ವಾರ ಭವಿಷ್ಯ ದಿನಾಂಕ 02.03.2025 ರಿಂದ 08.03.2025 ರ ವರೆಗೆ
ಮೇಷ : ವ್ಯಯದಲ್ಲಿ ಚಂದ್ರ, ಬುಧ ಶುಕ್ರ ರಾಹು ಇರುವುದರ ಕಡೆಗೆ ಗಮನವನ್ನು ಕೊಡುತ್ತಾ ಸದಾ ಜಾಗರೂಕರಾಗಿ ಎಚ್ಚರ ತಪ್ಪದಿರಿ ,ಮಾಡ ಬೇಕಾದ ಕರ್ತವ್ಯಗಳನ್ನು ಸಹನೆ ಮತ್ತು ತಾಳ್ಮೆಯಿಂದ ಮಾಡುತ್ತಾ ಬನ್ನಿರಿ . ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಕೆಲವೊಂದು ಉಡುಗೊರೆಗಳು ನಿಮ್ಮನ್ನು ಹುಡುಕಿ ಕೊಂಡು ಬರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನ ಮಾನಗಳು ಸಿಗಲಿವೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ. ದಾಂಪತ್ಯ ಜೀವನದಲ್ಲಿ ಸಂಗಾತಿಯ ಜೊತೆಗೆ ಅನುಮಾನ ಬರದಂತೆ ಎಚ್ಚರವಿರಲಿ.ಒಳ್ಳೆಯದು ಯಾವುದು ,ಕೆಟ್ಟದು ಯಾವುದು ಎಂಬ ವಿವೇಚನೆ ನಿಮ್ಮಲ್ಲಿರಲಿ. ಸಹೋದ್ಯೋಗಿಗಳ ಜೊತೆಗೆ ಕಲಹಕ್ಕೆ ಹೋಗದಿರಿ.
ವೃಷಭ : ಸೀತೆಯ ಮೇಲಿನ ಕಾಮದಿಂದ ಕುರುಡನಾದ ರಾವಣ ,ಸಕಲ ಸಾಮ್ರಾಜ್ಯಕ್ಕೂ ತಾನೇ ಅಧಿಪತಿಯಾಗಬೇಕೆಂಬ ದುರ್ಯೋಧನನ ಅತ್ಯಾಸೆ ನಿಮಗೆ ಮಾರ್ಗದರ್ಶನವನ್ನು ಕೊಡಲಿದೆ. ನಿಮ್ಮ ಮೇಲೆ ನಿಮಗೆ ಎಚ್ಚರವಿರಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿರಿ. ದೈಹಿಕ ಶ್ರಮವಿದ್ದರೂ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.ರಾಜಕೀಯ ವ್ಯಕ್ತಿಗಳ ಜೊತೆಗೆ ಎಚ್ಚರದಿಂದಿರಿ. ನೀವು ಮಾಡುವ ಪ್ರತಿಯೊಂದು ಖರ್ಚಿಗೆ ಲೆಕ್ಕಾಚಾರವಿರಲಿ. ಬಡ್ತಿ,ಯಶಸ್ಸು ನಿಮ್ಮದಾಗಲಿದೆ. ಯೋಜನೆಗಳ ವಿಸ್ತರಣೆಯ ನಿಮ್ಮ ಯೋಜನೆ ಕೈಗೂಡಲಿದೆ. ನಮ್ಮ ಜೀವನದ ದಾರಿಯಲ್ಲಿ ಎರಡು ಅಂಶಗಳಿವೆ.ಒಂದು ಪರಮಾತ್ಮನ ಸತ್ವ,ಮತ್ತೊಂದು ಪ್ರಪಂಚದ ಮಾಯೆ ,ನಾವು ಎರಡನ್ನೂ ಬಿಡಲಾಗದೆ ಮುಂದುವರಿಯುತ್ತಿರುತ್ತೇವೆ. ಇದು ತಿಳಿದಿರಲಿ.
