ರಾಷ್ಟ್ರಮಟ್ಟದಲ್ಲಿ ಸುದ್ದಿಗ್ರಾಸವನ್ನುಂಟು ಮಾಡಿದ ಮತ್ತಾವು ಸೇತುವೆ ರಸ್ತೆ ಅಭಿವೃದ್ಧಿಗೆ ರೂ 02.00 ಕೋಟಿ ಅನುದಾನ ಮಂಜೂರು : ಶಾಸಕ ವಿ ಸುನಿಲ್ ಕುಮಾರ್



ಕಾರ್ಕಳ : ಬಹು ವರ್ಷಗಳ ಬೇಡಿಕೆಯಾಗಿದ್ದ ಹಾಗೂ ವಿವಿಧ ಕಾರಣಗಳಿಂದಾಗಿ ಬಾಕಿ ಇದ್ದಂತಹ ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಲೆಕುಡಿಯ ಕಾಲೋನಿ ಮತ್ತಾವು ಸಂಪರ್ಕಿಸುವ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.02.00 ಕೋಟಿ ಅನುದಾನ ಮಂಜೂರಾಗಿರುತ್ತದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವು ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ಸಂದರ್ಭದಲ್ಲಿ ಕಾಡಿನ ಮಧ್ಯ ಹರಿಯುವ ನದಿಯನ್ನು ದಾಟಲು ತುಂಬಾ ಅಪಾಯಕಾರಿಯಾದ ಕಾಲುಸಂಕ ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ಸದರಿ ಪ್ರದೇಶದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಸೇತುವೆ ಸಹಿತ ರಸ್ತೆ ಅಭಿವೃದ್ಧಿಯು ತೀರಾ ಅವಶ್ಯಕವಾಗಿತ್ತು.
ಈ ನಿಟ್ಟಿನಲ್ಲಿ ಮತ್ತಾವು ಕಾಲನಿ ಸಂಪರ್ಕಕ್ಕಾಗಿ ಸರ್ಕಾರದಿಂದ ರೂ.02.00 ಕೋಟಿ ಅನುದಾನ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಈ ಸೇತುವೆ ನಿರ್ಮಾಣದಿಂದಾಗಿ ಮಲೆಕುಡಿಯ ಸಮುದಾಯದವರ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗುತ್ತದೆ.
ಶಾಸಕರ ನಿರಂತರ ಪರಿಶ್ರಮ ಹಾಗೂ ವಿಶೇಷ ಮುತುವರ್ಜಿಯಿಂದಾಗಿ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲನಿ ಸಂಪರ್ಕಕ್ಕಾಗಿ ನೂತನ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಇದೀಗ ರೂ.02.00 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಯು ಅತೀ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಶಾಸಕರ ʻವಿಕಾಸʼ ಜನಸೇವಾ ಕಛೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ರಾಷ್ಟ್ರಮಟ್ಟದಲ್ಲಿ ಸುದ್ದಿಗ್ರಾಸ್ತ ಉಂಟು ಮಾಡಿದ ಮತ್ತಾವು

