ಕಾರ್ಕಳ : ಸಾಣೂರು ಬೈಪಾಸ್ ನಿಂದ – ಮಾಳ ಮುಳ್ಳೂರು ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ-169 ರ ಹೆದ್ದಾರಿ ನಿರ್ಮಾಣ ಕಾರ್ಯಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ನಿಯಮಾವಳಿಗೆ ವ್ಯತಿಕ್ತವಾಗಿ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಾರ್ಕಳ ತಾಲೂಕಿನ ಮಾಳ-ಮೂಡಾರು ಮೀಯಾರು ಗ್ರಾಮಗಳ ಹೆದ್ದಾರಿ ಬದಿಯ ಭೂಮಾಲಿಕರು ಅ. 13ರಂದು ಬಜಗೋಳಿ ಗಣಪತಿ ಕಟ್ಟೆ ಸಭಾಭವನದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು.
ಕಾಟಾಚಾರದ ಸರ್ವೇ -ಮೌಲ್ಯಮಾಪನ : ಭೂಸ್ವಾಧೀನಾಧಿಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೂ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕೇವಲ ಕಾಟಾಚಾರಕ್ಕೆ ಸರ್ವೇ ಹಾಗೂ ಮೌಲ್ಯಮಾಪನ ಮಾಡಿರುವ ಬಗ್ಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಯಿತು.
ಹೆದ್ದಾರಿ ಯೋಜನೆಯೆಯಿಂದ ಮಾಳ,ಮುಡಾರು ಹಾಗೂ ಮೀಯಾರು ಗ್ರಾಮಗಳ 80ಕ್ಕೂ ಹೆಚ್ಚಿನ ಭೂಮಾಲೀಕರು ತಮ್ಮ ಕೃಷಿ ಭೂಮಿ, ತೋಟ,ವಾಸ್ತವ್ಯದ ಮನೆ, ಅಂಗಡಿ ಕೋಣೆ, ಜಾನುವಾರು ಹಟ್ಟಿ , ನೀರಾವರಿ ಸೌಕರ್ಯಗಳನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದಾರೆ. ತೀರಾ ಕಡಿಮೆ ಮೊತ್ತ ನಮೂದಿಸಿ ಈಗಾಗಲೇ ಹಲವಾರು ಮಂದಿಗೆ ಅವಾರ್ಡ್ ನೋಟೀಸು ಜಾರಿಯಾಗಿರುತ್ತದೆ ಎಂಬ ವಿಚಾರ ತಿಳಿದುಬಂದಿದೆ.