ಮಿಥುನ : ಸರ್ವವೂ ನಾನೇ ಎಂಬ ಭಾವನೆಯಿಂದ ಹೊರಗೆ ಬಂದಾಗ ಸರ್ವರೂ ನನ್ನ ಆತ್ಮನ ಒಂದು ಅಂಶ ಎಂಬ ಭಾವನೆ ನಿರಂತರ ಸಂತೋಷಕ್ಕೆ ಕಾರಣವಾಗುತ್ತದೆ. ಆಸ್ಪತ್ರೆ ದರ್ಶನ ಅಥವಾ ನ್ಯಾಯಾಲಯ ಮೆಟ್ಟಲೇರುವ ಸಾಧ್ಯತೆ ಇರುತ್ತದೆ. ಕುಟುಂಬದ ಹಿರಿಯರ ಅನಾರೋಗ್ಯದ ಚಿಂತೆ ಮನಸ್ಸಿನಲ್ಲಿ ಇರುತ್ತದೆ. ಯಾವುದೇ ಕಾರಣವಿಲ್ಲದೆ ಸಮಸ್ಯೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಅನನ್ಯವಾಗಲಿದೆ. ನಿಮ್ಮ ನಿಷ್ಟುರದ ಮಾತೊಂದು ಮುಂದಿನ ದಿನಗಳಲ್ಲಿ ತೊಂದರೆಗೆ ಕಾರಣವಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು,ಧನ ಲಾಭ ,ಕುಟುಂಬದಲ್ಲಿ ಸಂತಸ ಬರಲಿದೆ. ಗುಪ್ತ ಶತ್ರುಗಳಿದ್ದಾರೆ ,ಎಚ್ಚರವಿರಲಿ.
ಕರ್ಕಾಟಕ : ರವಿ ಶನಿ ಅಷ್ಟಮದಲ್ಲಿ ಇದ್ದುಕೊಂಡು ಸೂಚಿಸುವ ಮಾತೆಂದರೆ ಎಲ್ಲವೂ ನಿಮ್ಮ ಇತಿಮಿತಿಯ ಒಳಗೆ ಇರಲಿ. ನಿಮ್ಮ ಸಮಯ ಮಾರ್ಚ್ 29 ರ ವರೆಗೆ ಸರಿಯಿಲ್ಲ. ದುಡುಕು ಸ್ವಭಾವದಿಂದ ,ರೋಷ ಸಿಟ್ಟು ಬರುವುದರಿಂದ ಧ್ಯಾನ ,ಪ್ರಾಣಾಯಾಮ ಯೋಗ ಮಾಡುವುದು ಒಳ್ಳೆಯದು.ಬೀಳುವ ಸಾಧ್ಯತೆ ಇದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರವಹಿಸಿರಿ. ಪಾಲುಗಾರಿಕೆ ವ್ಯವಹಾರ ಸಧ್ಯಕ್ಕೆ ಬೇಡ. ಹಣದ ಹೂಡಿಕೆ ಮಾಡುವಾಗ ಬಹಳ ಎಚ್ಚರವಹಿಸಿರಿ. ಭಾಗ್ಯ ಸ್ಥಾನದ ಶುಕ್ರ ರಾಹು ಬುಧ ಹಿರಿಯರೊಬ್ಬರ ಅನಾರೋಗ್ಯವನ್ನು ಸೂಚಿಸುತ್ತಿದೆ. ಶಿವ ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಯಾವುದೇ ವ್ಯವಹಾರ ಆರಂಭಿಸುವ ಮೊದಲು ಅದರ ಆಳವನ್ನು ತಿಳಿದು ಆರಂಭಿಸಿರಿ.
