ಶಿವ ಪುರಾಣದಲ್ಲಿ ರುದ್ರಾಕ್ಷಿಯ ಧಾರಣೆಯ ಮಹಿಮೆಯ ಬಗ್ಗೆ ಅದರ ವಿಭಿನ್ನ ಭೇದಗಳು ಹಾಗೂ ಧಾರಣಾ ವಿಧಿಗಳ ಬಗ್ಗೆ ವಿವರಣೆ ಇದೆ .ರುದ್ರಾಕ್ಷಿ ಶಿವನಿಗೆ ತುಂಬಾ ಪ್ರಿಯವಾದುದು ಎಂದು ಅದರಲ್ಲಿ ತಿಳಿಸಲಾಗಿದೆ .ರುದ್ರಾಕ್ಷಿಯ ದರ್ಶನ, ಸ್ಪರ್ಶಮಾಡಿಕೊಂಡು ಹಾಗೂ ಕೈಯಲ್ಲಿ ಹಿಡಿದು ಕೊಂಡು ಜಪ ಮಾಡುವುದರಿಂದ ಸಮಸ್ತ ಪಾಪಗಳು ನಾಶವಾಗಿ ಹೋಗುತ್ತವೆ. ರುದ್ರಾಕ್ಷಿಯನ್ನು ಧರಿಸುವ ಪುರುಷ ಜೀವಿಗಳಲ್ಲಿಯೇ ಶ್ರೇಷ್ಠ ಎನಿಸುತ್ತಾನೆ ,ಎಂದು ವ್ಯಾಸ ಮಹರ್ಷಿಗಳು ತಿಳಿಸಿದ್ದಾರೆ .
ಪದ್ಮ ಪುರಾಣದಲ್ಲಿ ತಿಳಿಸುವಂತೆ ಶಿವನ ಮೈ ಮೇಲಿನ ಬೆವರಿನ ಹನಿಗಳಿಂದ ರುದ್ರಾಕ್ಷಿ ವೃಕ್ಷ ಜನ್ಮ ತಳೆಯಿತು. ಈ ಕಾರಣದಿಂದ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರ ,ಪಾಪಮುಕ್ತಿದಾಯಕ ಹಾಗೂ ಮೋಕ್ಷ ಪ್ರದಾಯಕ ಎಂದು ತಿಳಿಸಲಾಗಿದೆ . ರುದ್ರಾಕ್ಷಿಯ ಮಾಲೆಯನ್ನು ಧರಿಸಿದ ಪುರುಷನನ್ನು ನೋಡಿದ ಭೂತ,ಪ್ರೇತ,ಪಿಶಾಚಿ,ಡಾಕಿಣಿ,ಶಾಕಿನಿ ಹಾಗೂ ರಾಕ್ಷಸಾದಿಗಳು ದೂರ ಓಡಿ ಹೋಗುತ್ತವೆ ಎಂದು ಹೇಳಲಾಗಿದೆ . ಸರ್ವ ದೇವರುಗಳು ರುದ್ರಾಕ್ಷಿಯನ್ನು ಧರಿಸಿರುವ ಪುರುಷನನ್ನು ನೋಡಿ ಪ್ರಸನ್ನರಾಗುತ್ತಾರೆ .
ರುದ್ರಾಕ್ಷಿ ಪರ್ವತ ಪ್ರದೇಶದಲ್ಲಿ ಬೆಳೆಯುವ ಒಂದು ವೃಕ್ಷದ ಫಲ.ಮುಖ್ಯವಾಗಿ ಈ ವೃಕ್ಷ ನೇಪಾಳ ,ಇಂಡೋನೇಷಿಯಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಂಡು ಬರುತ್ತವೆ. ಮಧ್ಯಮ ಎತ್ತರವಾಗಿರುವ ಈ ವೃಕ್ಷದಲ್ಲಿ ಸದೃಢವಾದ ರುದ್ರಾಕ್ಷಿ ಫಲಗಳು ಬೆಳೆಯುತ್ತವೆ. ಇದು ವಾತ ಮತ್ತು ಕಫ ನಾಶಕವಾದುದು ಮತ್ತು ರಕ್ತ ವಿಕಾರಗಳನ್ನು ದೂರಗೊಳಿಸುತ್ತವೆ. ಆಸ್ತಮಾ ,ಕ್ಷಯರೋಗ ಅಜೀರ್ಣ ರೋಗಗಳಿಗೆ ,ರಕ್ತದೊತ್ತಡ ಮತ್ತು ಹೃದಯ ರೋಗಗಳಿಗೆ ಇದು ರಾಮ ಬಾಣದಂತೆ ಕಾರ್ಯ ನಿರ್ವಹಿಸುತ್ತದೆ .
