಸ್ಟಿನ್,ವಿಶ್ವನಾಥ ಸುಳ್ಯ,ವಸಂತ ಪೇಳ್ತಡ್ಕ, ದಿನೇಶ್ ಶೆಟ್ಟಿ, ಪಾಂಡುರಂಗ ಕೊಂಚಾಡಿ,ಅಶೋಕ್ ಸಾಲ್ಯಾನ್,ಲೋಕೇಶ್ ಎಂ, ಪ್ರಮೀಳಾ ಸುಳ್ಯ,ಭಾರತಿ ಸುಳ್ಯ,ರಾಮಚಂದ್ರ ಪಜೀರ್, ಅಶೋಕ ಬಂಗೇರ, ಜಯಶೀಲ ಮುಂತಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top