ಹೆಬ್ರಿ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲೆಕುಡಿಯ ಸಮುದಾಯದವರೇ ವಾಸಿಸುವ ಮೂಲಸೌಕರ್ಯ ವಂಚಿತ ಪ್ರದೇಶ ಮತ್ತಾವು ಸುದ್ದಿಗ್ರಾಸ್ತ ಉಂಟು ಮಾಡಿರುವುದು ನಕ್ಸಲ್ ಹೋರಾಟದ ಹಾದಿಯ ದಿನಗಳಲ್ಲಿ ಎಂಬುವುದು ಗಮನಾರ್ಹ.
2005 ಜುಲೈ 28 ರಂದು ನಕ್ಸಲರು ಕಚ್ಚಾ ಬಾಂಬ್ ಸ್ಫೋಟ ನಡೆಸಿದ ಬಳಿಕ ಈ ಸ್ಥಳದ ಹೆಸರು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಸ್ಫೋಟದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು.
ಬಾಂಬ್ ಸ್ಫೋಟದ ಸದ್ದು ಕ್ಷೀಣಿಸುತ್ತಿದ್ದಂತೆ ಮೂಲಸೌಕರ್ಯ ಸುದ್ದಿ ಮರೆಯಾಗುತ್ತಾ ಹೋಯಿತು.
2024 ನವಂಬರ್ 18ರಂದು ನಾಡ್ಪಾಲು ಪೀತಬೈಲ್ ಎಂಬಲ್ಲಿ ನಕ್ಸಲ್ ನಾಯಕ ಹಾಗೂ ಮತ್ತಾವು ಕಚ್ಚಾ ಬಾಂಬ್ ಸ್ಪೋಟದ ರೂವಾರಿಯಾಗಿದ್ದ ವಿಕ್ರಂ ಗೌಡನ ಎನ್ ಕೌಂಟರ್ ಸಂದರ್ಭದಲ್ಲಿ “ಮತ್ತಾವು” ಮತ್ತೇ ಸುದ್ದಿ ಮಾಡಿತು.
ಹಲವು ದಶಕಗಳ ಬಹುಬೇಡಿಕೆಗಳಲ್ಲಿ ಮತ್ತಾವು ಹೊಳೆಗೆ ಸೇತುವೆ ನಿರ್ಮಾಣವೂ ಒಂದಾಗಿದೆ.
ಈ ನಡುವೆ “ದೇವರು ಕೊಟ್ಟರೂ ಪೂಜಾರಿ” ಬಿಡ ಎಂಬಂತೆ ಸರಕಾರವೂ ಅನುದಾನ ಬಿಡುಗಡೆಗೊಳಿಸಲು ಮುಂದಾಗಿದ್ದರೂ, ಕಾನೂನು ಅಸ್ತ್ರಗಳನ್ನು ಅರಣ್ಯ ಇಲಾಖೆಯ ಮುಂದಿಟ್ಟ ಪರಿಣಾಮವಾಗಿ ಮತ್ತಾವು ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಲು ಕಾರಣವೆನ್ನಲಾಗಿದೆ.
ಬಹುವರ್ಷ ಹೋರಾಟಕ್ಕೆ ಸಂದ ಜಯ
ಮತ್ತಾವು ಸೇತುವೆಗೆ ಅನುದಾನ ಮಂಜೂರು. ನಿರಂತರ ಹೋರಾಟಕ್ಕೆ ಸಂದ ಜಯ. ಕಳೆದ ಎರಡು ದಶಕಗಳಿಂದ ಅರಣ್ಯ ಮೂಲ ಬುಡಕಟ್ಟು ಮಲೆಕುಡಿಯ ಸಮುದಾಯದ ಹಾಡಿಗೆ ಸಂಪರ್ಕ ಕಲ್ಪಿಸಲು ಸೇತುವೆಯ ನಿರ್ಮಾಣಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು. ಅರಣ್ಯ ಇಲಾಖೆಯ ಕಾನೂನು ತೊಡಕುಗಳಿದ್ದ ಹಿನ್ನೆಲೆಯಲ್ಲಿ. ಸೇತುವೆ ನಿರ್ಮಾಣದ ಕನಸು ನನಸಾಗಲೆ ಇಲ್ಲ. ಕೆಲ ವರ್ಷದ ಹಿಂದೆ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಇದೀಗ ಅನುಮತಿ ದೊರೆತ ಕಾರಣದಿಂದ ರೂ.2 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿರುವುದು ಸಂತಸ ತಂದಿದೆ. ಸಹಕರಿಸಿದ ಕ್ಷೇತ್ರದ ಶಾಸಕ ವಿ ಸುನಿಲ್ ಕುಮಾರ್ ಹಾಗೂ ಇಲಾಖಾಧಿಕಾರಿಗಳಿಗೆ ಧನ್ಯವಾದಗಳು.

ಶ್ರೀಧರ ಗೌಡ ಈದು.
ಅಧ್ಯಕ್ಷರು ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ
5 ದಶಕಗಳ ಬೇಡಿಕೆಯಾಗಿದ್ದು, ಮಲೆಕುಡಿಯ ಸಂಘದ ನಿರಂತರ ಹಕ್ಕೋತ್ತಾಯಕ್ಕೆ ಸಂದ ಜಯ. ಕಾಮಗಾರಿಯು ನಿಗದಿತ ಅವಧಿಯಲ್ಲಿ ಪ್ರಾರಂಭ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ.

ಗಂಗಾಧರ ಗೌಡ
ಅಧ್ಯಕ್ಷರು
ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ

