ವಿಭಿನ್ನ ಮುಖದ ರುದ್ರಾಕ್ಷಿಗಳು ಮತ್ತು ಅವುಗಳ ಉಪಯೋಗಗಳು : ಏಕ ಮುಖ ರುದ್ರಾಕ್ಷಿ: ಇದನ್ನು ಸಾಕ್ಷಾತ್ ಭಗವಂತ ರುದ್ರನ ಸ್ವರೂಪ ಎಂದು ತಿಳಿಯಲಾಗಿದೆ. ಇದರ ದರ್ಶನ ಮಾತ್ರದಿಂದಲೇ ಮಾನವನ ಕಲ್ಯಾಣವಾಗುತ್ತದೆ ಎಂದು ಹೇಳಲಾಗಿದೆ.
ಎರಡು ಮುಖಿ ರುದ್ರಾಕ್ಷಿ : [ದ್ವಿಮುಖಿ ರುದ್ರಾಕ್ಷಿ ]ರುದ್ರಾಕ್ಷಿಯ ಮೇಲೆ ಪ್ರಾಕೃತಿಕವಾಗಿ ಎರಡು ಗೆರೆಗಳಿರುತ್ತವೆ ಈ ರುದ್ರಾಕ್ಷಿಯನ್ನು ಭಗವಂತ ಶಂಕರ ಮತ್ತು ಪಾರ್ವತಿಯ ಸ್ವರೂಪವೆಂದು ತಿಳಿಯಲಾಗಿದೆ . ಇದನ್ನು ಅರ್ಧ ನಾರೀಶ್ವರ ಎಂದೂ ಕೂಡಾ ಕರೆಯುತ್ತಾರೆ .
ಮೂರು ಮುಖಿ ರುದ್ರಾಕ್ಷಿ : ಇದನ್ನು ಸಾಕ್ಷಾತ್ ಅಗ್ನಿಯ ಸ್ವರೂಪವೆಂದು ತಿಳಿಯಲಾಗಿದೆ. ಇದು ಸತ್ ಗುಣ ,ರಜೋ ಗುಣ ಮತ್ತು ತಮೋ ಗುಣ –ಈ ಗುಣಗಳ ರೂಪವಾಗಿದೆ ಬ್ರಹ್ಮ ,ವಿಷ್ಣು ,ಮಹೇಶ್ವರ ,ಈ ಮೂರು ಶಕ್ತಿಗಳು ,ಸೇರಿಕೊಂಡಿವೆ ಭೂತ ,ಭವಿಷ್ಯ ಹಾಗೂ ವರ್ತಮಾನದ ಜ್ಣಾನ ಆತನಲ್ಲಿ ಜಾಗೃತವಾಗುತ್ತದೆ .
ನಾಲ್ಕು ಮುಖ ರುದ್ರಾಕ್ಷಿ : ನಾಲ್ಕು ಮುಖಿ ರುದ್ರಾಕ್ಷಿಯ ಮೇಲೆ ಪ್ರಾಕೃತಿಕವಾಗಿ ನಾಲ್ಕು ಗೆರೆಗಳಿರುತ್ತವೆ.ಇದನ್ನು ಚತುರ್ಮುಖಬ್ರಾಹ್ಮಣ ಸ್ವರೂಪವೆಂದು ತಿಳಿಯಲಾಗಿದೆ ನಾಲ್ಕು ವೇದಗಳ ಸ್ವರೂಪ ಎಂದು ತಿಳಿಯಲಾಗಿದೆ. .ಮನುಷ್ಯನಿಗೆ ಧರ್ಮ ,ಅರ್ಥ ಕಾಮ ಮೋಕ್ಷ ದ ಪ್ರಾಪ್ತಿಯನ್ನು ನೀಡುವಂತದ್ದು ಆಗಿದೆ .
