ವಾರ ಭವಿಷ್ಯ ದಿನಾಂಕ 28. 09. 2025 ರಿಂದ 04.10.2025 ರ ವರೆಗೆ
ವಿಶೇಷ ದಿನಗಳು :
01.10.2025……..ಮಹಾ ನವಮಿ ,ಆಯುಧ ಪೂಜೆ
02.10.2025……..ತುಲಾ ರಾಶಿಗೆ ಬುಧ ಗ್ರಹ ಪ್ರವೇಶ, ವಿಜಯ ದಶಮಿ, ಮಧ್ವ ಜಯಂತೀ
ಮೇಷ : ಲಾಭ ಕ್ಷೇತ್ರದಲ್ಲಿ ರಾಹು ಇರುವುದರಿಂದ ಬರುವ ಆದಾಯಕ್ಕೆ ಯಾವುದೇ ಕೊರತೆ
ಇರುವುದಿಲ್ಲ.ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗ ಪ್ರಾಪ್ತಿ ಯೋಗವಿದೆ. ಹಿರಿಯರ ಅನಿವಂಶಿಕ ವಸ್ತುಗಳು ನಿಮಗೆ ದೊರಕುವ ಅವಕಾಶಗಳು ಇರುತ್ತವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿ ಬರಲಿದೆ.ಸಾಡೇ ಸಾತ್ ಶನಿಯ ಪ್ರಭಾವದಿಂದಾಗಿ ಹಣದ ವ್ಯವಹಾರದಲ್ಲಿ ,ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಬೇಕು. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯವಿದೆ. ವಿಷ್ಣು ಸಹಸ್ರನಾಮ ಪಾರಾಯಣ ನಿತ್ಯವೂ ಮಾಡುವ ಅಗತ್ಯವಿದೆ.
ವೃಷಭ : ಹಲವು ಅಡೆ ತಡೆಗಳಿದ್ದರೂ ಎಲ್ಲವೂ ಹಂತ ಹಂತವಾಗಿ ಮಾಯವಾಗಿ ಹೋಗಲಿದೆ. ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ. ಹಣ ಖರ್ಚು ಹೆಚ್ಚಾದರೂ ಅದು ಪುಣ್ಯ ಲಾಭಕ್ಕಾಗಿಯೇ ಇರುತ್ತದೆ.ಪತ್ನಿಯ ಆರೋಗ್ಯದ ಕಡೆಗೆ ಗಮನವಿರಲಿ. ದುರ್ಗಾ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಹಣ ಹೂಡಿಕೆಗೆ ಹಿರಿಯರ ಸಲಹೆ ಅಗತ್ಯವಿರುತ್ತದೆ. ಸ್ವಂತ ಉದ್ಧಿಮೆ ಆರಂಭಿಸಿದರೆ ಅಧಿಕ ಲಾಭ ಗಳಿಸುವಿರಿ. ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಬಾಧಿಸಬಹುದು.
ಮಿಥುನ : ಶುಭಾ ಅಶುಭ ಫಲಗಳು ಮಿಶ್ರವಾಗಿ ಬರಲಿದೆ. ಶ್ರೀ ಗಣಪತಿ ಅಥರ್ವ ಶೀರ್ಷ ಪಾರಾಯಣ ಅಗತ್ಯವಿದೆ. ಸ್ವಕೀಯರಿಂದ ,ಪರಕೀಯರಿಂದ ನೆರವು ಸಿಗಲಿದೆ. ವ್ಯಾಪಾರ,ವ್ಯವಹಾರಗಳಲ್ಲಿ ಅಧಿಕ ಧನ ಆದಾಯವನ್ನು ಹೊಂದುವಿರಿ. ಮನೆಯಲ್ಲಿ ಶುಭ ಮಂಗಳ ಕೆಲಸಗಳು ನಡೆಯಲಿವೆ ,ಅನೇಕ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಒದಗಿ ಬರಲಿದೆ. ವಿದೇಶ ಪ್ರಯಾಣ ಯೋಗ ಬರಲಿದೆ. ಕ್ರಿಯಾ ಶೀಲ ಪ್ರಯತ್ನಗಳಿಂದ ಇಷ್ಟ ಸಾಧನೆ ಮಾಡಿ ಕೊಳ್ಳುವಿರಿ.
