ರಿಕ್ಷಾ ಚಾಲಕನೊಬ್ಬನ ಸಾರ್ವಜನಿಕ ಜೀವನಾಸಕ್ತಿ!
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಜೆ. ಡಿ. ಎಸ್. ಪಕ್ಷಕ್ಕೆ ಒಂದು ಕಾಲದ ವಿಶೇಷ ಮರ್ಯಾದೆ,ಪ್ರಭಾವ ಮತ್ತು ರಾಜಕೀಯ ಶಕ್ತಿ ಇತ್ತು. ನಾಯಕತ್ವದ ಶಕ್ತಿಯನ್ನು ತುಂಬಿಸಿಕೊಂಡು ಬಲಿಷ್ಠವಾಗುವ ಹೊತ್ತಿಗೆ ಹೆಚ್ಚಿನ ನಾಯಕರು,ಮುಂದಾಳುಗಳನ್ನು ಬಿಜೆಪಿಯ ಸುನಿಲ್ ಕುಮಾರ್ ಸೆಳೆದುಕೊಂಡರು. ಕಾಂಗ್ರೆಸ್ ಜೊತೆ ಎಣ್ಣೆ ಸೀಗೆ ಸಂಬಂಧವಿದ್ದುದರಿಂದ ಬಿಜೆಪಿಗೆ ಸೇರಿ ಜೆಡಿಎಸ್ ಪಕ್ಷ ಸಂಘಟನೆ ಮುಂದುವರಿಸದೆ ಒಕ್ಕೂಟಕ್ಕೆನೆ ತಿಲಾಂಜಲಿ ಬಿಟ್ಟದ್ದು ಹಳೆಯ ಕತೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಕುಚ್ಚೂರಿನ ಶ್ರೀಕಾಂತ ಪೂಜಾರಿ ಎನ್ನುವ ಯುವಕನಿಗೆ ಜೆಡಿಎಸ್ ನಾಯಕರಲ್ಲಿ ಒಲವು ಮೂಡಿದ್ದು,ಪಕ್ಷಾಭಿಮಾನ ಉಕ್ಕಿದ್ದು ಬಹಳ ಅಚ್ಚರಿಯ ಸಂಗತಿ . ಅದೇನು ವಿಶೇಷವಲ್ಲ ಆದರೆ,ತಾನೇ ಮುಖಂಡತ್ವ ವಹಿಸಿಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ಚಿಹ್ನೆಯನ್ನು ಮತ್ತೆ ಕಾರ್ಕಳ ಕ್ಷೇತ್ರದ ಚುನಾವಣಾ ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಮುಖದಲ್ಲಿ ಕಾಣುವಂತೆ ಮಾಡಿರುವ ಸಾಧನೆಯ ಕೀರ್ತಿ ಆ ಶ್ರೀಕಾಂತ್ ಪೂಜಾರಿಗೆ ಸಲ್ಲಬೇಕು.
ಒಬ್ಬ ರಿಕ್ಷ ಚಾಲಕ ವೃತ್ತಿ ಮಾಡ್ಕೊಂಡು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷವೊಂದರ ಮರುಸಂಘಟನೆ ಮಾಡುವುದೆಂದರೆ ಅದು ಗಂಭೀರ ವಿಚಾರ. ಜನಪ್ರತಿನಿಧಿಯಾಗುತ್ತೇನೆ ಅಂತೇನಲ್ಲ, ಜನಪ್ರತಿನಿಧಿಯ ಹಾಗೆ ಬಡವ ಬಲ್ಲಿದರಿಗೆ ಸೇವೆ ಸಹಕಾರ ಮಾಡುವುದೇ ಆಗಿರುತ್ತದೆ. ಊರ ಜನರಿಗೆ ಅಗತ್ಯ ಕೆಲಸವಿರುವುದು ಕಂದಾಯ ಇಲಾಖೆಯಲ್ಲಿ. ಜನರಿಗೆ ಅಲ್ಲಿಯ ಕೆಲಸವನ್ಮು ಸುಲಭದಲ್ಲಿ ಪೂರೈಸಿಕೊಡುವುದಕ್ಕೆ ಈ ರಾಜಕೀಯ ಸಂಘಟನೆ ಬಹಳಷ್ಟು ಸಹಕಾರಿಯಾಗುತ್ತದೆ.ಎಂದು ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ತಾನು ರಾಜಕೀಯಕ್ಕೆ ಧುಮುಕಿರುವುದರ ಹಿಂದಿನ ಉದ್ದೇಶವನ್ನು ಹಾಗೆ ತಿಳಿಸುತ್ತಾರೆ.
ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಹೆಬ್ರಿ ಆಸುಪಾಸು ಮತ್ತು
ತಾಲೂಕಿನೊಳಗೆ ಕಾಂಗ್ರೆಸ್,ಬಿಜೆಪಿ ಮುಖಂಡರಿಗಿಂತ ಹೆಚ್ಚು ಜನಪ್ರಿಯನಾಗಿದ್ದಾರೆ. ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ನಂತರ ಬಡವರ ಸಾಮಾನ್ಯ ವರ್ಗದವರ ಬಹು ಪ್ರೀತಿಯ ನಾಯಕನಾಗಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ,ನಿಂದನೆ,ನಿರ್ಲಕ್ಷ್ಯವೇನಾದರೂ ಕಂಡುಬಂದಲ್ಲಿ ಪಕ್ಷದ ಅಧ್ಯಕ್ಷ ಹೆಚ್. ಡಿ. ಕುಮಾರ ಸ್ವಾಮಿಗೋ ಕರೆಮಾಡಿ ಹೇಳುತ್ತಾರೆ. ನಿಖಿಲ್ ಕುಮಾರ್ ಅವರ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಪಕ್ಷದ ಯಾರೇ ಮುಖಂಡರನ್ನು ಮಾತಾಡಿಸಿಯಾದರೂ ಜನರಿಗೆ ಸೇವೆ ಒದಗಿಸಿ ಕೊಡುವ ಶ್ರೀಕಾಂತ್ ಅವರ ರಾಜಕೀಯ ಚಟುವಟಿಕೆ ಶ್ಲಾಘನೀಯವಾದುದು.