ಪಂಚ ಮುಖಿ ರುದ್ರಾಕ್ಷಿ : ಪ್ರಾಕೃತಿಕವಾಗಿ ಈ ರುದ್ರಾಕ್ಷಿಯ ಮೇಲೆ ಐದು ಗೆರೆಗಳಿರುತ್ತವೆ.ಇದನ್ನು ಸಾಕ್ಷಾತ್ ರುದ್ರನ ಸ್ವರೂಪವೆಂದು ತಿಳಿಯಲಾಗಿದೆ. ಕಾಲಾಗ್ನಿಯ ಸ್ವರೂಪವೆಂದು ಕೂಡಾ ತಿಳಿಯಲಾಗಿದೆ .ಇದು ಮಾನಸಿಕ ಶಾಂತಿಯನ್ನು ಕೊಡುತ್ತದೆ ಹೃದಯವನ್ನು ಶುದ್ಧಗೊಳಿಸುತ್ತದೆ.

ಆರು ಮುಖ ರುದ್ರಾಕ್ಷಿ:ಇದರ ಮೇಲೆ ಪ್ರಾಕೃತಿಕವಾಗಿ ಆರು ಗೆರೆಗಳಿರುತ್ತವೆ. ಶ್ರೀ ಶಿವ ಪರಮಾತ್ಮನ ಪುತ್ರ ಕುಮಾರ ಕಾರ್ತಿಕೇಯನು [ಸುಬ್ರಹ್ಮಣ್ಯ ]ಇದರ ಅಧಿದೇವತೆಯಾಗಿದ್ದಾನೆ .ಈ ರುದ್ರಾಕ್ಷಿ ವಿದ್ಯೆ ಜ್ಣಾನ ಹಾಗೂ ಬುದ್ಧಿಯನ್ನು ನೀಡುವಂತದ್ದು. ವ್ಯಕ್ತಿಗೆ ಆತ್ಮ ಬಾಲ,ಸಂಕಲ್ಪ ಶಕ್ತಿ ,ಜ್ಣಾನಾದಿ ಶಕ್ತಿಗಳನ್ನು ನೀಡುತ್ತದೆ. ಇದು ವಿದ್ವತ್ತನ್ನು ನೀಡುತ್ತದೆ .
ಸಪ್ತ ಮುಖಿ ರುದ್ರಾಕ್ಷಿ : ಪ್ರಾಕೃತಿಕವಾಗಿ ಈ ರುದ್ರಾಕ್ಷಿಯ ಮೇಲೆ ಏಳು ಗೆರೆಗಳಿರುತ್ತದೆ .ಇದು ಸಪ್ತ ಋಷಿಗಳ ಪ್ರತೀಕವಾಗಿದೆ . ಅಲ್ಲದೆ ಸಪ್ತ ಮಾತೆಯರ ಮಿಶ್ರಿತ ಪ್ರತೀಕವಾಗಿ ಕೂಡಾ ಆಗಿದೆ ಇದು ಮನುಷ್ಯನ ಪೃಥ್ವಿ ಜಲ,ವಾಯು ,ಆಕಾಶ, ಅಗ್ನಿ ಮಹತ್ವವನ್ನು ಹೊಂದಿರುತ್ತದೆ ಮತ್ತು ಅಹಂಕಾರದ ದೋಷವನ್ನು ನಿವಾರಿಸುತ್ತದೆ ,ಇದರ ಪ್ರಭಾವದಿಂದ ವಿಭಿನ್ನ ದೈಹಿಕ ರೋಗಗಳನ್ನು ದೂರ ಮಾಡಿಕೊಳ್ಳುತ್ತಾನೆ .
