



ವಾರ ಭವಿಷ್ಯ ದಿನಾಂಕ 15.12.2024 ರಿಂದ 21.12.2024 ರ ವರೆಗೆ
ವಿಶೇಷ ದಿನಗಳು : 15.12.2024……..ಧನು ಸಂಕ್ರಮಣ ,ಹುಣ್ಣಿಮೆ
18.12.2024…….ಸಂಕಷ್ಟಹರ ಚತುರ್ಥಿ
ಮೇಷ : ಕುಜ ರಾಶ್ಯಾಧಿಪತಿ ವಕ್ರಿಯಾಗಿದ್ದಾನೆ. ರವಿ ಧನು ರಾಶಿಗೆ ಹೆಜ್ಜೆ ಇಡುತ್ತಿದ್ದಾನೆ. ಕೆಲವೊಂದು ಒಳ್ಳೆಯ ಬದಲಾವಣೆಗಳನ್ನುಕಾಣಲಿದ್ದೀರಿ. ತಂದೆ,ತಾಯಿಯವರ ಮೇಲೆ ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವಿರಿ. “ಅಹಂ “ ನಿಂದ ಹೊರಗೆ ಬನ್ನಿರಿ. ಮಾತಾಡುವುದನ್ನು ನಿಲ್ಲಿಸುವುದು ಒಳ್ಳೆಯ ಲಕ್ಷಣವಲ್ಲ. ಗುರು ದ್ವಿತೀಯದಲ್ಲಿ ಇದ್ದರೂ ಅವನಿರುವುದು ವೈರಿಯ ಮನೆಯಲ್ಲಿ.ನಿಮ್ಮ ಕಾರ್ಯ ಕ್ಷೇತ್ರದಲ್ಲಿ,ವ್ಯವಹಾರದಲ್ಲಿ ಅಡ್ಡಿ ಆತಂಕಗಳು ಇರುತ್ತವೆ. ಉದ್ಯೋಗ ಮಾಡುವಲ್ಲಿಮೇಲಧಿಕಾರಿಗಳ ಜೊತೆಗೆ ಹೊಂದಿಕೊಂಡು ಹೋಗುವುದನ್ನುಕಲಿಯಿರಿ. ತಾಳ್ಮೆ ಅತೀ ಅಗತ್ಯ.ನಿಮಗೆ ಭಡ್ತಿ, ಸಿಗುವ ಸಾಧ್ಯತೆ ಇದೆ. ರವಿ ತನ್ನ ಮಿತ್ರ ಗುರುವಿನ ಮನೆಗೆ ಬಂದಿರುವುದು. ಚಿಂತೆ ಮಾಡುವುದನ್ನು ನಿಲ್ಲಿಸಿ .
ವೃಷಭ : ಜನ್ಮ ರಾಶಿಯಲ್ಲಿ ಗುರು ಇದ್ದಾನೆ. ಕುಜನ ಪ್ರಭಾವ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀಳಲಿದೆ. ಮಾತಿನ ಶೈಲಿ ಹಿತಮಿತವಾಗಿರಲಿ. ರವಿಯ ಧನು ರಾಶಿಯ ಸಂಚಾರ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀಳಲಿದೆ. ಉಸಿರಾಟದ ಸಮಸ್ಯೆ ಇದ್ದಲ್ಲಿ ವೈದ್ಯರಲ್ಲಿ ಪರಿಶೀಲನೆ ಮಾಡಿಸಿರಿ. ಮದ್ಯ ಸೇವನೆ ಆರಂಬಿಸುವ ಸಾಧ್ಯತೆ ಇದೆ. ಉದ್ಯೋಗ ವ್ಯವಹಾರಗಳು ಪ್ರಗತಿ ಗತಿಯಲ್ಲಿ ಸಾಗಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಸದಾ ನಿಮ್ಮನ್ನು ಧೈರ್ಯದ ಹಾದಿಯಲ್ಲಿ ನಡೆಸಲಿದೆ. ಕೇತುವಿನ ಪ್ರತಿಕೂಲತೆ ಆಗಾಗ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಲಿದೆ. ಖರ್ಚು-ವೆಚ್ಚಗಳ ಬಗ್ಗೆ ಹಿಡಿತವಿರಲಿ. ಸಮಾಜದಲ್ಲಿ ಸ್ಥಾನ ಮಾನ ಸಿಗಲಿದೆ .
