ಕಡಬ: ವಿದ್ಯಾರ್ಥಿನಿಯರ ಮೇಲೆ ಕಾಲೇಜು ಆವರಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ.4ರ ಸೋಮವಾರದಂದು ಬೆಳಗ್ಗೆ ನಡೆದಿದೆ. ದಾಳಿಗೊಳಗಾದ ವಿದ್ಯಾರ್ಥಿನಿಯರನ್ನು ಅಲಿನ ಸಿಬಿ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಯುವಕ ಮುಸುಕಧಾರಿಯಾಗಿದ್ದು, ತಕ್ಷಣ ಎಚ್ಚೆತ್ತ ಕಾಲೇಜು ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇರಳ ಮೂಲದ ಅಬೀನ್ (23) ಎಂಬಾತ ಕೃತ್ಯ ಎಸಗಿರುವ ವ್ಯಕ್ತಿಯಾಗಿದ್ದು, ಆತನನ್ನು ಪೊಲೀಸರು ತೀವ್ರತರದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.




























