ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ಖಂಡನೀಯ: ಉದಯ ಶೆಟ್ಟಿ ಮುನಿಯಾಲು
RB NEWS
Bureau Report
ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ಖಂಡನೀಯ: ಉದಯ ಶೆಟ್ಟಿ ಮುನಿಯಾಲು
ಕಾರ್ಕಳ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಆಡಳಿತವು ಬಲಪ್ರಯೋಗ ನಡೆಸಿರುವುದು ಖಂಡನೀಯ ಎಂದು ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸಂಕಷ್ಟಕ್ಕೀಡಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ನ್ಯಾಯ ಕೋರಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಬಲಪ್ರಯೋಗ ಮಾಡಿರುವುದು ಅತ್ಯಂತ ಅಘಾತಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. “ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಶಾಕಿರಣಗಳಾಗಿದ್ದು, ಅವರು ಯಾವುದೇ ರಾಜಕೀಯ ಅಧಿಕಾರವನ್ನು ಕೇಳುವುದಿಲ್ಲ. ತಮ್ಮ ಪರಿಶ್ರಮಕ್ಕೆ ತಕ್ಕ ನ್ಯಾಯ ದೊರಕಬೇಕು ಎಂಬ ನ್ಯಾಯಸಮ್ಮತ ಬೇಡಿಕೆಯನ್ನು ಮಾತ್ರ ಮುಂದಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಅವರ ಧ್ವನಿಯನ್ನು ಆಲಿಸುವ ಬದಲು ಬಲಪ್ರಯೋಗಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು. ಆಡಳಿತವು ಜನರ ಭಾವನೆಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು. ವೈಫಲ್ಯಗಳ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಅಪಾಯಕಾರಿ ಪ್ರವೃತ್ತಿ ಎಂದು ಅವರು ಟೀಕಿಸಿದರು. ಮುಗ್ಧ ವಿದ್ಯಾರ್ಥಿಗಳನ್ನು ರಾಜಕೀಯ ಕಾರಣಗಳಿಗೆ ದೇಶದ್ರೋಹಿಗಳೆಂದು ಕರೆಯುವುದು ದೇಶದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಹೇಳಿದರು. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ನೀಡಿದೆ. ಆದ್ದರಿಂದ ಇಂತಹ ಪ್ರತಿಭಟನೆಗಳ ಮೇಲೆ ಬಲಪ್ರಯೋಗ ನಡೆಸುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ತನ್ನ ಹಠವನ್ನು ಬದಿಗೊತ್ತಿ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ, ಅವರ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉದಯ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.