ರೂ.3.5 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಆರೋಪಿಯ ಬಂಧನ: ಬೆಂಗಳೂರಿಗಿತ್ತೇ ನಂಟು?
ಮಂಗಳೂರು : ಉಪ್ಪಳದ ಮನೆಯೊಂದಕ್ಕೆ ದಾಳಿ ನಡೆಸಿದ ಡಿವೈಎಸ್ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ಸುಮಾರು 3.5 ಕೋಟಿ ರೂ. ನ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಉಪ್ಪಳ ಪತ್ವಾಡಿ ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ
ಸಂಬಂಧಪಟ್ಟಂತೆ ಅಸ್ಗರ್ ಅಲಿ(27) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆಗಸ್ಟ್ 30 ರಂದು ಬೇಕಲ ಪೋಲೀಸ್ ಠಾಣಾ ವ್ಯಾಪ್ತಿಯ ಮೇಲ್ಪರಂಬದಲ್ಲಿ 49.33 ಗ್ರಾಂ ಎಂಡಿಎಂಎ ಸಹಿತ ಮೂಲತಃ ಮೂಡಿಗೆರೆ ನಿವಾಸಿ ರವಿ ಯಾನೆ ಅಬ್ದುಲ್ ರಹ್ಮಾನ್ ಎಂಬಾತನನ್ನು ಬಂಧಿಸಲಾಗಿತ್ತು.
ಈ ಗಂಭೀರ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸಿರುವ ಹಿನ್ನಲ್ಲೇ ಬೃಹತ್ ಮೊತ್ತದ ಮಾದಕ ವಸ್ತು ಶೇಖರಣ ಕೇಂದ್ರ ಪತ್ತೆಯಾಗಲು ಸಾಧ್ಯವಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಆದೇಶದಂತೆ ಈ ಕುರಿತು ತನಿಗೆಗೆಂದು ಪ್ರತ್ಯೇಕ ದಳ ರಚಿಸಿ ಉಪ್ಪಳದ ದಂಧೆಯ ಕುರಿತು ಖಚಿತ ಮಾಹಿತಿ ಪಡೆದು ಶುಕ್ರವಾರ ಮಧ್ಯಾಹ್ನ ಸುಸಜ್ಜಿತರಾಗಿ ಆರೋಪಿಯ ಮನೆಗೆ ಧಾಳಿ ನಡೆಸಲಾಯಿತು.

ಆರೋಪಿಯ ಮನೆಯಿಂದ ಕಾರ್ಡ್ ಬೋರ್ಡ್ ಪೆಟ್ಟಿಗೆಯಲ್ಲಿರಿಸಲಾಗಿದ್ದಒಟ್ಟು 3.4 ಕೆಜಿ ಎಂಡಿಎಂಎ, 96.96 ಗ್ರಾಂ ಕೊಕೇನ್, 640ಗ್ರಾಂ ಗಾಂಜಾ ಮತ್ತು 30. ಮಾದಕ ಮಾತ್ರೆಗಳನ್ನು ಪೊಲೀಸರು ವಶಪಡಿಸಿದ್ದರು.
ಬೆಂಗಳೂರು ಕೇಂದ್ರೀಕರಿಸಿರುವ ಬೃಹತ್ ಜಾಲದೊಂದಿಗೆ ಇದಕ್ಕೆ ನಂಟಿದೆ. ಕೋಟ್ಯಾಂತರ ರೂ ವಹಿವಾಟಿನಿಂದ ಬೆಂಗಳೂರಿನಿಂದ ಉಪ್ಪಳಕ್ಕೆ ಸಾಗಿಸಿ ತಂದು ಆಸ್ಕರ್ ಆಲಿಯ ಮನೆಯಲ್ಲಿ ಮಾದಕ ವಸ್ತು ದಾಸ್ತಾನಿಟ್ಟು, ಮಾರಾಟ ದಂಧೆ ನಡೆಯುತ್ತಿತ್ತು. ಕಾಸರಗೋಡು ಜಿಲ್ಲೆಗೆ ಇಲ್ಲಿಂದಲೇ ಮಾದಕ ವಸ್ತು ಪೂರೈಕೆಯಾಗುತ್ತಿತ್ತು ಎಂಬ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಆಸ್ಕರ್ ಆಲಿ ಪದವೀಧರನಾಗಿ ನಿರುದ್ಯೋಗಿಯಾಗಿದ್ದನು. ಈತ ಮಾದಕ ವಸ್ತು ಸಾಗಾಟ,ಮಾರಾಟ ಮಾಡುವುದನ್ನೇ ಕಸುಬಾಗಿಸಿದ್ದನು. ದಿಢೀರ್ ಶ್ರೀಮಂತಿಕೆಯ ಬಯಕೆಯಿಂದ ಈದಂಧೆಯಲ್ಲಿ ನಿರತನಾದನೆಂದು ಪೋಲೀಸರು ತಿಳಿಸಿದ್ದಾರೆ. ಬೃಹತ್ ಪ್ರಮಾಣದ ಮಾದಕವಸ್ತು ಮನೆಯಲ್ಲಿ ಬಚ್ಚಿಟ್ಟು, ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈತನ ಮನೆ, ಬ್ಯಾಂಕ್ ಖಾತೆ, ವಾಹನವನ್ನು ಮುಟ್ಟುಗೋಲು ಹಾಕಲಾಗುವುದೆಂದು ತನಿಖಾದಳ ತಿಳಿಸಿದೆ.
ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಗಳು ಬಂಧಿತರಾಗುವ ಸಾಧ್ಯತೆಗಳಿವೆ.

































