


ವಾರಭವಿಷ್ಯ 19.07.2026 ರಿಂದ 25.07.2026ರ ತನಕ
ವಿಶೇಷ ದಿನಗಳು :20.07.2026 ರಂದು ಗುರು ಪಶ್ಚಿಮ ದಿಕ್ಕಿನಲ್ಲಿ ಅಸ್ತನಾಗಿ 11.08.2026 ರಂದು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ.
26.07.2026ರಂದು ರವಿವಾರ ಶನಿಗ್ರಹ ವಕ್ರ ಗತಿಯನ್ನು ಹೊಂದಿ 10.12.2026 ಗುರುವಾರ ಸಮಗತಿಯನ್ನು ಪಡೆಯುವನು.
ಮೇಷ : ಅನಿರೀಕ್ಷಿತ ಧನಲಾಭ ನಿಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸಲಿದೆ. ದಾಂಪತ್ಯದಲ್ಲಿ ಕಿರಿಕಿರಿ ಜಾಸ್ತಿ ಆಗದಂತೆ ತಾಳ್ಮೆ ವಹಿಸಿರಿ, ಹಿರಿಯರ ಆರೋಗ್ಯವನ್ನು ಕಾಪಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ಕೋಪ ಹೆಚ್ಚಾದರೆ ಅನೇಕ ಅವಕಾಶಗಳು ಕಳೆದು ಹೋಗಲಿದೆ. ತಂದೆ ತಾಯಿಯವರನ್ನು ದೂರಮಾಡಿಕೊಳ್ಳಬೇಡಿರಿ.
ವೃಷಭ : ಶನಿಯ ವಕ್ರಗತಿಯಿಂದಾಗಿ ನಿಮಗೆ ಬರುತ್ತಿರುವ ಆದಾಯ, ನಿಮ್ಮ ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾಣಲಿರುವಿರಿ ಗುರುವಿನ ಅಸ್ತಗತಿಯಿಂದಾಗಿ ಸಹೋದರ ವರ್ಗದವಸರ ಸಹಾಯ ಕಡಿಮೆಯಾಗಲಿದೆ. ಕಫ ವಾತ ಸಂಬಂಧಿ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತಣ್ಣೀರು ಸೇವನೆ ಕಡಿಮೆ ಇರಲಿ.
ಮಿಥುನ : ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಜವಾಬ್ದಾರಿ ಹೆಚ್ಚಾಗಲಿದೆ. ಸಹೋದ್ಯೋಗಿಗಳ ಸಹಾಯ ನಿಮ್ಮ ನೆರವಿಗೆ ಬರಲಿದೆ. ಗುರು ಮತ್ತು ಶನಿಯರ ಸ್ಥಿತಿಯಲ್ಲಿ ಆಗುವ ಬದಲಾವಣೆ ನಿಮ್ಮ ಗಮನಕ್ಕೆ ಬರಲಿದೆ. ನಿಮ್ಮ ಹಿರಿಯರೊಬ್ಬರ ಅಗಲುವಿಕೆ ಸದ್ಯದಲ್ಲಿ ನಡೆಯುವ ಸಾಧ್ಯತೆ ಇರುತ್ತದೆ.
ಕರ್ಕಾಟಕ : ರಾಹು ಶನಿಯರ ಪ್ರಭಾವ, ಅಸ್ತನಾಗಿರುವ ಗುರು ನಿಮ್ಮನ್ನು ಬಹಳ ಎಚ್ಚರವಹಿಸುವಂತೆ ತಿಳಿಸುತ್ತಿದ್ದಾರೆ. ದಾಂಪತ್ಯದಲ್ಲಿ ಮೌನವಾಗಿದ್ದರೆ ಒಳ್ಳೆಯದು. ವಾಹನ ಸಂಚಾರದಲ್ಲಿ, ಆಹಾರ ವ್ಯವಹಾರದಲ್ಲಿ ಅನ್ಯ ಸ್ತ್ರೀಯರ ವಿಷಯದಲ್ಲಿ ಬಹಳ ಎಚ್ಚರವಾಗಿರಬೇಕು. ಸಾಲ ಮಾಡುವುದು ಬೇಡ. ಮದ್ಯ ಸೇವನೆಯಿಂದ ದೂರವಿರುವುದು ಒಳ್ಳೆಯದು.