ಸಿಂಹ : ಸಪ್ತಮದಲ್ಲಿ ರವಿ ,ಶನಿ ,ಅಷ್ಟಮದಲ್ಲಿ ಬುಧ ,ಶುಕ್ರ,ರಾಹು ಇದ್ದಾರೆ. ನೀವು ಮಾಡುತ್ತಿರುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ ನೀವು ಸರಿಮಾಡಿಕೊಳ್ಳದಾರದಷ್ಟು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಮಾರ್ಚ್ 29 ಕ್ಕೆ ಶನಿ 8 ನೇ ಮನೆಗೆ ಬರಲು ಕಾಯುತ್ತಿದ್ದಾನೆ. ಅತ್ತೆಗೊಂದು ದಿನವಾದರೆ ,ಸೊಸೆಗೊಂದು ದಿನ. ಸಂಗಾತಿಯನ್ನು ಕಣ್ಣೀರು ಹಾಕಿಸುವ ಕೆಲಸ ,ತನ್ನ ಕೈಯೊಳಗೆ ಇಟ್ಟುಕೊಳ್ಳುವ ಹಠ ಮಾರಿತನ ಒಳ್ಳೆಯದಲ್ಲ. ಸಾಲಕೊಡುವುದು,ತೆಗೆದುಕೊಳ್ಳುವುದು ಸಧ್ಯಕ್ಕೆ ಬೇಡ. ದಿನನಿತ್ಯದ ನಿಮ್ಮ ಉದ್ಯೋಗ ವ್ಯವಹಾರಗಳನ್ನು ಬಿಟ್ಟು ಹೊಸ ವಿಚಾರಕ್ಕೆ ಕೈಹಾಕಬೇಡಿರಿ. ಈ ಜಗತ್ತನ್ನು ಪ್ರೀತಿಸಬೇಕು ಪರಮಾತ್ಮನ ತತ್ವವನ್ನು ಅರಿತು ಬಾಳಬೇಕು. ಇನ್ನೊಬ್ಬರ ಕಣ್ಣೀರನ್ನು ನೋಡಿ ನಗುವ ಬುದ್ಧಿಯನ್ನು ಬಿಟ್ಟು,ಅದನ್ನು ಪರಿಹರಿಸುವ ಬುದ್ಧಿ ಬೆಳೆಸಿಕೊಳ್ಳಿರಿ .
ಕನ್ಯಾ : ಬದಲಾವಣೆ ಜಗತ್ತಿನ ನಿಯಮ. ಸಪ್ತಮದಲ್ಲಿ ಬುಧ ಶುಕ್ರ ರಾಹು ಇದ್ದಾರೆ ,ಈ ತಿಂಗಳ ಕೊನೆಗೆ ಶನಿ ಬಂದು ಸೇರುತ್ತಾನೆ. ಪಂಚೇಂದ್ರಿಯಗಳ ಬಗ್ಗೆ ಪೂರ್ಣ ಹಿಡಿತವಿರಲಿ.ಪಾಲುದಾರರೊಂದಿಗೆ ,ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಿರಿ. ವ್ಯವಹಾರ ಕ್ಷೇತ್ರದಲ್ಲಿ ತಾಳ್ಮೆಇದ್ದಲ್ಲಿ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಆತ್ಮ ವಿಶ್ವಾಸ ಬೆಳೆಸಿಕೊಳ್ಳಿರಿ. ಭಾಗ್ಯದ ಗುರು ಜೀವನದಲ್ಲಿ ಅನೇಕ ಉತ್ತಮ ಸಮಯವನ್ನು ,ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡುತ್ತಿದ್ದಾನೆ. ಮಹಿಳೆಯೊಬ್ಬಳ ಪ್ರವೇಶ ನಿಮಗೆ ತಡೆಯಾಗಲಿದೆ. ಎಚ್ಚರವಿರಲಿ. ನೀವು ತೆಗೆದು ಕೊಳ್ಳುವ ನಿರ್ಧಾರ ಸರಿಯಾಗಿರಲಿ. ಹಲವಾರು ಸಾಧನೆಗಳ ಸರದಾರ ಆಗಲಿದ್ದೀರಿ.
