
ರಿಕ್ಷಾ ಚಾಲಕ ಆತ್ಮಹತ್ಯೆ ಪ್ರಕರಣ : ಎಸ್.ಐ ಅಮಾನತು
ಕಾಸರಗೋಡು: ನಗರದ ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಕ್ಕೆ ಗುರಿಯಾಗಿದ್ದ ಚಂದೇರ ಠಾಣಾ ಎಸ್ ಐ ಪಿ.ಅನೂಪ್ ನನ್ನು ಇಲಾಖೆ ಅಮಾನತುಗೊಳಿಸಲಾಗಿದೆ.
ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ( 60) ರೈಲ್ವೆ ನಿಲ್ದಾಣ ಸಮೀಪದ ಕ್ವಾ ಟರ್ಸ್ ನಲ್ಲಿ ವಾಸವಾಗಿದ್ದು, ತಾನು ಚಲಾಯಿಸಿ ದುಡಿಯುತ್ತಿದ್ದರು.
ನಗರದ ಗೀತಾ ಟಾಕೀಸ್ ರಸ್ತೆಯಲಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಅಬ್ದುಲ್ ಸತ್ತಾರ್ ಅವರ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿದ್ದರು.
ನ್ಯಾಯಕೋರಿ ಹಲವು ಬಾರಿ ಠಾಣೆಗೆ ಹೋಗಿ ಭಿನ್ನವಿಸಿದ್ದರೂ, ರಿಕ್ಷಾ ಬಿಟ್ಟುಕೊಡುವಲ್ಲಿ ನಾನಾ ಕಾರಣವೊಡ್ಡಿ ನಿರ್ಲಕ್ಷ್ಯ ತೋರುತ್ತಿದ್ದರು. ಈ ಎಲ್ಲಾ ವಿಚಾರವನ್ನು ಸತ್ತಾರ್ ಅವರು ತನ್ನ ಜೀವಿತಾವಧಿಯ ಕೊನೆಯ ಕ್ಷಣದಲ್ಲಿ ಆತ್ಮಹತ್ಯೆಗೂ ಮುನ್ನ ಮೊಬೈಲ್ ಚಿತ್ರೀಕರಣ ಮಾಡಿ ವಾಟ್ಸ್ ಪ್ ನಲ್ಲಿ ಹರಿಬಿಟ್ಟಿದ್ದರು.
ಸತ್ತಾರ್ ಆತ್ಮಹತ್ಯೆಗೆ ನಗರ ಠಾಣಾಧಿಕಾರಿ ಪಿ.ಅನೂಪ್ ಕಾರಣವೆಂದು ರಿಕ್ಷಾ ಯೂನಿಯನ್ ಆರೋಪಿಸಿ ಪ್ರತಿಭಟನೆ ಆಯೋಜಿಸಿತ್ತು. ಈ ನಡುವೆ ಕಾಸರಗೋಡು ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಆಗಿದ್ದ ಪಿ. ಅನೂಪ್ ನನ್ನು ಆರೋಪದ ಹಿನ್ನಲೆಯಲ್ಲಿ ಚಂದೇರ ಠಾಣೆಗೆ ವರ್ಗಾಯಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆಯ. ನಡುವೆ ಕೇರಳ ಮಾನವ ಆಯೋಗವು ನಿರ್ದೇಶನ ನೀಡಿ ಕಾಸರಗೋಡು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ನಿರ್ದೇಶನ ನೀಡಿತ್ತು.
ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಎಸ್ಪಿ ಬಾಲಕೃಷ್ಣನ್ ನಾಯರ್ ಗೆ ಇಲಾಖೆ ಆದೇಶ ನೀಡಿತು. ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ .ಶಿಲ್ಪಾ ಅವರಿಗೆ ವರದಿ ನೀಡಲಾಗಿತ್ತು. ಆ ಬಳಿಕ ಎಸ್ ಐ ಪಿ. ಅನೂಪ್ ನನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
.

ಕಾಸರಗೋಡು ನಗರದಲ್ಲಿ ಆಟೋ ಚಾಲಕನ ಜೊತೆ ಅನೂಪ್ ಅನುಚಿತವಾಗಿ ವರ್ತಿಸುವ ವಿಡಿಯೋ ಹೊರಬಂದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನ ಕಾಲರ್ ಹಿಡಿದು ಕಸ್ಟಡಿಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.ಒಟ್ಟಾರೆಯಾಗಿ ಆಟೋ ಚಾಲಕರ ಮೇಲೆ ಕೆಂಗಣ್ಣು ಬೀರಿದ ಎಸ್. ಐ ಪಿ.ಅನೂಪ್ ಮಾತ್ರ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗಿರುವುದು ವಿಪರ್ಯಾಸ.







