ಮಿಥುನ : ಕುಜನ ದೃಷ್ಟಿ ನಿಮ್ಮ ರಾಶಿಯ ಮೇಲಿದೆ. ನಿಮ್ಮ ಪರವಾಗಿ ನಿಂತಿರುವ ರವಿ ಬುಧರು ಇದ್ದಾರೆ. ಕೆಲವೊಂದು ಒಳ್ಳೆಯ ಬದಲಾವಣೆಗಳನ್ನು ನೀವು ಗಮನಿಸಲಿದ್ದೀರಿ. ರಾಜಕೀಯ ವ್ಯಕ್ತಿಗಳೇ ನಿಮಗೆ ಈವಾರ ಶುಭೋದಯದ ಕಾಲವಾಗಿದೆ. ಮಕ್ಕಳಲ್ಲಿ ಮೃಧು ಧೋರಣೆ ತೋರಿಸಿರಿ. ಕೋರ್ಟ್ –ಕಚೇರಿ ಕೆಲಸಗಳಲ್ಲಿ ಅನಾವಶ್ಯಕ ಅಡ್ಡಿ ಆತಂಕಗಳು ತೋರಿಬರಲಿವೆ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಅಭಿಪ್ರಾಯ ಭೇಧಗಳಿಂದಾಗಿ ಮನಸ್ತಾಪ ಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ನಿತ್ಯವೂ ಮಾಡುವುದರಿಂದ ಅನೇಕ ಸಮಸ್ಯೆಗಳಿಂದ ಹೊರಬರುವಿರಿ. ಅನ್ಯ ಮಹಿಳೆಯರಿಂದ ಅಂತರವನ್ನು ಇಟ್ಟುಕೊಳ್ಳಿರಿ.
ಕರ್ಕಾಟಕ : ವಕ್ರಿ ಕುಜ ಶನಿಯ ದೋಷದ ತೀವ್ರತೆಯನ್ನು ಕಡಿಮೆ ಮಾಡಿದ್ದಾನೆ. ಅನಾರೋಗ್ಯವು ಸ್ವಲ್ಪ ಮಟ್ಟಿಗೆ ಹಿಡಿತಕ್ಕೆ ಬರಲಿದೆ. ಸತತವಾಗಿ ಬರುತ್ತಿರುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ. ದೇವರ ಅನುಗ್ರಹ ಉತ್ತಮವಾಗಿದೆ.ವ್ಯಾಪಾರ,ವ್ಯವಹಾರ ಮಾಡುತ್ತಿರುವ ಯಾವುದೇ ಉದ್ಯೋಗದಲ್ಲಿ ಚೇತರಿಕೆಯನ್ನು ಕಾಣುವಿರಿ. ದುರ್ಗೆಯ ಪಾರಾಯಣ +ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ. ಸತಿ-ಪತಿ ಹೊಂದಾಣಿಕೆಯಿಂದ ಮುಂದುವರಿಯಿರಿ. ಶುಕ್ರ ಶನಿ ಮಿತ್ರರಾಗಿದ್ದಾರೆ. ಬೆಲೆಬಾಳುವ ವಸ್ತುಗಳು ಮನೆಯನ್ನು ಅಲಂಕಾರ ಮಾಡಲಿವೆ. ನಿರುದ್ಯೋಗಿಗಳಿಗೆ ಅವಕಾಶ ಒದಗಿ ಬರಲಿದೆ. ಸಿಕ್ಕಿದ ಅವಕಾಶವನ್ನು ಒಮ್ಮೆಗೆ ಉಪಯೋಗಿಸಿಕೊಳ್ಳಿರಿ.
ಸಿಂಹ : ಕುಜನ ಅನುಗ್ರಹ ಮತ್ತೊಮ್ಮೆ ನಿಮಗೆ ಒದಗಿ ಬಂದಿದೆ. ನಿಮ್ಮ ಕನಸಿನ ಮನೆಯ ಕೆಲಸ ಮುಂದುವರಿಯುತ್ತಿದೆ.ಸರಕಾರದಿಂದ ಬರಬೇಕಾದ ಸವಲತ್ತುಗಳು ಒದಗಿಬರಲಿವೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಸಂಚಿಗೆ ಒಳಗಾಗಬೇಡಿರಿ. ನಿಮ್ಮ ಪಾಲುದಾರನ ಮೇಲೆ ಪೂರ್ಣ ಜವಾಬ್ದಾರಿ ಕೊಡಲು ಹೋಗಬೇಡಿರಿ. ಅಷ್ಟಮದ ರಾಹುವಿಗೆ ನಾಗದೇವರ ಯಥಾ ಶಕ್ತಿ ಸೇವೆ ಮಾಡುವ ಅಗತ್ಯವಿದೆ. ಮೇಲಧಿಕಾರಿಗಳ ಮಾತಿಗೆ ವಿರುದ್ಧ ಮಾತನಾಡಲು ಹೋಗಬೇಡಿರಿ. ಬ್ರಿಟಿಷರು ನಮಗೆ ಬಿಟ್ಟುಹೋಗಿರುವ ಮೂರು ಶಬ್ಧಗಳು ಸದಾ ನಿಮ್ಮ ಜೊತೆಯಿರಲಿ ….”ಸಾರೀ ,,ಕ್ಷಮಿಸಿ ,ಆಗಬಹುದು “ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಮುಂದೆ ಬರುವ ಅಷ್ಟಮದ ಶನಿಯ ತೀವ್ರತೆಯನ್ನು ಈಗದಿಂದಲೇ ಕಡಿಮೆ ಮಾಡಿಕೊಳ್ಳಿರಿ.