ಕರ್ಕಾಟಕ : ರಾಹುವಿನ ದೋಷಕ್ಕೆ ನಾಗ ದೇವರ ಯಥಾ ಶಕ್ತಿ ಸೇವೆ ಅಗತ್ಯವಿದೆ. ಚಿಂತೆಯಿಂದ ಹೊರಗೆ ಬನ್ನಿರಿ. ಮುಖ್ಯವಾಗಿ ಹಿರಿಯರ ಸಲಹೆಗಳಿಗೆ ಕಿವಿಗೊಡಿರಿ. ಸಾಂಸಾರಿಕವಾಗಿ ಆಗಾಗ ಮನಸ್ತಾಪ ಆಕ್ಷೇಪಗಳು ಬರುತ್ತಲಿರುತ್ತದೆ.ಆಗಾಗ ತೋರಿಬರುವ ಕಾರ್ಯ ಸಾಧನೆಯ ಅಡ್ಡಿಯನ್ನು ಪ್ರಯತ್ನಬಲದಿಂದ ನಿವಾರಿಸಿಕೊಳ್ಳುವುದು ಉತ್ತಮ. ಕಾರ್ಯ ನಿಮಿತ್ತ ಪ್ರಯಾಣ ಹೆಚ್ಚಲಿದೆ. ನಿಮ್ಮ ಸ್ವಭಾವವನ್ನು ಕಾಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳುವುದು ಅಗತ್ಯವಿರುತ್ತದೆ.
ಸಿಂಹ : ನಾನಾ ರೀತಿಯ ಕೆಲಸ ಕಾರ್ಯಗಳು ಪೂರ್ಣತೆಯನ್ನು ಪಡೆಯಲಿವೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆಗಳು ಕಂಡು ಬರುವುದಿಲ್ಲ.ಗುರುವಿನ ಅನುಗ್ರಹ ಉತ್ತಮವಾಗಿದೆ. ಸಂಗಾತಿಯ ಮಾತುಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಗೆಳೆಯರಲ್ಲಿ ವಿರಸ ಬರುವ ಸಾಧ್ಯತೆಯನ್ನು ಶನಿ ತಿಳಿಸುತ್ತಿದ್ದಾನೆ . ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳು ಬೈಕ್, ಮೊಬೈಲ್ ,ಪ್ರೀತಿ ,ಪ್ರೇಮದಿಂದ ದೂರವಿದ್ದರೆ ಒಳ್ಳೆಯದು.ಶಿವ ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಕನ್ಯಾ : ದೈವಾನುಗ್ರಹದ ಪ್ರಭಾವದಿಂದಾಗಿ ಶನಿಯ ಸಪ್ತಮ ಸ್ಥಾನದ ದೋಷ ಕಡಿಮೆಯಾಗುವ ಕಾಲ ಬರುತ್ತಿದೆ.ವ್ಯಾಪಾರ ವ್ಯವಹಾರಗಳೂ ಒಳ್ಳೆಯ ರೀತಿಯಲ್ಲಿ ನಡೆಯಲಿದೆ. ಆರ್ಥಿಕ ಸ್ಟಿತಿಯಲ್ಲಿ ಹೆಚ್ಚಿನ ಸಮಾಧಾನವೆನ್ನಿಸುವುದು. ನೀವು ಕೈಗೊಳ್ಳುವ ವ್ಯವಹಾರಗಳು ಯಶಸ್ವಿಯಾಗಲಿವೆ. ದೂರ ಪ್ರವಾಸ, ತೀರ್ಥ ಕ್ಷೇತ್ರ ದರ್ಶನ ಮಾಡಲಿದ್ದೀರಿ. ಶುಭ ಮಂಗಳ ಕಾರ್ಯಗಳು ನಿಮ್ಮ ಇಚ್ಚೆಯ ರೂಪದಲ್ಲಿ ನಡೆಯಲಿದೆ. ಅನ್ಯರ ಮಾತಿಗೆ ಮರುಳಾಗಲು ಹೋಗಬೇಡಿರಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕಾದ ಅಗತ್ಯವಿದೆ.