ಎಂಟು ಮುಖಿ ರುದ್ರಾಕ್ಷಿ : ರುದ್ರಾಕ್ಷಿಯ ಮೇಲೆ ಪ್ರಾಕೃತಿಕವಾಗಿ ಎಂಟು ಗೆರೆಗಳಿರುತ್ತವೆ .ಇದು ಭಗವಂತ ಗಣೇಶನ ಸ್ವರೂಪವಾಗಿದೆ . ಆಷ್ಟ ಮುಖಿ ರುದ್ರಾಕ್ಷಿಯನ್ನು ಧರಿಸುವ ವ್ಯಕ್ತಿಯನ್ನು ಆಷ್ಟ ದೇವತೆಗಳು ರಕ್ಷಿಸುತ್ತಾರೆ .ಆತ ವಿಭಿನ್ನ ಪ್ರಕಾರದ ಪ್ರಾಕೃತಿಕ ಆಪತ್ತುಗಳು ,ದುರ್ಘಟನೆಗಳು ಮತ್ತು ಶತ್ರುಗಳಿಂದ ರಕ್ಷಣೆ ಪಡೆಯುತ್ತಾನೆ .ಆತನಿಗೆ ಪ್ರೇತ ಬಾಧೆಯ ಭಯವಿರುವುದಿಲ್ಲ .
ಒಂಬತ್ತು ಮುಖದ ರುದ್ರಾಕ್ಷಿ: ಇದರ ಮೇಲೆ ಒಂಬತ್ತು ಗೆರೆಗಳಿರುತ್ತವೆ .ಇದರಲ್ಲಿ ದುರ್ಗಾ ದೇವಿಯ ಒಂಬತ್ತು ಅವತಾರಗಳ ಶಕ್ತಿಗಳಿರುತ್ತವೆ .ಇದನ್ನು ಧರಿಸಿದ ವ್ಯಕ್ತಿಗೆ ಅಲೌಕಿಕ ಶಕ್ತಿಯನ್ನು ರುದ್ರಾಕ್ಷಿ ಕೊಡುತ್ತದೆ .ಒಂಬತ್ತು ತೀರ್ಥ ಕ್ಷೇತ್ರಗಳನ್ನು ದರ್ಶನ ಮಾಡಿದ ಪುಣ್ಯದ ಫಲ ದೊರೆಯುತ್ತದೆ .ಇವನಿಗೆ ಅಕಾಲ ಮರಣದ ಭಯವಿರುವುದಿಲ್ಲ ಲೋಕಪ್ರಿಯತೆಯನ್ನು ಹೊಂದಲು ಇದು ವಿಶೇಷ ಉಪಯೋಗಿ ಎಂದು ಪ್ರಸಿದ್ಧವಾಗಿದೆ .
ದಶಮುಖಿ ರುದ್ರಾಕ್ಷಿ :ಇದರ ಮೇಲೆ ಹತ್ತು ಗೆರೆಗಳಿರುತ್ತದೆ .ಇದು ದಶಾವತಾರದ ಪ್ರತೀಕವೆಂದು ತಿಳಿಯಲಾಗಿದೆ. ಇದರ ಪ್ರಧಾನ ದೇವತೆ ಭಗವಂತ ಜನಾರ್ಧನನ ದಿಕ್ಪಾಲಕನೆಂದು ಹೇಳಲಾಗಿದೆ.ಕಲಾವಿದರು,ಮತ್ತು ಸಾಹಿತಿಗಳಿಗೆ ಇದು ಲಾಭದಾಯಕವಾದುದು .ವ್ಯಕ್ತಿಯ ಮಾತಿನಲ್ಲಿ ಆಕರ್ಷಣೆ ಹೆಚ್ಚುತ್ತದೆ.ಸ್ಮರಣ ಶಕ್ತಿ ಮತ್ತು ಮಾನಸಿಕ ಬಲ ವೃದ್ಧಿಯಾಗಲು ಈ ರುದ್ರಾಕ್ಷಿ ವಿಶೇಷ ಉಪಯುಕ್ತವಾದುದಾಗಿದೆ