ಸಿಂಹ : ಗುರು ರವಿ ವ್ಯಯದಲ್ಲಿ ಇದ್ದು, ರಾಹು ಶನಿ ಸಪ್ತಮದಲ್ಲಿ ಇರುವಾಗ ಸುಖ ಸಂಸಾರ ನಿಮ್ಮ ವರ್ತನೆಯನ್ನು ಅವಲಂಭಿಸಿಕೊಡಿದೆ. ಪ್ರೇಮಿಗಳು ಎಚ್ಚರವಾಗಿರಬೇಕು. ವಿವಾಹ ವಿಚ್ಛೇದನದ ಹಂತದವರೆಗೆ ಹೋಗಲಿದೆ. “ಅಹಂ “ನಿಂದ ಹೊರಗೆ ಬನ್ನಿರಿ. ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿರಿ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಕನ್ಯಾ : ಉದ್ಯೋಗದ ಅಪೇಕ್ಷೆ ಇರುವವರಿಗೆ, ಉತ್ತಮವಾದ ಸಮಯ, ಸಿಕ್ಕಿದ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವುದು ಅಗತ್ಯವಾಗಿದೆ. ನಿಮ್ಮ ಮಾತಿಗೆ
ತೂಕವಿರಲಿ, ಬಂಧು ವರ್ಗದವರ ಜೊತೆಗೆ ನಿಷ್ಟುರ ಆಗುವ ಸಾಧ್ಯತೆ ಇದೆ. ಮನೆವಾಹನ ಭೂಮಿ ಕೊಳ್ಳುವ ಯೋಗವಿದೆ. ವಿಷ್ಣು ದೇವರಿಗೆ ಯಥಾ ಶಕ್ತಿ ಸೇವೆ ಮಾಡಿರಿ, ಬರುವ ಆದಾಯದಲ್ಲಿ ಹೆಚ್ಚಳವಾಗಲಿದೆ.
ತುಲಾ : ಹಣ ಹೂಡಿಕೆ ಲಾಭವನ್ನು ತರಲಿದೆ. ಶನಿಯ ವಕ್ರಗತಿ ನಿಮ್ಮ ವ್ಯವಹಾರದ ಮೇಲೆ ಪ್ರಭಾವ ಬೀಳಲಿದೆ. ಮಕ್ಕಳಲ್ಲಿ ಹೊಂದಾಣಿಕೆ ಇರಲಿ, ಆಸ್ತಿ ಸಂಬಂಧ ಕೋರ್ಟ್ ಕಚೇರಿ ಅಲೆದಾಟವಿದೆ. ರಕ್ತದೊತ್ತಡ ಇರುವವರು ಎಚ್ಚರವಹಿಸಿರಿ. ಹಿರಿಯರ ಜೊತೆಗೆ ಹೊಂದಾಣಿಕೆಯಿಂದ ಮುನ್ನೆಡೆಯಿರಿ. ನೌಕರವರ್ಗದವರಿಗೆ ಕೆಲಸದಲ್ಲಿ ಒತ್ತಡ ಉಂಟಾಗಲಿದೆ.
ವೃಶ್ಚಿಕ : ಸುಖ ಭಾವದಲ್ಲಿ ಇರುವ ರಾಹು ಮತ್ತು ಶನಿ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವಂತೆ ಅಮ್ಮನವರ ಹತ್ತಿರದಲ್ಲಿಯೇ ಇರುವಂತೆ, ವಾಹನ ಸಂಚಾರದಲ್ಲಿ ಅತಿಯಾದ ಜಾಗ್ರತೆ ವಹಿಸುವಂತೆ ತಿಳಿಸುತ್ತಿದ್ದಾರೆ. ವಿಷ್ಣು /ನಾಗದೇವರ ಯಥಾ ಶಕ್ತಿ ಸೇವೆಯನ್ನು ಮಾಡಿರಿ. ಅನಿರೀಕ್ಷಿತ ಬದಲಾವಣೆಯನ್ನು ಎದುರಿಸಲು ತಯಾರಾಗಿರಿ ನಿಮ್ಮ ಮೇಲೆ ಅಪವಾದ/ಆರೋಪಗಳು ಬರಲಿವೆ.
