ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸೇವಾ ವಯೋ ನಿವೃತ್ತಿ : ನಲ್ಲೂರು ಪ್ರೇಮಾನಂದ ಅವರಿಗೆ ಸನ್ಮಾನ
ಕಾರ್ಕಳ : ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 26 ವರ್ಷಗಳಿಂದ ಸರಕಾರಿ ಸೇವೆ ಸಲ್ಲಿಸಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಪ್ರೇಮಾನಂದ ನಲ್ಲೂರು ಅವರನ್ನು ಸ್ವಗೃಹದಲ್ಲಿ ರಾಮಕ್ಷತ್ರಿಯ ಸಮಾಜದ ಬಾಂಧವರು ಸನ್ಮಾನಿಸಿ ಗೌರವಿಸಿದರು.
ರಾಮಕ್ಷತ್ರಿಯ ಸಮಾಜದ ಹಾಗೂ ಸಂಘದ ಸಕಲ ಕಾರ್ಯಕ್ರಮದಲ್ಲೂ ತನ್ನ ಸಹಕಾರ ನೀಡುತ್ತಾ ಬಂದಿರುವ ಪ್ರೇಮಾನಂದ ನಲ್ಲೂರು ಅವರನ್ನು ಅವರ ನಿವೃತ್ತಿ ನಂತರ ಅವರ ಮನೆಗೆ ತೆರಳಿ ಅವರ ನಿವೃತ್ತಿ ಜೀವನ ಸುಖ,ಶಾಂತಿ, ಆರೋಗ್ಯ ಹಾಗೂ ನೆಮ್ಮದಿ ಯಿಂದ ಕೂಡಿರಲಿ, ನಿವೃತ್ತಿಯ ನಂತರವೂ ಇನ್ನು ಹೆಚ್ಚಿನ ಸಮಾಜ ಸೇವೆಯಲ್ಲಿ ಅವರು ತೊಡಗಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಅದೇ ಸಂದರ್ಭದಲ್ಲಿ ಅವರ ಪತ್ನಿ ಶೋಭಾ ಪ್ರೇಮಾನಂದ ಅವರನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸನ್ಮಾನಿಸಲಾಯಿತು.
ರಾಮಕ್ಷತ್ರಿಯ ಸಂಘದ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಪ್ರಮುಖರಾದ ಪ್ರಸನ್ನ ಕೆ.ಬಿ., ಅಂಬಾಪ್ರಸಾದ್, ನಂದಕುಮಾರ್, ಕಿಶೋರ್ ಕುಮಾರ್, ಪ್ರದೀಪ್ ಕುಮಾರ್, ಸುಕೇಶ್.ಎನ್.ರಾವ್ ಬೈಲೂರು, ಶ್ರೀನಿವಾಸ್ ರಾವ್ ನಲ್ಲೂರು, ವಿಜಯ ಎಂ.ರಾವ್ ಹಾಗೂ ಬಿ. ಮನಮೋಹನ ರಾವ್ ಉಪಸ್ಥಿತರಿದ್ದರು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರೇಮಾನಂದ ದಂಪತಿಯವರು ಕೃತಜ್ಞತೆ ಸಲ್ಲಿಸಿದರು.

