ನಲವತ್ತು ವರ್ಷ ವಯಸ್ಸಿನ ಶ್ರೀಕಾಂತ ಪೂಜಾರಿ ಕುಚ್ಚೂರು ಅವರು ಜೆಡಿಎಸ್ ಪಕ್ಷ ಸಂಘಟನೆಯ ನೊಗಹೊತ್ತದ್ದು 2016ರಲ್ಲಿ. ಈಗಿಗೆ ಹತ್ತು ವರ್ಷಗಳೇ ಸಂದುವು.
ಕಳೆದ ವಿಧಾನಸಭಾ ಚುನಾವಣೆನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಬಲ ಚಾವುಂಡರುಗಳಿಬ್ಬರ ಎದುರು ಸ್ಪರ್ಧಿಸಿ ಗೆಲ್ಲುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸವೇನಲ್ಲ ,ಜನರೆದುರು ಪರಿಚಯಿಸಿಕೊಳ್ಳುವ ಉಮೇದು ಹಾಗೂ ರಾಜಕೀಯ ಇಚ್ಚೆಗಳು ಎದ್ದುಕಾಣುವುದಷ್ಚೆ.ಅದಕ್ಕಾಗಿ ಕುಚ್ಚೂರು ಶ್ರೀಕಾಂತ್ ಅಭಿನಂದನಾರ್ಹನಾಗುತ್ತಾರೆ.
ಜೆಡಿಎಸ್ ಇಪ್ಪತೈದನೆ ವರ್ಷದ ಆಚರಣೆಯ ಕಾರ್ಯಕ್ರಮವನ್ನು ಹೆಬ್ರಿಯಲ್ಲಿ ಆಯೋಜಿಸಿದ್ದು ಬಹಳ ದೊಡ್ಡ ಸಂಗತಿಯೇ ಹೌದು.
ಹೆಬ್ರಿಯ ಮದಗ ಪರಿಮಳ ಲೇಔಟ್ ನಲ್ಲಿ ಶನಿವಾರ ರಾತ್ರಿ ಜೆಡಿಎಸ್ ಕಾರ್ಕಳ ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತ್ರತ್ವದಲ್ಲಿ ನಡೆದ ಜೆಡಿಎಸ್ – 25 ರಜತ ಮಹೋತ್ಸವ ಸಂಭ್ರಮವನ್ನು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಕೆ.ಕೃಷ್ಣ ರೆಡ್ಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೆಬ್ರಿಯ ಪೌರಕಾರ್ಮಿಕರಿಗೆ ಗೌರವಾರ್ಪಣೆ, ಸನ್ಮಾನ ಮಾಡಲಾಯಿತು.
ಸಮಾರಂಭದಲ್ಲಿ ಸುಮಾರು ಏಳುನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ನಾಗರಿಕರಲ್ಲಿ ಮತ್ತೆ ಹುಟ್ಟಿಕೊಂಡ ಜೆಡಿಎಸ್ ಮೇಲಿನ ಅಭಿಮಾನ ಜೊತೆಗೆ ,ಕುಚ್ಚೂರು ಶ್ರೀಕಾಂತ ಪೂಜಾರಿ ಮತ್ತು ಸ್ನೇಹಿತರು ಮಾಡುತ್ತಿರುವ ಜನಸೇವೆಯನ್ನು ಜನರು ಗುರುತಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತು,ತಾಲ್ಲೂಕು ಪಂಚಾಯತು ಹಾಗೂ ಗ್ರಾಮ ಪಂಚಾಯತು ಚುನಾವಣೆಗಳಲ್ಲಿ ಕುಚ್ಚೂರು ಶ್ರೀಕಾಂತ ಪೂಜಾರಿಯವರ ಮುಖಂಡತ್ವದ ಜೆಡಿಎಸ್ ಪಕ್ಷದಲ್ಲಿ ಯುವಕರು ಸ್ಪರ್ಧಿಸುವುದಕ್ಕೆ ಸ್ವಇಚ್ಚೆಯಿಂದಲೇ ಮುಂದಾದಾಗ ನಾಯಕತ್ವ ಬೆಳೆಯುತ್ತದೆ,ಸ್ಥಳೀಯವಾಗಿ ಅಭಿವೃದ್ಧಿಯ ಕನಸುಗಳನ್ನು ನನಸು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಊರಿನ ಮತದಾರ ನಾಗರಿಕರೂ ಅಷ್ಟೆ ,ಯುವಕರನ್ನು ಆರಿಸಿ ಅವರಿಗೆ ಜವಾಬ್ದಾರಿಯನ್ನು ಕೊಟ್ಟು ತಮ್ಮ ಊರು ಕೇರಿಯನ್ನು ಅಭಿವೃದ್ಧಿಪಡಿಸುವಂತಾಗಬೇಕು.
ಕುಚ್ಚೂರು ಶ್ರೀಕಾಂತ ಪೂಜಾರಿ ಮತ್ತವರ ಸಮಗ್ರ ತಂಡಕ್ಕೆ ಅಭಿನಂದನೆಗಳು,ಶುಭಹಾರೈಕೆಗಳು.
-ವಿ. ಕೆ.ವಾಲ್ಪಾಡಿ
.
–

ವಿ. ಕೆ.ವಾಲ್ಪಾಡಿ


