ತುಲಾ : ಅಷ್ಟಮದಲ್ಲಿ ಗುರು ,ಭಾಗ್ಯದಲ್ಲಿ ಕುಜ ,ಮೀನ ರಾಶಿಯಲ್ಲಿ ಬುಧ ,ಶುಕ್ರ, ,ರಾಹು ಇರುವುದರಿಂದ ಧನಲಾಭವಿದ್ದರೂ ತನ್ನವರ ಜೊತೆಗೆ ವೈಮನಸ್ಸು ,ಪತನ ಭಯ ,ಹಿರಿಯರಿಗೆ ಅನಾರೋಗ್ಯ ಭಯ ಇರುತ್ತದೆ. ಮಕ್ಕಳ ಬಗ್ಗೆ ಕಿರಿಕಿರಿ ಇರುತ್ತದೆ .ಸಂಗಾತಿಯ ಕಡೆಯಿಂದ ಭೂ ಲಾಭ ಬರುವ ಸಾಧ್ಯತೆ ಇರುತ್ತದೆ. ಅನಾರೋಗ್ಯದ ಬಗ್ಗೆ ಹಣ ವ್ಯಯ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಕಾರ್ಯ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು. ಗುರುವಿನ ಮಾರಕ ದೋಷಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಉದ್ಯೋಗದಲ್ಲಿ ತಾಳ್ಮೆ ಇದ್ದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರಲಿದೆ. ಅನ್ಯ ಮಹಿಳೆಯರ ಬಗ್ಗೆ ಎಚ್ಚರವಿರಲಿ. ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಬಲಿಯಾಗದಂತೆ ಎಚ್ಚರವಹಿಸಿರಿ.
ವೃಶ್ಚಿಕ : ಸುಖ ಸ್ಥಾನದಲ್ಲಿ ರವಿ ಮತ್ತು ಶನಿ ಇದ್ದಾರೆ .ಪಂಚಮದಲ್ಲಿ ಬುಧ ,ಶುಕ್ರ, ರಾಹು ಇದ್ದಾರೆ .ಅಷ್ಟಮದಲ್ಲಿ 6 ನೇ ಮನೆಯ ಕುಜ ಇರುವುದು ,ಎಚ್ಚರಿಕೆಯ ಕರೆಗಂಟೆಯನ್ನು ಕೊಡುತ್ತಿದೆ. ಸಪ್ತಮದ ಗುರು ದೈವಾನುಗ್ರಹವನ್ನು ಕೊಡುತ್ತಿದ್ದಾನೆ. ನೀನು ಈ ಜಗತ್ತಿಗೆ ಎಷ್ಟು ಕೊಟ್ಟೆ ಮತ್ತು ಅದರಿಂದ ಎಷ್ಟು ತೆಗೆದುಕೊಂಡೆ ?ನಮ್ಮ ಅರ್ಹತೆ ಮತ್ತು ಸಾಮರ್ಥ್ಯಗಳಿಗೆ ಇವುಗಳೇ ಮಾಪನಗಳು. ನಮ್ಮವರೇ ನಮಗೆ ಶತ್ರುಗಳಾಗಲಿದ್ದಾರೆ. ಅನಾರೋಗ್ಯದ ನಿಮಿತ್ತ ಕೆಲವೊಂದು ಸುವರ್ಣ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಚಿಂತೆಯೊಂದು ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಎಚ್ಚರದಿಂದ ಇರಲಿ. ಸಣ್ಣ ಪುಟ್ಟ ವಿಷಯಗಳಿಗೆ ಸಿಟ್ಟು ಮಾಡಿಕೊಳ್ಳದೆ ಅಲ್ಲಿಗೇ ಬಿಟ್ಟುಬಿಡಿರಿ ಕುಲ ದೇವರ ಆರಾಧನೆ ಮಾಡಿಕೊಂಡು ಬನ್ನಿರಿ.