ಹನ್ನೊಂದು ಮುಖಿ ರುದ್ರಾಕ್ಷಿ : ಇದರ ಮೇಲೆ ಹನ್ನೊಂದು ಗೆರೆಗಳಿರುತ್ತವೆ ,ಭಗವಂತ ಶಿವನ ಭಕ್ತರಿಗಾಗಿ ತುಂಬಾ ಪ್ರಭಾವಶಾಲಿಯಾಗಿದೆ .ಇದನ್ನು ಧರಿಸುವುದರಿಂದ ಭೂತ ಪ್ರೇತ ಪಿಶಾಚಿಗಳ ಭಯವಿರುವುದಿಲ್ಲ ಯಾವ ವ್ಯಕ್ತಿ ತನ್ನ ಜೀವನದಲ್ಲಿ ನಿರಂತರ ಗೊಂದಲದಲ್ಲಿ ಇರುತ್ತಾನೋ ,ಪ್ರತೀ ಬಾರಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವನೋ ಅಂತವನಿಗೆ ಇದು ತುಂಬಾ ಲಾಭದಾಯಕವಾಗಿರುತ್ತದೆ. ತನ್ನ ಸ್ವಭಾವದಲ್ಲಿ ಉತ್ತಮ ಬದಲಾವಣೆಯನ್ನು ಕಾಣುವನು.
ಹನ್ನೆರಡು ಮುಖಿ ರುದ್ರಾಕ್ಷಿ :ಇದರ ಮೇಲೆ ಪ್ರಾಕೃತಿಕ ರೂಪದಿಂದ ಹನ್ನೆರಡು ಗೆರೆಗಳಿರುತ್ತದೆ.ಇದನ್ನು ಧರಿಸುವ ವ್ಯಕ್ತಿಯ ಓಜ ,ತೇಜಸ್ಸು ಮತ್ತು ಶಕ್ತಿಯಲ್ಲಿ ವೃದ್ಧಿಯಾಗುತ್ತದೆ . ಯಶಸ್ಸು ನಾಲ್ಕೂ ದಿಕ್ಕುಗಳಲ್ಲಿ ವ್ಯಾಪಿಸುತ್ತದೆ .ಇದನ್ನು ಧರಿಸುವುದರಿಂದ ರೋಗ ಭಯ ಚಿಂತೆ ಭ್ರಮೆ ಇತ್ಯಾದಿಗಳಿಂದ ಮುಕ್ತಿ ದೊರೆಯುತ್ತದೆ .
ಹದಿಮೂರು ಮುಖಿ ರುದ್ರಾಕ್ಷಿ: ಹದಿಮೂರು ಗೆರೆಗಳಿರುವ ಇದರ ಸ್ವಾಮಿ ಕಾರ್ತಿಕೇಯ ಕೆಲವು ವಿದ್ವಾಂಸರು ಇಂದ್ರನನ್ನು ಕೂಡಾ ಇದರ ದೇವತೆಯೆಂದು ಒಪ್ಪುತ್ತಾರೆ ಇದು ಸಮಸ್ತ ಪ್ರಕಾರದ ಸಿದ್ಧಿಗಳನ್ನು ನೀಡಲು ಸಮರ್ಥವಾಗಿದೆ .ಸ್ತ್ರೀ –ಪುರುಷರನ್ನು ವಶೀಕರಣ ಮಾಡಿಕೊಳ್ಳುವ ಶಕ್ತಿ ಆತನಲ್ಲಿ ಸಮಾವೇಶಗೊಳ್ಳುತ್ತದೆ .ಭವಿಷ್ಯದಲ್ಲಿ ನಡೆಯುವ ಘಟನೆಗಳು ಈತನಿಗೆ ಮೊದಲೇ ತಿಳಿಯುತ್ತದೆ .
