ರಾಯಚೂರು: ವಿವಾಹಿತ ಮಹಿಳೆಯೊಬ್ಬರಿಗೆ ಮೆಸೇಜ್ ಕಳುಹಿಸಿದ ಯುವಕನೊಬ್ಬ ಬರ್ಬರ ರೀತಿಯಲ್ಲಿ ಕೊಲೆಗೀಡಾದ ಘಟನೆ ರಾಯಚೂರು ಎಂಬಲ್ಲಿ ನಡೆದಿದೆ.
ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿರುವ ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಯುವಕ ಮೆಸೇಜ್ ಮಾಡಿದ್ದಕ್ಕೆ ಹತ್ಯೆ ನಡೆದಿದೆ ಎನ್ನಲಾಗಿದೆ.
ಖಾದರ್ ಭಾಷಾ (28) ಕೊಲೆಯಾದವನು.
ಮಾರುತಿ ಆರೋಪಿಯಾಗಿದ್ದಾನೆ.
ಪತ್ನಿ ಮೇಲೆ ಕಣ್ಣು ಹಾಕಿದ ಖಾದರ್ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಹನುಮ ಜಯಂತಿ ದಿನದಂದೆ ಬರ್ಬರವಾಗಿ ಕೊಲೆಗೈಯಲಾಗಿದೆ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಮಾರುತಿ ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ.
ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಖಾದರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.





