ಧನು : ಸುಖ ಸ್ಥಾನದಲ್ಲಿ ಬುಧ ,ಶುಕ್ರ,ರಾಹು ಇದ್ದಾರೆ. ಮೌಢ್ಯತೆ ನಿಮ್ಮನ್ನು ಕಾಡಲಿದೆ. ಕಹಿ ಮತ್ತು ಸಿಹಿಗಳು ಎರಡೂ ನಮಗೆ ಸಮಾನ ಎಂಬ ಭಾವ ಸಿದ್ಧಿಸುವ ವರೆಗೂ ತಾಳ್ಮೆಯಿಂದಿರಿ.ಕುಜ ಸಪ್ತಮದಲ್ಲಿ ಇದ್ದಾನೆ. ಭೂಮಿಗೆ ಸಂಬಂಧಿಸಿದ ವಿವಾದಗಳು ಒಳ್ಳೆಯ ರೀತಿಯಲ್ಲಿ ಕೊನೆಗೊಳ್ಳಲಿದೆ. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಿಹಿ ಸುದ್ಧಿ ಸಿಗಲಿದೆ. ಗುರುವಿನ ಅನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಈ ಜನ್ಮದಲ್ಲಿ ಮೇವು ಅನುಭವಿಸಿಕೊಂಡು ಬರುತ್ತಿರುವ ಕಷ್ಟ ಸುಖಗಳು ಹಿಂದಿನ ಜನ್ಮದ ಶೇಷ ಭಾಗವಾಗಿದೆ. ಆಕಸ್ಮಿಕವಾಗಿ ಅನಾರೋಗ್ಯವಾಗುವ ಸಾಧ್ಯತೆ ಇದೆ. ರವಿ ಮತ್ತು ಶನಿ ನಿಮಗೆ ಅನೇಕ ಮೂಲಗಳಿಂದ ಧನ ಮೂಲಗಳನ್ನು ಒದಗಿಸಿ ಕೊಡಲಿದ್ದಾರೆ. ರಾಜಕೀಯದಲ್ಲಿ ಇರುವವರಿಗೆ ಒಳ್ಳೆಯ ಅವಕಾಶವಿದೆ. ನೀವು ಮಾಡುವ ವ್ಯವಹಾರದಲ್ಲಿ ನಿಮಗೆ ನೀವೇ ವಂಚನೆ ಮಾಡಿಕೊಳ್ಳಬೇಡಿರಿ.
ಮಕರ : ಕುಜ ಭಾಧಕಾಧಿಪತಿಯಾಗಿ ಷಷ್ಟದಲ್ಲಿ ಇರುವಾಗ ಭೂಮಿಯ ಕುರಿತಾಗಿ ಸಹೋದರ ಸಂಬಂಧಿಗಳಲ್ಲಿ ಚರ್ಚೆ ಬರುವ ಸಾಧ್ಯತೆ ಇದೆ .ಅನಾರೋಗ್ಯ ಬರು ಸಾಧ್ಯತೆಯೂ ಇದೆ. ದ್ವಿತೀಯಾದಲ್ಲಿರವಿ ಮತ್ತು ಶನಿ ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವವರು. ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪಂಚಮದಲ್ಲಿ ಗುರು ಇರುವ ಕಾರಣ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರುತ್ತದೆ. ಸಹೋದರ ವರ್ಗದವರ ಸಹಕಾರ ಸಿಗಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವ ಸಾಧ್ಯತೆ ಇರುವುದರಿಂದ ಆಹಾರ ಸೇವನೆಯಲ್ಲಿ ಎಚ್ಚರವಹಿಸಿರಿ. ತನಗೆ ಹುಟ್ಟಿರುವ ಮಗಳು ಒಂದು ದಿನ ಮದುವೆಯಾಗಿ ಪರರ ಮನೆ ಸೇರುವವಳು ,ಎಂದು ಗೊತ್ತಿದ್ದರೂ ಅವಳನ್ನು ಪ್ರೀತಿಯಿಂದ ಸಾಕುವಂತೆ,ಪ್ರಪಂಚದಿಂದ ಏನನ್ನೂ ಅಪೇಕ್ಷಿಸದೆ ,ಎಲ್ಲರನ್ನು ಪ್ರೀತಿಸುತ್ತಾ ಬಾಳುವುದೇ ಜೀವನವೆಂದು ತಿಳಿಯಿರಿ.
