ರಿಕ್ಷಾ ಚಾಲಕ ಆತ್ಮಹತ್ಯೆ ಪ್ರಕರಣ : ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಮಾನವ ಹಕ್ಕುಗಳ ಆಯೋಗ
ಕಾಸರಗೋಡು: ಪೋಲೀಸ್ ಕಿರುಕುಳದಿಂದ ಮಾನಸಿಕವಾಗಿ ನೊಂದ ರಿಕ್ಷಾ ಚಾಲಕ ಸತ್ತಾರ್ (60) ತನಗೆ ಉಂಟಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆತ್ಮಹತ್ಯೆಗೈದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಪ್ರೇರಣೆಯಿಂದ ಕಾಸರಗೋಡು ಪೋಲೀಸ್ ವಿರುದ್ಧ ಕೇಸು ದಾಖಲಿಸಿ ತನಿಖೆಗೆ ಆದೇಶಿಸಿದೆ.

ಸಾರಿಗೆ ಸಂಚಾರ ಕಾನೂನು ಉಲ್ಲಂಘಿಸಿ ಟ್ರಾಫಿಕ್ ತೊಂದರೆ ಉಂಟುಮಾಡಿದರೆಂದು ಆರೋಪಿಸಿ ಪೋಲೀಸ್ ವಶಪಡಿಸಿದ್ದ ಆಟೋ ರಿಕ್ಷಾ ಮರಳಿ ನೀಡಿಲ್ಲವೆಂದು ಮನನೊಂದು ಆಟೋಚಾಲಕ ಅಬ್ದುಲ್ ಸತ್ತಾರ್ ಅವರು ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದರು.
ಸಾಲದಲ್ಲಿ ಖರೀದಿಸಿದ ಆಟೋ ಬಾಡಿಗೆ ನಡೆಸಿ, ರೈಲ್ವೇ ನಿಲ್ದಾಣ ಪರಿಸರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಚಾಲಕ, ಪೋಲೀಸ್ ವಶಪಡಿಸಿ ಕೊಂಡೊಯ್ದು ಠಾಣೆಯಲ್ಲಿಟ್ಟ ರಿಕ್ಷಾ ಮರಳಿ ಒದಗಿಸುವಂತೆ ವಿನಂತಿಸಿಕೊಂಡಿದ್ದರೂ, ಕಾಸರಗೋಡು ಠಾಣಾಧಿಕಾರಿ ಸತಾಯಿಸಿದ್ದರು. ಈ ಎಲ್ಲಾ ವಿವರಗಳನ್ನು ಸತ್ತಾರು ಅವರು ತನ್ನ ಜೀವಿತಾವಧಿಯ ಕೊನೆ ಕ್ಷಣದಲ್ಲಿ ಸವಿಸ್ತಾರ ವಿವರಿಸಿ ವಿಡಿಯೋ ಚಿತ್ರೀಕರಣಗೈದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಕುರಿತು ಮಾಧ್ಯಮ ವರದಿ ಪರಿಶೀಲಿಸಿ, ಸ್ಮಯಂ ಕೇಸು ದಾಖಲಿಸಿದ ಮಾನವ ಹಕ್ಕು ಆಯೋಗ ಈ ಸಂಬಂಧ ಒಂದು ವಾರದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ಆದೇಶಿಸಿದೆ.
ಮಾಧ್ಯಮ ಸುದ್ದಿಗಳ ಆಧಾರದಲ್ಲಿ ಮಾನವ ಹಕ್ಕು ಆಯೋಗ ಕೇಸುದಾಖಲಿಸಿದ್ದು, ಮುಂದಿನ ತಿಂಗಳು ಕಾಸರಗೋಡು ನಡೆಯುವ ಅದಾಲತ್ ನಲ್ಲಿ ಪ್ರಕರಣ ಪರಿಶೀಲಿಸುವುದೆಂದು ತಿಳಿಸಿದೆ.
ಇದೇ ವೇಳೆ ಈ ಪ್ರಕರಣದ ಕುರಿತು ಕ್ರೈಂಬ್ರಾಂಚ್ ತನಿಖೆಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಪಿ.ಅನೂಬ್ ರನ್ನು ಚಂದೇರ ಠಾಣೆಗೆ ವರ್ಗಾಯಿಸಲಾಗಿದೆ. ರಿಕ್ಷಾ ವಶಪಡಿಸುವ ವೇಳೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಕೃಷ್ಣನ್ ಅವರನ್ನು ಕುಂಬಳೆ ಠಾಣೆಗೆ ವರ್ಗಾಯಿಸಲಾಗಿದೆ.
ರಿಕ್ಷಾ ಚಾಲಕನ ಆತ್ಮಹತ್ಯೆಗೆ ಕಾಸರಗೋಡು ನಗರ ಠಾಣೆಯ ಎಸ್.ಐಯ ಮೊಂಡು ಹಠವೇ ಕಾರಣವಾಗಿದ್ದು ಅವರ ಮೇಲೆ ಆತ್ಮಹತ್ಯಾ, ಪ್ರೇರಣೆಯ ಕೇಸು ದಾಖಲಿಸಬೇಕೆಂದು ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ.






































