ರೂ. 75 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ವಿ.ಸುನೀಲ್ ಕುಮಾರ್ ಮನವಿ

Picture of RB NEWS

RB NEWS

Bureau Report


ಕಾರ್ಕಳ, ಫೆಬ್ರವರಿ 25: ಕಾರ್ಕಳ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನ ಲೋಕಾರ್ಪಣೆ ಹಾಗೂ ಕಿಸಾನ್ ಸಭಾಭವನ ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ಕಾರ್ಕಳಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಮನವಿ ಸಲ್ಲಿಸಿದರು.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಲಕ್ಷಾಂತರ ಯಾತ್ರಿಕರು ಮತ್ತು ಪ್ರವಾಸಿಗರು ಆಗಮಿಸುವ ಹಿನ್ನೆಲೆ, ರಸ್ತೆ, ಕುಡಿಯುವ ನೀರು, ಶೌಚಾಲಯ, ಅಲಂಕಾರಿಕ ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರೂ. 75 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.
ಇದಲ್ಲದೆ, ಕಾರ್ಕಳದ ಕೆಜಿಟಿಟಿಐ ತರಬೇತಿ ಕೇಂದ್ರ ಹಾಗೂ ಸರ್ಕಾರಿ ಬಿ.ಎಸ್.ಸಿ ನರ್ಸಿಂಗ್ ಕಾಲೇಜುಗಳು ಹಲವು ವರ್ಷಗಳಿಂದ ತಾತ್ಕಾಲಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈಗಾಗಲೇ ಜಾಗ ಕಾಯ್ದಿರಿಸಿರುವ ಈ ಸಂಸ್ಥೆಗಳಿಗೆ ಶೀಘ್ರದಲ್ಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಒತ್ತಾಯಿಸಿದರು.
ಹೆಬ್ರಿ ತಾಲೂಕು ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮೀಣ ಪ್ರದೇಶವಾಗಿದ್ದು, ಸ್ಥಳೀಯರು ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿರುವ ಹಿನ್ನೆಲೆಯಲ್ಲಿ, ಅದನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಇಂದು ಲೋಕಾರ್ಪಣೆಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಭವನವು ರೂ. 6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಸಾರ್ವಜನಿಕ ಬಳಕೆಗೆ ಅಗತ್ಯವಿರುವ ಕುಡಿಯುವ ನೀರು, ಪೀಠೋಪಕರಣ, ಅಡುಗೆ ಪರಿಕರ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಕನಿಷ್ಠ ರೂ. 3 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಹೆಬ್ರಿ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾದ ರೂ. 1 ಕೋಟಿ ಅನುದಾನ ಸಮರ್ಪಕವಲ್ಲದ ಕಾರಣ, ಸುಸಜ್ಜಿತ ಭವನ ನಿರ್ಮಾಣಕ್ಕಾಗಿ ಕನಿಷ್ಠ ರೂ. 2 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಈ ಕುರಿತು ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರಿಗೂ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಿಗ್ಗಾವಿ ಜವಳಿ ಪಾರ್ಕ್ ಮಾದರಿಯಲ್ಲಿ ಕಾರ್ಕಳದ ನಿಟ್ಟೆ ಜವಳಿ ಪಾರ್ಕ್ ಅನ್ನು ಸಂಪೂರ್ಣ ಸರಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸಿ ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು. ಜೊತೆಗೆ ಕರಾವಳಿ ಭಾಗದ ಕೆಂಪುಕಲ್ಲು, ಮರಳು ಸಾಗಾಟ, 9811ಎ ಖಾತಾ ಹಾಗೂ ಪ್ರಾಧಿಕಾರದ ಅನುಮೋದನೆ ಸಮಸ್ಯೆಗಳ ಸರಳೀಕರಣಗೊಳಿಸಿ ಜನಸಾಮಾನ್ಯರ ಹಿತ ಕಾಪಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top