ಕಾರ್ಕಳ : ರಾಷ್ಟ್ರೀಯ ಹೆದ್ದಾರಿ -169 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪೇಟೆಯಿಂದ ಇರ್ವತ್ತೂರು ರಸ್ತೆಗೆ ತಿರುಗುವ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರೆ ಬರೆ ಸ್ಥಿತಿಯಲ್ಲಿದೆ
ರಾಷ್ಟ್ರೀಯ ಹೆದ್ದಾರಿಯಿಂದ ಇರುವತ್ತೂರು ರಸ್ತೆಗೆ ತಿರುಗುವಿನ ಹಾದಿ ಅತೀ ಕಿರಿದಾಗಿ ಈಗಾಗಲೇ ಹಲವಾರು ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ ಮುಂದೆ ಸಂಭವಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ.
ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಸಾಣೂರು ಪದವಿಪೂರ್ವ ವಿದ್ಯಾಲಯ ಹಾಗೂ ಸಾಣೂರು ಹೈಸ್ಕೂಲಿನ ವಿದ್ಯಾರ್ಥಿಗಳು ಬಸ್ಸಿಗಾಗಿ ಇದೇ ಪ್ರದೇಶದಲ್ಲಿ ಗುಂಪು ಗುಂಪಾಗಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ನಿಂತಿರುತ್ತಾರೆ.
ವಾಹನಗಳ ಅಡ್ಡಾದಿಡ್ಡಿ ಚಾಲನೆ
ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಚೆಕ್ ಪೋಸ್ಟ್ ಕೂಡ ಇದೇ ಪರಿಸರದಲ್ಲಿ ತೆರೆಯಲಾಗಿದ್ದು, ಅಗತ್ಯವಾದ ವಾಹನ ತಪಾಸಣೆ ನಡೆಸುತ್ತಿರುವುದರಿಂದ ಕೆಲವೊಮ್ಮೆ ಅರ್ಧ ಕಿಲೋಮೀಟರ್ ನಷ್ಟು ವಾಹನಗಳು ಸಾಲಾಗಿ ನಿಂತು ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ.
ಇರ್ವತ್ತೂರಿನಿಂದ ಅಧಿಕ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಕಾರ್ಕಳದ ಕಡೆಗೆ ಸಂಚರಿಸುವಾಗ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಇರ್ವತ್ತೂರು ಕಡೆಗೆ ಬರುವ ವಾಹನಗಳಿಗೆ ಕೆಲವೊಮ್ಮೆ ವಾಹನಗಳನ್ನು ರಸ್ತೆಗೆ ತಿರುಗಿಸುವಾಗ ಅಡ್ಡಾದಿಡ್ಡಿ ಚಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ
ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗಿದೆ. ಮಾತ್ರವಲ್ಲದೇ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.
*ರಸ್ತೆ ಬದಿ ಅಪಾಯಕಾರಿ ಟ್ರಾನ್ಸ್‌ಫಾರ್ಮ್
ಸರ್ವಿಸ್ ರಸ್ತೆ ಬದಿಯಲ್ಲಿಯೇ ಇರ್ವತ್ತೂರು ತಿರುವಿನಲ್ಲಿ ಟ್ರಾನ್ಸ್ ಫಾರ್ಮರ್ ಇದ್ದು, ಅದನ್ನು ಹಿಂದಕ್ಕೆ ಸುರಕ್ಷಿತ ಅಂತರದಲ್ಲಿ ಸ್ಥಳಾಂತರ ಗೊಳಿಸುವ ಅಗತ್ಯವೂ ಇದೆ. ಇರ್ವತ್ತೂರು ರಸ್ತೆಗೆ ತಿರುಗುವಲ್ಲಿ ಸಾಕಷ್ಟು ಸ್ಥಳಾವಕಾಶ ಸಿಗುತ್ತದೆ.
ಪಕ್ಕದಲ್ಲಿಯೇ ಚರಂಡಿ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಅಗೆದು ರಾಶಿ ಹಾಕಿರುತ್ತಾರೆ. ಸನಿಹಲ್ಲಿಯೇ ದೊಡ್ಡ ಹೊಂಡ ಕೂಡ ನಿರ್ಮಾಣವಾಗಿರುತ್ತದೆ..!?!?
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ನ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಕಳೆದ ಎರಡು ಮೂರು ತಿಂಗಳುಗಳಿಂದ ಈ ತೊಂದರೆಯ ಬಗ್ಗೆ ಗಮನ ಸೆಳೆದರೂ… ಕೂಡಲೇ ಆ ಭಾಗದ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಪಾಯ ಕಟ್ಟಿಟ್ಟ ಬುತ್ತಿ
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಬಹುದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿಯಾದರೂ ಅಚ್ಚರಿ ಇಲ್ಲ.
ಸಂಭಾವ್ಯ ಪ್ರಾಣಾಪಾಯ ಆಗುವ ಮೊದಲೇ ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯವರು ಕೂಡಲೇ ಇರ್ವತ್ತೂರು ಅಡ್ಡರಸ್ತೆಗೆ ತಿರುಗುವ ಪ್ರದೇಶವನ್ನು ಅಗಲ ಮಾಡಲು ಅನುವು ಮಾಡಿಕೊಡಬೇಕು.
ತಾಳ್ಮೆ ತಪ್ಪುತ್ತಿದೆ..
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುವ ಸ್ಥಳೀಯರ ತಾಳ್ಮೆಯ ಕಟ್ಟೆಯೊಡೆದು ಗಂಭೀರ ಪರಿಣಾಮ ಆಗುವ ಮೊದಲೇ ಸಂಬಂಧ ಪಟ್ಟವರು ಜಾಗೃತರಾಗಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾಣೂರು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಮಾಜಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಅವರು ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.







