ಕುಂಭ : ನಿಮ್ಮ ಜನ್ಮ ರಾಶಿಯಲ್ಲಿ ರವಿ ಮತ್ತು ಶನಿ ಇದ್ದಾರೆ.ತೀರಾ ಸಿಟ್ಟು ,ಅಹಂಕಾರ ಒಳ್ಳೆಯದಲ್ಲ. ಹಿಂದಿನ ದಿನಗಳಲ್ಲಿ ನೀವು ಮಾಡಿರುವ ಒಳ್ಳೆಯ ಕೆಲಸಗಳು ಈಗ ಉತ್ತಮ ಫಲ ಕೊಡುತ್ತಿವೆ. ಅನೇಕ ಬದಲಾವಣೆಗಳನ್ನು ಕಾಣುವ ಸಮಯವಾಗಿದೆ. ಮಾರ್ಚ್ 14 ರವರೆಗೆ ನಿಮ್ಮ ಮನಸ್ಸಿನ ಹಿಡಿತ ನಿಮ್ಮಲ್ಲಿರಲಿ. ಅಪರಿಚಿತರನ್ನು ನಂಬುವ ಕೆಲಸಕ್ಕೆ ಹೋಗಬೇಡಿರಿ. ನೀವು ಮಾಡುವ ಕೆಲಸದಲ್ಲಿ ಉದಾಸೀನತೆ ಬೇಡ. ಉದ್ಯೋಗ ವ್ಯವಹಾರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರುತ್ತದೆ ಮದುವೆಯ ಸಂದರ್ಭದಲ್ಲಿ ಮಾತು ಕೊಟ್ಟಿರುವಂತೆ ಸಂಗಾತಿಯೊಂದಿಗೆ ಹೊಂದಿಕೊಂಡು ಮುಂದುವರಿಯಿರಿ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. 108 ಶ್ಲೋಕಗಳು ನಿಮ್ಮ ಜೀವನವನ್ನೇ ಪರಿವರ್ತನೆ ಮಾಡಲಿವೆ.
ಮೀನ : ಓಂ ನಮೋ ದೇವ್ಯೈ ಮಹಾ ದೇವ್ಯೈ ಶಿವಾಯೈ ಸತತಂ ನಮ: ಪ್ರಕೃತ್ಯೈ ಭದ್ರಾಯೈ ನಿಯತಾ: ಪ್ರಣತಾ: ಸ್ಮೃತಾಮ್ll ಈ ಮಂತ್ರವನ್ನು ನಿತ್ಯವೂ 108 ಬಾರಿ ಹೇಳುತ್ತಾ ಬನ್ನಿರಿ.ಜನ್ಮ ರಾಶಿಯಲ್ಲಿ ಬುಧ ರಾಹು ಶುಕ್ರ ಇರುವುದು ,ಸುಖ ಸ್ಥಾನದಲ್ಲಿ ಕುಜನಿರುವುದು ಅನೇಕ ಸಮಸ್ಯೆಗಳನ್ನು ಕೊಡುತ್ತಿದ್ದು ಅದು ಪರಿಹಾರವಾಗಲಿದೆ. ಹೊಸ ಹೂಡಿಕೆಗೆ ,ಹೊಸ ವ್ಯಾಪಾರ ,ವ್ಯವಹಾರ ಆರಂಭಿಸಲು ಸಕಾಲವಲ್ಲ. ಸಾಡೇ ಸಾತ್ ಆರಂಭದ ಹಂತ ಮುಗಿಯುವ ಹಂತದಲ್ಲಿ ಇದ್ದೀರಿ. ದೈವಾನುಗ್ರಹ ಇರುವುದಿಲ್ಲ. ತಗ್ಗಿಬಗ್ಗಿ ನಡೆದಷ್ಟೂ ಒಳ್ಳೆಯದು. ನಿಮ್ಮ ಮಿತ್ರರೇ ಶತ್ರುಗಳಾಗಿ ಪರಿವರ್ತನೆ ಆಗಬಹುದು. ಅವರು ಹೇಳಿದಂತೆ ಇದ್ದಾಗ ಒಂದು ರೀತಿ ಇರದಿದ್ದಾಗ ಒಂದು ರೀತಿ ;ಇದುವೇ ಲೋಕ ನಿಯಮ. ಆತ್ಮ ವಿಶ್ವಾಸ ಹಾಗೂ ಕುಟುಂಬದವರ ಸಹಕಾರದಿಂದ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸನ್ನು ಸಾಧಿಸುವಿರಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ಕೊಡಲಾಗುವುದು .ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು .






