ಕನ್ಯಾ : ರವಿ ಧನು ರಾಶಿಗೆ ಬಂದಿರುವುದರಿಂದ ,ಅವನು ವ್ಯಯಾಧಿಪತಿಯಾಗಿರುವುದರಿಂದ ಮನೆಯ ಬದಲಾವಣೆ ,ವ್ಯರ್ಥ ಖರ್ಚು ಬರುವ ಸಾಧ್ಯತೆ ,ಆರೋಗ್ಯದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.ವಿದೇಶ ,ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇರುವ ತಿಂಗಳಾಗಿದೆ. ನಿಮ ಹಿರಿಯರ ಬಗ್ಗೆ ಗಮನವಿರಲಿ. ರಾಹು ಕೇತು ಗ್ರಹರ ಪ್ರತಿಕೂಲತೆ ಇರುತ್ತದೆ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಪ್ರಬಲ ವಿರೋಧಿಗಳ ಕಿರಿಕಿರಿ ಇರುತ್ತದೆ. ಕುಟುಂಬದಲ್ಲಿಯೂ ವಾದ-ವಿವಾದ ಇರುವುದರಿಂದ ಮಾನಸಿಕ ಕ್ಲೇಶ ಇರುತ್ತದೆ ಗುರುವಿನ ಅನುಗ್ರಹ ಇದ್ದರೂ ಅವನು ಇರುವುದು ತನ್ನ ವೈರಿ ಶುಕ್ರನ ಮನೆಯಲ್ಲಿ. ಎಲ್ಲ ಕಡೆಯಲ್ಲಿಯೂ ಬುದ್ಧಿವಂತಿಕೆಯಿಂದ ಹೊಂದಿ ಕೊಂಡು ಹೋಗಬೇಕಾಗಿದೆ.
ತುಲಾ : ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ವಿಷ್ಣು ಸಹಸ್ರನಾಮ/ಶಿವ ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು. ಯಾಕೆಂದರೆ ಗುರು ಇರುವುದು ಅಷ್ಟಮದಲ್ಲಿ,ತನ್ನ ವೈರಿಯ ಮನೆಯಲ್ಲಿ.ಪ್ರಧಾನವಾಗಿ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಸಿಹಿಯನ್ನು ಮುಟ್ಟಲೇ ಬಾರದು. ಅಪವಾದಗಳನ್ನು ಕೇಳಬೇಕಾದ ಅನಿವಾರ್ಯತೆ ಇದೆ. ನಿಮ್ಮಲ್ಲಿ ವಿದ್ವತ್ ಇರುತ್ತದೆ. ಧನ ಸಂಪತ್ತು ಇರುತ್ತದೆ. ಆದರೆ ಇನ್ನೂ ಬೇಕು ಎಂಬ ದುರಾಸೆಯಿಂದ ಹೊರಗೆ ಬನ್ನಿರಿ..ಗೋ ಸೇವೆ ಮಾಡಿರಿ. 60+ಆದವರು ಬೀಳದ ಹಾಗೆ ನೋಡಿ ಕೊಳ್ಳಬೇಕು. ನೀಚ ಜನರ ಒಡನಾಟದಿಂದ ಹೊರಗೆ ಬನ್ನಿರಿ. ತಮ್ಮನ್ನು ಆದಷ್ಟು ಧಾರ್ಮಿಕ ,ಆಧ್ಯಾತ್ಮಿಕ ,ಮಂಗಳ ಕಾರ್ಯಗಳ ಕಡೆಗೆ ಗಮನ ಹರಿಸುವಂತೆ ಮಾಡಿರಿ.
