ಉಡುಪಿ , ಜುಲೈ 06, 2026: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ವ್ಯಾಪ್ತಿಯ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ)ದಲ್ಲಿ ನಡೆದಿದ್ದ ₹23,00,000 ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡಕ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಗಂಧಿ ಮತ್ತು ಆಕೆಯ ಪತಿ ಸಂತೋಷ ಎಂದು ಗುರುತಿಸಲಾಗಿದೆ. ಸುಗಂಧಿ ಅವರು ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, 2023ರಿಂದ 2025ರ ಅವಧಿಯಲ್ಲಿ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್ನಲ್ಲಿ ನಮೂದಿಸಿ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೇ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಮಾಡಿಸಿ ಬ್ಯಾಂಕ್ನಿಂದ ಹಣವನ್ನು ಪಡೆದು, ಲೆಕ್ಕಪರಿಶೋಧನೆಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೇರೆ ಬೇರೆ ಖಾತೆ ಪುಸ್ತಕಗಳನ್ನು ನಿರ್ವಹಿಸಿ, ಕಾರ್ಯಕಾರಿ ಸಮಿತಿಗೂ ಅನುಮಾನ ಬಾರದಂತೆ ವಂಚನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಮೂಲಕ ಒಕ್ಕೂಟಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು ₹23 ಲಕ್ಷ ಹಣವನ್ನು ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡಿರುವುದು ಕಂಡುಬಂದಿದೆ.
ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2026ರಂತೆ BNS ಕಲಂ 316(4), 318, 336(3), 340(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಗೋಪೀಕೃಷ್ಣ ಅವರ ನೇತೃತ್ವದಲ್ಲಿ, ಪುನೀತ್ ಕುಮಾರ್ ಬಿ.ಇ. (ಪಿಎಸ್ಐ ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಠ್ಠಲ ಮಲವಡಕರ (ಪಿಎಸ್ಐ ತನಿಖೆ) ಅವರ ತಂಡ ಆರೋಪಿತರನ್ನು ಜುಲೈ 06 ರಂದು ವಶಕ್ಕೆ ಪಡೆದು ಬಂಧಿಸಿದೆ.
ಮೇಲ್ನೋಟಕ್ಕೆ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ ಸೇರಿಕೊಂಡು ವಿವಿಧ ಸದಸ್ಯರ ಹೆಸರಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.