ರಾಷ್ಟ್ರೀಯ ಹೆದ್ದಾರಿ ಬಫರ್ ವಲಯ ಕುರಿತು ವಿವಾದ: ರಸ್ತೆ ಸುರಕ್ಷತೆ ವಿರುದ್ಧ ಭೂಮಾಲೀಕರ ಹಕ್ಕುಗಳ ಪ್ರಶ್ನೆ

Picture of RB NEWS

RB NEWS

Bureau Report

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವುದು ಸರ್ಕಾರ ಹಾಗೂ ನ್ಯಾಯಾಂಗದ ಪ್ರಮುಖ ಜವಾಬ್ದಾರಿಯಾಗಿದೆ. ಇತ್ತೀಚಿನ ಭೀಕರ ಅಪಘಾತಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ಪ್ರಕರಣವನ್ನು ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಆದರೆ ಅಪಘಾತಗಳ ಮೂಲ ಕಾರಣಗಳನ್ನು ಸಮಗ್ರವಾಗಿ ಪರಿಶೀಲಿಸದೆ, ಭೂಮಾಲೀಕರ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಸ್ತುತ ನಿಯಮಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿಯ ಅಂಚಿನಿಂದ 17.5 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಕ್ಕೆ ನಿರ್ಬಂಧವಿದೆ. ಈಗ ಇದರ ಜೊತೆಗೆ ಇನ್ನೂ 35 ಮೀಟರ್ ಹೆಚ್ಚುವರಿ ಬಫರ್ ವಲಯವನ್ನು ಸೇರಿಸುವ ಮೂಲಕ ಒಟ್ಟು 52.5 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದ ಕ್ರಮ ಜಾರಿಗೆ ತರಲಾಗುತ್ತಿದೆ. ಇದರಿಂದ ಹೆದ್ದಾರಿ ಪಕ್ಕದ ಅಮೂಲ್ಯ ಜಮೀನಿನ ಬಳಕೆ ಕುರಿತು ಭೂಮಾಲೀಕರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ.

ಈ ಜಮೀನನ್ನು ಕೃಷಿಗೆ ಬಳಸಬೇಕೇ ಅಥವಾ ಅಲ್ಪ ಆದಾಯ ನೀಡುವ ಸಣ್ಣ ನಿರ್ಮಾಣಗಳಿಗೆ ಮಾತ್ರ ಸೀಮಿತಗೊಳಿಸಬೇಕೇ ಎಂಬ ಪ್ರಶ್ನೆ ಎದುರಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನು ಬಳಕೆಯಾಗದ ಸ್ಥಿತಿಗೆ ತಳ್ಳಲ್ಪಡುವ ಸಾಧ್ಯತೆ ಇದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಇದಕ್ಕೂ ಮೀರಿಯಾಗಿ, ಭವಿಷ್ಯದಲ್ಲಿ ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಇದೇ ಜಮೀನನ್ನು ಕೃಷಿಭೂಮಿಯೆಂದು ಪರಿಗಣಿಸಿ ಕಡಿಮೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳುವ ಆತಂಕವೂ ವ್ಯಕ್ತವಾಗಿದೆ. ಬಳಕೆಯ ಹಕ್ಕು ಕಳೆದುಕೊಳ್ಳುವ ಜೊತೆಗೆ ಸಮರ್ಪಕ ಪರಿಹಾರದ ಭರವಸೆಯಿಲ್ಲದ ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರ ನಡುವೆಯೇ, ಅಪಘಾತಗಳ ನಿಜವಾದ ಕಾರಣಗಳತ್ತ ಗಮನ ಹರಿಸುವ ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ. ಅಪಘಾತಗಳಿಗೆ ಕೇವಲ ಹೆದ್ದಾರಿ ಪಕ್ಕದ ಕಟ್ಟಡಗಳೇ ಕಾರಣ ಎನ್ನುವುದು ಸಮಗ್ರ ವಿಶ್ಲೇಷಣೆಯಲ್ಲ. ಅತಿವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಸಂಚಾರ ನಿಯಮಗಳ ಉಲ್ಲಂಘನೆ, ಅನುಭವ ರಹಿತ ಚಾಲಕರು, ಅಪ್ರಾಪ್ತ ವಯಸ್ಸಿನವರ ವಾಹನ ಚಾಲನೆ ಹಾಗೂ ಕೆಲವೆಡೆ ವೈಜ್ಞಾನಿಕವಾಗಿ ರೂಪಿಸದ ರಸ್ತೆ ವಿನ್ಯಾಸಗಳು ಪ್ರಮುಖ ಕಾರಣಗಳಾಗಿವೆ.

ರಾಷ್ಟ್ರೀಯ ಹೆದ್ದಾರಿ 169 ಈ ಕುರಿತು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ಹೆದ್ದಾರಿ ಅಗಲೀಕರಣದ ನಂತರ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಕೆಲವೆಡೆ ನಿರ್ಮಿಸಲಾದ ಚಿಕ್ಕ ಫ್ಲೈಓವರ್‌ಗಳು, ರಿಟೈನಿಂಗ್ ವಾಲ್‌ಗಳು, ಅವೈಜ್ಞಾನಿಕ ಸರ್ವೀಸ್ ರಸ್ತೆಗಳು ಮತ್ತು ಗೊಂದಲಕಾರಿ ಪ್ರವೇಶ-ನಿರ್ಗಮನ ವ್ಯವಸ್ಥೆಗಳು ವಾಹನ ಚಾಲಕರಿಗೆ ಅಪಾಯಕಾರಿಯಾಗಿವೆ ಎಂದು ಹೇಳಲಾಗಿದೆ.

ರಸ್ತೆ ಸುರಕ್ಷತೆ ಅತ್ಯಗತ್ಯವಾದರೂ, ಅದರ ಹೆಸರಿನಲ್ಲಿ ಭೂಮಾಲೀಕರ ಆಸ್ತಿ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರ ಹಾಗೂ ನ್ಯಾಯಾಂಗವು ಅಪಘಾತಗಳ ಮೂಲ ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ, ಅತಿವೇಗ ನಿಯಂತ್ರಣ, ಮದ್ಯಪಾನ ಚಾಲನೆ ವಿರುದ್ಧ ಕ್ರಮ ಹಾಗೂ ರಸ್ತೆ ವಿನ್ಯಾಸದ ದೋಷಗಳನ್ನು ಸರಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ.

ರಸ್ತೆ ಸುರಕ್ಷತೆಯ ಜೊತೆಗೆ ಸಂವಿಧಾನಬದ್ಧ ಆಸ್ತಿ ಹಕ್ಕಿಗೂ ಸಮಾನ ಗೌರವ ನೀಡುವ ಸಮತೋಲನದ ನಿರ್ಧಾರಗಳು ಅಗತ್ಯವೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top