ತುಲಾ : ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ದುಡಿಮೆ ಅಗತ್ಯವಿದೆ. ಶುಕ್ರ ಮತ್ತು ಕೇತು ಲಾಭ ಕ್ಷೇತ್ರದಲ್ಲಿ ಇದ್ದು ಆರ್ಥಿಕವಾಗಿ ಹೆಚ್ಚಿನ ಬೆಳವಣಿಗೆಯನ್ನು ಹೊಂದುವಿರಿ. ಬೆಲೆ ಬಾಳುವ ವಸ್ತುಗಳು ಮನೆಗೆ ಬರಲಿವೆ. ನಿಮ್ಮ ಮಾತಿನಲ್ಲಿ ನಯ ವಿನಯತೆಯಿರಲಿ. ಪಾಲುಗಾರಿಕೆ ವ್ಯವಹಾರದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ನಿಮ್ಮ ಕಾಳಜಿ ಇರಲಿ. ಜಮೀನಿನ ಸಮಸ್ಯೆ ಬಗೆಹರಿಯಲಿದೆ. ಹಿರಿಯರ ಮಾತಿಗೆ ಮನ್ನಣೆ ಕೊಡುವುದು ಅತೀ ಅಗತ್ಯವಾಗಿದೆ.
ವೃಶ್ಚಿಕ : ಆರ್ಥಿಕ ಸ್ಥಿತಿಯು ಅತೀ ವೇಗವಾಗಿ ಸುಧಾರಣೆ ಆಗುತ್ತಿದ್ದು ಸಾಲ ಬಾಧೆಯಿಂದ
ಮುಕ್ತರಾಗುವಿರಿ. ರಾಹು ಮತ್ತು ಶನಿಗೆ ಯಥಾ ಶಕ್ತಿ ಪರಿಹಾರ ಮಾಡಿಕೊಳ್ಳಿರಿ. ಆರೋಗ್ಯದಲ್ಲಿ ತಪಾಸಣೆ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕ ವಲಯದಲ್ಲಿ ಮನ್ನಣೆ ಸಿಗಲಿದೆ. ಸರಕಾರಿ ಉದ್ಯೋಗಿಗಳ ತುಟ್ಟಿಬತ್ತೆ ಹೆಚ್ಚಾಗಲಿದೆ. ನಿಮ್ಮ ಮನೆಗೆ ಆಪ್ತೇಷ್ಟರಆಗಮನವಾಗಲಿದ್ದು ಮನಸ್ಸಿಗೆ ಖುಷಿಯಾಗಲಿದೆ. ಎಲ್ಲಿಯೂ ಆತುರತೆ ಬೇಡ.
ಧನು : ಈ ವಾರ ಕೊಂಚ ಆಶಾದಾಯಕವಾದ ವಾರವಾಗಿದೆ. ಕುಜ ಮತ್ತು ಬುಧ ಲಾಭ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ .ಭೂಮಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯ ಬರಲಿದೆ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲಿದ್ದಾರೆ. ವೃತ್ತಿ ಕ್ಷೇತ್ರದಲ್ಲಿ ಚೇತರಿಕೆಯ ದಿನಗಳಾಗಿ ಸ್ಥಾನ ಮಾನ ದೊರೆತು ನೆಮ್ಮದಿ ದೊರೆಯಲಿದೆ. ಕಾಲೋಚಿತವಾದ ನಡೆ ನುಡಿ ಅವಶ್ಯವಾಗಿದೆ. ನೌಕರರಿಗೆ ವರ್ಗಾವಣೆಯ ಸೂಚನೆ ಇರುತ್ತದೆ. ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕಾದ ಅಗತ್ಯವಿದೆ.