ಧನು : ಆದಾಯದ ಮೂಲಗಳು ಹೆಚ್ಚಾಗಲಿವೆ. ಹೆಸಲಿಲ್ಲದ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದಲ್ಲಿ ನಷ್ಟ ಉಂಟಾಗಬಹುದು. ಸಾಂಸಾರಿಕ ತೊಂದರೆ ನಿವಾರಣೆಗೆ ಬಂಧು ಬಳಗದವಸರಿಂದ ಸಹಾಯ ಸಿಗಲಿದೆ. ಸಹೋದರ ವರ್ಗದವರಿಂದ ಅನಿರೀಕ್ಷಿತ ಸಹಾಯ ಪಡೆಯಲಿದ್ದೀರಿ. ಆರೋಗ್ಯ ಸುಧಾರಣೆಯಾಗಲಿದೆ. ಶನಿಯ ವಕ್ರಗತಿ, ಗುರು ಮೌಡ್ಯವನ್ನು ಗಮನಿಸಿರಿ.
ಮಕರ : ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಿದರೆ, ಸಾಲದ ಚಿಂತೆಯಿರುವುದಿಲ್ಲ. ನೆರೆಹೊರೆಯವರ ಜೊತೆಗೆ ವೃಥಾ ಮಾತುಗಳು ತೊಂದರೆಗೆ ಕಾರಣವಾಗಬಹುದು, ಸಂಸಾರದಲ್ಲಿ ಕೆಲವೊಮ್ಮೆ ಕಲಹ ನಿರೀಕ್ಷಿತ. ಹೇಳಿಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ ಹೆಚ್ಚು ಕಾಲ ಉಳಿಯಲಾರದು. ದೂರ ಪ್ರಯಾಣ ಮುಂದೂಡುವುದು ಒಳ್ಳೆಯದು.
ಕುಂಭ : ಶನಿ ರಾಹು ಜೊತೆಯಾದರೆ ಸಣ್ಣ ವಿಷಯಗಳೂ ದೊಡ್ಡದಾಗಬಹುದು. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಯೋಗ ಮತ್ತು ಧ್ಯಾನದಿಂದ ಮನಸ್ಸಿನ ಗೊಂದಲ ನಿವಾರಣೆಯಾಗಲಿದೆ. ನಿಮ್ಮಲ್ಲಿರುವ ಅಹಂಕಾರ ನಿಮಗೆ ಸಮಸ್ಯೆಯನ್ನು ತರಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರವಿರಲಿ.
ಮೀನಾ : ವಕ್ರ ಶನಿ, ಗುರುವಿನ ಮೌಡ್ಯದ ಕಾರಣದ ಸಮಸ್ಯೆ ನಿಮ್ಮ ಗಮನಕ್ಕೆ ಬರಲಿದೆ. ಬರುವ ಡಿಸೆಂಬರ್ ತಿಂಗಳ ವರೆಗೆ ಎಚ್ಚರವಾಗಿರಿ,ಕಾರ್ಯ ಶೈಲಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದು ಒಳಿತು. ವಿವಾಹ ಸಂ ಸಂಬಂಧಗಳು ಕೂಡಿ ಬಂದರೂ ಆತ್ಮೀಯರಿಂದಲೇ ಮುರಿಯುವ ಸಂಭವವಿದೆ. ಅತಿಯಾದ ಕೆಲಸಗಳ
ಒತ್ತಡ ಆರೋಗ್ಯದ ಮೇಲೆ ಪರಿಣಾಮ ಭೀರಲಿದೆ.



























