ವಿಪರೀತ ಜಡಿಮಳೆಯ ನಡುವೆಯಲ್ಲಿ ರೈತರ ಬೃಹತ್ ಪ್ರತಿಭಟನ ಸಭೆ
ಮೂಡುಬಿದಿರೆ : ಜನಪ್ರತಿನಿಧಿಗಳು ರೈತರ ಪರವಾಗಿ ಧ್ವನಿ ಎತ್ತಬೇಕು. ರೈತ, ಸಾಲ ಮಾಡಿ ಬಹಳ ಕಷ್ಟದಿಂದ ಕೃಷಿ ಮಾಡಿ ತನ್ನ ಸಾವಯವ ಭೂಮಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ರೈತ ದೇಶದ ಬೆನ್ನೆಲುಬು ಎಂದು ಕರೆ ಕೊಡುವ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಕಚೇರಿಯನ್ನು ಬಿಟ್ಟು ತಾವು ಉಣ್ಣುವ ರೈತನ ಅನ್ನವನ್ನು ಬೆಳೆಯುವ ಗದ್ದೆಯನ್ನು, ತೋಟವನ್ನು ಉಳಿಸಲು ರೈತರೊಂದಿಗೆ ಕೈಜೋಡಿಸಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಹೇಳಿದರು.




ಇಲ್ಲಿಗೆ ಸಮೀಪದ ಎಡಪದವು ಬೈತರೆಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಾಲಯದ ಎದುರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರುಗಳು ಸೇರಿ ಬೃಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರ ಇದೆ ಆದರೆ ರೈತರಿಗೆ ಮಾರಕವಾಗಬಾರದು ಎಂದರು.
ಮಾತೃಭೂಮಿ ಹೋರಾಟ ಸಂರಕ್ಷಣಾ ಸಮಿತಿಯ ಅಲೋನ್ಸ್ ಡಿಸೋಜಾ ನಿದ್ದೋಡಿ, ದಯಾನಂದ ಶೆಟ್ಟಿ, ಮಿಜಾರು ಗುತ್ತು ಶ್ರೀಧರ ಶೆಟ್ಟಿ, ಐಕಳ ಏಳಿಂಜೆ ಸುಕೇಶ್ ಚಂದ್ರ ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ರಮೇಶ್, ದಕ್ಷಿಣ ಕನ್ನಡ ಜಿಲ್ಲಾ ಎಂಪಿ ಅಭ್ಯರ್ಥಿಯಾಗಿದ್ದ ನಿತಿನ್ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗಡೆ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ರೈತ ಸಂಘದ ಧನ ಕೀರ್ತಿ ಬಲಿಪ, ರಾಜಕಾರಣಿಗಳಾದ ಸುರೇಶ್ ಬಲ್ಲಾಳ್, ಕೃಷ್ಣ ಅಮೀನ್ ಇತ್ಯಾದಿಯರು ತಮ್ಮೆಲ್ಲರ ಬೆಂಬಲವನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದರು.
ಮುಂದಿನ ದಿನಗಳಲ್ಲಿ ಇದುವರೆಗಿನ ಶಾಂತಿಯುತ ಹೋರಾಟಕ್ಕೆ ಬದಲಾಗಿ ರಸ್ತೆ ತಡೆ, ರೈತರ ಭೂಮಿಗೆ ಅನಧಿಕೃತವಾಗಿ ಪ್ರವೇಶಿಸುವ ಯಾವುದೇ ಅಧಿಕಾರಿಗಳನ್ನು ಕಟ್ಟಿಹಾಕಲು, ಇತ್ಯಾದಿ ವಿವಿಧ ರೀತಿಯಲ್ಲಿ ಉಗ್ರ ಪ್ರತಿಭಟನೆಗೆ ಪ್ರಾರಂಭಿಸಲಾಗುವುದು ಎಂದು ಹಾಜರಿದ್ದ ಎಲ್ಲರೂ ಒಕ್ಕೊರಲಿನಿಂದ ಘೋಷಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.




