ಹದಿನಾಲ್ಕು ಮುಖಿ ರುದ್ರಾಕ್ಷಿ : ಇದರ ಮೇಲೆ ಹದಿನಾಲ್ಕು ಗೆರೆಗಳಿರುತ್ತದೆ ಇದು ರುದ್ರನ ನೇತ್ರದಿಂದ ಪ್ರಕಟವಾಗಿತ್ತೆಂದು ತಿಳಿಯಲಾಗಿದೆ .ಇದು ಅತ್ಯಂತ ವಿರಳವಾದ ರುದ್ರಾಕ್ಷಿ. ಅತಿ ಕಡಿಮೆ ಸಮಯದಲ್ಲಿ ಶಿವನ ಕೃಪೆ ಇವನಿಗೆ ಒಲಿಯುತ್ತದೆ ಇದು ಹದಿನಾಲ್ಕು ವಿದ್ಯೆ ಹದಿನಾಲ್ಕು ಮನಸ್ಸು ಹದಿನಾಲ್ಕು ಲೋಕ ಹಾಗೂ ಹದಿನಾಲ್ಕು ಇಂದ್ರರ ಸ್ಸಾಕ್ಷಾತ್ ದೇವ ಸ್ವರೂಪ ಎಂದು ಹೇಳಲಾಗಿದೆ .ಇದನ್ನು ಧರಿಸುವ ವ್ಯಕ್ತಿ ಸಮಸ್ತ ಪ್ರಕಾರದ ಸಂಕಟಗಳಿಂದ ಮುಕ್ತನಾಗುತ್ತಾನೆ .
ಗೌರಿ ಶಂಕರ ರುದ್ರಾಕ್ಷಿ : ಪ್ರಾಕೃತಿಕ ರೂಪದಿಂದ ಜೋಡಿಸಿ ಕೊಂಡ ಎರಡು ರುದ್ರಾಕ್ಷಿಗಳಿಗೆ ಗೌರೀಶಂಕರ ರುದ್ರಾಕ್ಷಿ ಎನ್ನುತ್ತಾರೆ .ಆಯಸ್ಸು ,ಆರೋಗ್ಯ ವೃದ್ಧಿಯ ದೃಷ್ಟಿಯಿಂದ ಇದು ಲಾಭದಾಯಕವಾದುದು.
ಗಣೇಶ ರುದ್ರಾಕ್ಷಿ :ಕೆಲವೊಂದು ರುದ್ರಾಕ್ಷಿಗಳ ಒಂದು ಮುಖ ಸೊಂಡಿಲಿನಂತೆ ತುಸು ಮುಂದೆ ಚಾಚಿಕೊಂಡಿರುತ್ತದೆ .ಇದನ್ನು ಗಣೇಶ ರುದ್ರಾಕ್ಷಿ ಎನ್ನುತ್ತಾರೆ ಇದನ್ನು ಧರಿಸುವುದರಿಂದ ಗಣೇಶನ ಕೃಪೆ ಪ್ರಾಪ್ತಿಯಾಗುತ್ತದೆ .
ರುದ್ರಾಕ್ಷಿಯನ್ನು ಧರಿಸುವ ಮೊದಲು ಅದನ್ನು ಪಂಚಾಮೃತದಿಂದ ಶುದ್ಧಗೊಳಿಸಬೇಕು. ಸೋಮವಾರ ರುದ್ರಾಕ್ಷಿಯನ್ನು ಧರಿಸಲು ಉತ್ತಮವಾದ ವಾರವಾಗಿದೆ . ರುದ್ರಾಕ್ಷಿಯನ್ನು ಯಾವುದೇ ಸ್ತ್ರೀ ಪುರುಷರು ಧರಿಸಬಹುದು . ರುದ್ರಾಕ್ಷಿ –ಬ್ರೇಸ್ ಲೆಟ್ ಆಗಿ ಕೂಡಾ ಕೈಗೆ ಧರಿಸಬಹುದು ,ಸ್ಪಟಿಕದ ಜೊತೆಗೆ ಮಾಲೆ ಮಾಡಿ ಕೂಡಾ ಧರಿಸಬಹುದು . ನಕಲಿಯಾಗಿ ಕೂಡಾ ರುದ್ರಾಕ್ಷಿ ಬರುವುದರಿಂದ ಎಚ್ಚರದಿಂದ ಧರಿಸಬೇಕು .







