ಮಕರ : ನಿಶ್ಚಿತ ಗುರಿಯತ್ತ ಸಾಗುವಲ್ಲಿ ಆಗಾಗ ಅಡಚಣೆ ,ತಾಪತ್ರಯಗಳು ಇದ್ದರೂ ,ನಿಮ್ಮ ಚುರುಕುತನ, ಕ್ರಿಯಾಶೀಲತೆ ,ದಕ್ಷತೆ ನಿಮ್ಮನ್ನು ಯಶಸ್ಸಿನತ್ತ ಒಯ್ಯಲಿದೆ. ಕಳೆದುದನ್ನು ಪುನ: ಗಳಿಸುವ ದಿನವಿದು. ಸಂಚಾರದಲ್ಲಿ ನೀವು ತುಂಬಾ ಜಾಗ್ರತೆ ವಹಿಸಬೇಕು. ಅನ್ಯ ಮಹಿಳೆಯರ ಜೊತೆ ಎಚ್ಚರದಿಂದ ವರ್ತಿಸಬೇಕು.ಅಷ್ಟಮದಲ್ಲಿ ಶುಕ್ರ ಮತ್ತು ಕೇತು ಇರುವುದರಿಂದ ಅಪವಾದಗಳು ಬರುವ ಸಾಧ್ಯತೆ ಇರುತ್ತದೆ. ಮಧು ಮೇಹ ಇರುವವರು ಎಚ್ಚರವಿರಬೇಕು.
ಕುಂಭ : ಅವಿರತೆ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಪರಿಣಾಮವನ್ನು ಬೀರಲಿದೆ.ಸಾಡೇ ಸಾತ್ ಶನಿ ತನ್ನ ಪ್ರಭಾವವನ್ನು ತೋರಿಸಲಿದ್ದಾನೆ. ನಿಮ್ಮ ಮೇಲಿರುವ ನ್ಯಾಯಾಲಯದ ಕೇಸ್ ಮತ್ತೆ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ನಂಬಿ ಕೊಂಡು ಬಂದಿರುವ ದೇವಿಯ ರಕ್ಷಣೆ ನಿಮಗಿರುವುದರಿಂದ ನಿಮಗೆ ತೊಂದರೆಯಾಗಲಾರದು. ಅನಿರೀಕ್ಷಿತವಾದ ರೀತಿಯಲ್ಲಿ ಕೆಲವೊಂದು ಕೆಲಸಗಳು ನಡೆದು ಅಚ್ಚರಿಯನ್ನು ಮೂಡಿಸಲಿದೆ.ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕಾದ ಅವಶ್ಯಕತೆ ಇರುತ್ತದೆ.
ಮೀನ : ರಾಹು ವ್ಯಯದಲ್ಲಿ, ಶನಿ ಜನ್ಮ ರಾಶಿಯಲ್ಲಿ ,ಅಷ್ಟಮದಲ್ಲಿ ಕುಜ ಮತ್ತು ಬುಧ, ಇರುವುದು ನಿಮ್ಮ ವ್ಯವಹಾರದಲ್ಲಿ ಪ್ರಸ್ತುತ ಕಿರಿಕಿರಿಯನ್ನು ಉಂಟು ಮಾಡಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನೆಡೆಯನ್ನು ತರಬಹುದು. ಆರೋಗ್ಯದಲ್ಲಿ ವ್ಯತ್ಯಾಸವನ್ನು ತರಬಹುದು. 60+ಆಗಿರುವವರು ಬಿಪಿ ಪರೀಕ್ಷೆ ಅಗತ್ಯವಾಗಿ ಮಾಡಿಸಿಕೊಳ್ಳಿರಿ. ಮಧು ಮೇಹದ ಲಕ್ಷಣಗಳೂ ಕಂಡು ಬರಲಿದೆ. ಮನೆ,ವಾಹನ ಭೂಮಿ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ . ನರಸಿಂಹ ದೇವರ ಪಾರಾಯಣ ನಿಮಗೆ ಅಗತ್ಯವಾಗಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ತಿಳಿಸಲಾಗುವುದು.


