ವೃಶ್ಚಿಕ : ಕುಜನ ದೃಷ್ಟಿ ಅಷ್ಟಮಕ್ಕೆ ಬಂದಿದೆ.6, 8 ಅನಾರೋಗ್ಯ ಸ್ಟಿತಿಯನ್ನುಸೂಚಿಸುತ್ತಿದೆ. ಗುರುವಿನ ಅನುಗ್ರಹ ಇರುವುದರಿಂದ ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇರುತ್ತದೆ ರವಿ ಧನು ರಾಶಿಗೆ ,ಗುರುವಿನ ಮನೆಗೆ ಹೋಗಿರುವುದು ,ಇನ್ನು ಒಂದು ತಿಂಗಳು ಶುಭ ಸಮಯವಾಗಿದೆ. ಉದ್ಯೋಗದಲ್ಲಿ ,ರಾಜಕೀಯ ಕ್ಷೇತ್ರದಲ್ಲಿ,ಅಭಿವೃದ್ಧಿಯನ್ನು ಕಾಣುವಿರಿ. ಶನಿಯ ದೋಷ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು. ಬಂದ ಅವಕಾಶವನ್ನು “ಪಾಲಿಗೆ ಬಂದದ್ದು ಪಂಚಾಮೃತ “ಎಂಬಂತೆ ಸ್ವೀಕರಿಸಬೇಕು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬಂದಿದೆ. ಆದರೆ ದೇವಿಗೆ ಬಾಗಿನ ಅರ್ಪಿಸಿ ಪ್ರಯತ್ನಿಸಬೇಕು.
ಧನು : ಕುಜ ವಕ್ರಿಯಾಗಿ ಸಪ್ತಮಕ್ಕೆ ದೃಷ್ಟಿ ಕೊಡುತ್ತಿದ್ದಾನೆ. ಬುಧ ವ್ಯಯದಲ್ಲಿ ಇದ್ದಾನೆ .ಗುರುವಿನ ಅನುಗ್ರಹದ ಕೊರತೆ ಇದೆ. ಹಲವಾರು ಸಮಸ್ಯೆಗಳಿಂದ ಮಾನಸಿಕ ಸಮತೋಲನ ಕಳೆದುಕೊಳ್ಳುವಿರಿ. ಆದರೆ ಶಿವ ನಾಮ ಸ್ಮರಣೆಯಿಂದ ಪರಿಹಾರ ಸಿಗಲಿದೆ. ಇಲ್ಲಿ ನಿಮ್ಮ ತಾಳ್ಮೆ ಮುಖ್ಯವಾಗಿದೆ. ಸಂಗಾತಿಯೊಂದಿಗೆ ಹೊಂದಿಕೊಂಡು ಮುಂದುವರಿಯಿರಿ. ನಿಮ್ಮ ಪಾಲುದಾರ ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆ ಇದೆ. ನೀವು ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಇರುವವರು ಎಚ್ಚರವಾಗಿರಿ. ಸ್ವಜನ ಬಂಧುಗಳಿಂದಲೂ,ಸ್ನೇಹಿತ ವರ್ಗದವರಿಂದಲೂ ಮಾನಸಿಕ ಒತ್ತಡ ,ಮನಸ್ತಾಪ ಇರುತ್ತದೆ .
ಮಕರ : ದೈವ ಬಲ ಉತ್ತಮವಾಗಿದೆ. ಹಿಂದೆ ನಡೆದಿರುವ ತಪ್ಪುಗಳು ಮತ್ತೆ ಪುನರಾವರ್ತನೆ ಆಗದಂತೆ ಎಚ್ಚರವಹಿಸಿರಿ.ಸಾಡೇ ಸಾತ್ ಶನಿ ಮತ್ತೆ ಸಿಟ್ಟು ಬರಿಸುತ್ತಾ ತಪ್ಪು ಕೆಲಸಗಳು ,ವ್ಯರ್ಥ ಖರ್ಚುಗಳು ಬರುವಂತೆ ಮಾಡುತ್ತಾನೆ. ಪರಿಹಾರವೆಂದರೆ ವಿಷ್ಣು ಸಹಸ್ರನಾಮ ಪಾರಾಯಣ ಆಗಿರುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಆದಷ್ಟು ತಮ್ಮನ್ನು ತೊಡಗಿಸಿ ಕೊಳ್ಳಿರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಅನೇಕ ಮೂಲಗಳಿಂದ ಹಣ ಒದಗಿ ಬರಲಿದೆ. ದೇವತಾ ಕಾರ್ಯಗಳಿಗೆ ಗಮನ ಹರಿಸಿರಿ. ದೇವತಾ ಅನುಗ್ರಹ ಒದಗಿ ಬರಲಿದೆ .ಹಿರಿಯರೊಂದಿಗೆ ಹೊಂದಿಕೊಂಡು ಮುಂದುವರಿಯಿರಿ. ಕೇತು ಭಾಗ್ಯ ಸ್ಥಾನದಲ್ಲಿ ಇದ್ದು ಕೊಂಡು ಈ ಸೂಚನೆಯನ್ನು ಕೊಡುತ್ತಿದ್ದಾನೆ .
ಕುಂಭ : ಗುರುವಿನ ಅನುಗ್ರಹ ಸ್ವಲ್ಪ ಮಟ್ಟಿಗೆ ಇರುತ್ತದೆ. ಮನೆ ನಿರ್ಮಾಣದ ನಿಮ್ಮ ಕೆಲಸ ಮುಂದುವರಿಯಲಿದೆ. ಮೇ 14 ರ ನಂತರ ಕೆಲಸ ಪೂರ್ಣ ಗೊಳ್ಳಲಿದೆ. ಸಾಡೇ ಸಾತ್ ಶನಿ ವಾದ ವಿವಾದವನ್ನು ತರುತ್ತಿರುತ್ತಾನೆ ದ್ವಿತೀಯಾದ ರಾಹು ಕೂಡಾ ಅನಾವಶ್ಯಕ ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಲಿದ್ದಾನೆ. ವಿದೇಶ /ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಸ್ಥಾನ ಮಾನ ಲಭಿಸಲಿದೆ.ಸರಕಾರಿ ನೌಕರರಿಗೆ ಭಡ್ತಿ ಯೋಗವಿದೆ. ಆರೋಗ್ಯದ ಬಗ್ಗೆ ತೀವ್ರ ಎಚ್ಚರಿಕೆ ಅಗತ್ಯ. ವಾಹನ ಸಂಚಾರದಲ್ಲಿ ವೇಗದಲ್ಲಿ ಹಿಡಿತವಿರಲಿ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಿದೆ.
ಮೀನ : ಕುಜ ಸುಖ ಸ್ಥಾನಕ್ಕೆ ದೃಷ್ಟಿ ಹಾಕುತ್ತಿದ್ದಾನೆ. ರಾಹು ಜನ್ಮ ರಾಶಿಯಲ್ಲಿ ಇದ್ದಾನೆ. ದೈವಾನುಗ್ರಹದ ಕೊರತೆ ಇದೆ. ಸಾಡೇ ಸಾತ್ ಶನಿಯ ಕಾಟ ಆರಂಭದ ಹಂತ ಮಾರ್ಚ್ 29,2025 ರ ವರೆಗೆ ಇರುತ್ತದೆ. ಆಯ ವ್ಯಯ ಸಮಗತಿಯಲ್ಲಿ ಮುಂದುವರಿಯಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀಧಿ ಮಾಡುವಾಗ ಅಗತ್ಯ ಇದ್ದರಷ್ಟೇ ಖರೀಧಿ ಮಾಡಿರಿ. ಮೇ 14, 2025 ರ ನಂತರ ದೈವಾನುಗ್ರಹದ ಪ್ರಾಪ್ತಿ ಆಗಲಿದೆ. ನಾಗ ದೇವರ ಪ್ರಾರ್ಥನೆ ಮಾಡುತ್ತಾ ಬನ್ನಿರಿ. ಆಗ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಉಂಟಾಗಲಿದೆ. ಭೂಮಿ ಸಂಬಂಧವಾಗಿ ಕಲಹವನ್ನು ಕುಜ ತರುವ ಸಾಧ್ಯತೆ ಇದೆ. ನಿರುದ್ಯೋಗದಲ್ಲಿ ಇದ್ದವರಿಗೆ ಉದ್ಯೋಗ ಪ್ರಾಪ್ತಿ ಯೋಗ ಇರುತ್ತದೆ.
ನಿಮ್ಮ ಕಂಪ್ಯೂಟರ್ ಜಾತಕವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಡಲಾಗುವುದು. ಜಾತಕ ಇಲ್ಲದವರಿಗೆ ,ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ತಿಳಿಸಲಾಗುವುದು .


























