




ರಾಮಸಮುದ್ರದಲ್ಲಿ ತೈಲಾಂಶ ವಿವಾದಕ್ಕೆ ಪ್ರಾಕೃತಿಕವಾಗಿ ದೊರೆಯಿತು ಪರಿಹಾರ

*ಆರ್.ಬಿ.ಜಗದೀಶ್
ಕಾರ್ಕಳ: ಭಾರೀ ವಿವಾದಕ್ಕೀಡು ಮಾಡಿದ್ದ ಐತಿಹಾಸಿಕ ರಾಮಸಮುದ್ರದಲ್ಲಿ ಕಂಡು ಬಂದಿದ್ದ ತೈಲಾಂಶಕ್ಕೆ ಪ್ರಾಕೃತಿಕವಾಗಿ ಪರಿಹಾರ ದೊರೆತ್ತಿದೆ. ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಸೋಮವಾರದಂದು ಸುರಿದ ಭಾರೀ ಮಳೆಗೆ ರಾಮಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನಲ್ಲಿ ತೇಲುತ್ತಿದ್ದ ತೈಲದ ಅಂಶ ರಾಮಸಮುದ್ರದಿಂದ ಹೊರ ಹರಿದಿದೆ. ಇದು ತಾತ್ಕಾಲಿಕ ಶಮನವೇ ಹೊರತು ಶಾಶ್ವತವಲ್ಲ.
ಏನಿದು ವಿವಾದ?
ಕಾರ್ಕಳ ರಾಮಸಮುದ್ರಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಇಡೀ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರನ್ನು ಇದೇ ಕೆರೆಯಿಂದ ಸರಬರಾಜು ಮಾಡಲಾಗುತ್ತಿದೆ. ವೀರಪ್ಪ ಮೊಯಿಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದುರ್ಗ ಗ್ರಾಮದ ಬಲ್ಮೆಗುಂಡಿಯಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಕಾರಣರಾಗಿದ್ದರು. ಆ ಬಳಿಕ ಅಲ್ಲಿಂದ ಹರಿದು ಬರುತ್ತಿದ್ದ ನೀರು ರಾಮಸಮುದ್ರ ಪರಿಸರದಲ್ಲಿ ನಿರ್ಮಿಸಲಾಗಿದ್ದ ಶುದೀಕರಣ ಘಟಕಕ್ಕೆ ಬಂದು ಸೇರುತ್ತಿತ್ತು. ಶುದ್ಧೀಕರಣಗೊಂಡಿದ್ದ ನೀರು ಪುರಸಭಾ ವ್ಯಾಪ್ತಿಗೆ ಸರಬರಾಜು ಆಗುತ್ತಿತ್ತು.
ವಿದ್ಯುತ್ ವ್ಯತ್ಯಯದ ಹಾಗೂ ಬೇಸಿಗೆ ಎದುರಾದ ದಿನಗಳಲ್ಲಿ ಇದೇ ರಾಮಸಮುದ್ರದ ನೀರನ್ನೇ ಶುದ್ಧೀಕರಿಸಿ ಪುರಸಭಾ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತಿದೆ.
ರಾಮಸಮುದ್ರದ ಸನ್ನಿಹದಲ್ಲಿ ಇರುವಂತಹ ನಕ್ಸಲ್ ನಿಗ್ರಹ ದಳದ ಕ್ಯಾಂಪ್ನ ಶೌಚಾಲಯದ ತ್ಯಾಜ್ಯವು ಕಳೆದ ೭ ವರ್ಷಗಳ ಹಿಂದೆ ನೇರವಾಗಿ ಇದೇ ರಾಮಸಮುದ್ರಕ್ಕೆ ಲೀನವಾಗುತ್ತಿತ್ತು. ಈ ಕುರಿತು ಅಂದು ಮಾಧ್ಯಮವೊಂದು ಲಿಯಾಲಿಟಿ ಚೆಕ್ ನಡೆಸಿ ವರದಿ ಪ್ರಕಟಿಸಿದ ಬಳಿಕ ತ್ಯಾಜ್ಯ ಸಂಸ್ಕರಣ ಘಟಕ ತೆರೆಯಲಾಗಿತ್ತು. ಆ ಬಳಿಕ ಅಲ್ಲಿನ ಸಮಸ್ಸೆಗೆ ಮುಕ್ತಿ ದೊರೆತ್ತಿತ್ತು.
ಈ ನಡುವೆ ನಗರದ ಹಾಲ್ ವೊಂದರಿoದ ಅಡುಗೆ ತಯಾರಕ ತ್ಯಾಜ್ಯ ನೀರು ರಾಮಸಮುದ್ರಕ್ಕೆ ಹರಿದು ಬಿಡಲಾಗಿದ್ದು, ಪರಿಣಾಮವಾಗಿ ರಾಮಸಮುದ್ರದ ನೀರಿನಲ್ಲಿ ತೈಲಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬoದಿತ್ತು.


ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಂಪ್ರತಿಯoತೆ ಜರುಗಿದ್ದ ಲಕ್ಷದಿಪೋತ್ಸವದ ಸಂದರ್ಭದಲ್ಲಿ ರಾಮಸಮುದ್ರದ ನೀರಿನಲ್ಲಿ ತೇಲುತ್ತಿದ್ದ ತೈಲಾಂಶ ವಿಚಾರವು ಬೆಳಕಿಗೆ ಬಂದಿತ್ತು.

ಇದೇ ವಿಚಾರವು ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಕಲಾಪದಲ್ಲಿ ವಿವಾದವಾಗಿ ಮಾರ್ಪಟ್ಟಿತ್ತು. ಹಿರಿಯ ಸದಸ್ಯ ಶುಭದರಾವ್ ಈ ಕುರಿತು ಮಾತನಾಡಿ, ಸನ್ನಿಹದ ನಕ್ಸಲ್ ನಿಗ್ರಹ ದಳದ ಶೌಚಾಲಯದ ತ್ಯಾಜ್ಯ, ಹಾಲ್ವೊಂದರ ಅಡುಗೆ ತ್ಯಾಜ್ಯ ಸೇರಿದಂತೆ ಪರಿಸರದಿಂದ ಹರಿದು ಬರುವ ತ್ಯಾಜ್ಯವು ರಾಮಸಮುದ್ರದಲ್ಲಿ ಲೀನವಾಗಿ ಕುಡಿಯುವ ನೀರಿನ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಪವಿತ್ರ ರಾಮಸಮುದ್ರದ ನೀರನ್ನು ಸ್ವಚ್ಚವಾಗಿಡುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು. ಇದೇ ವಿಚಾರದಲ್ಲಿ ಸಹಮತ ನೀಡಿದ ಹಿರಿಯ ಸದಸ್ಯರಾದ ವಿನ್ನಿಬೋಲ್ಡ್ ಮೆಂಡೋನ್ಸಾ, ಹರೀಶ್ ದೇವಾಡಿಗ ಹಾಗೂ ಅಶ್ಪಕ್ ಅಹಮ್ಮದ್ ಮಾತನಾಡಿ, ಅಮೃತಯೋಜನೆಯಡಿಯಲ್ಲಿ ಸುಮಾರು ರೂ.೬೦ ಕೋಟಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಲಾಗುತ್ತಿದೆ. ನೀರಿನ ಮೂಲ ಯಾವುದೆಂಬ ವಿವರ ಇಲ್ಲ. ನೀರಿನ ಮೂಲವನ್ನು ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದ್ದರು.
ಸಮೀಕ್ಷೆಯ ನಂತರ ಕ್ರಮ
ರಾಮಸಮುದ್ರ ಮಾಲಿನ್ಯಗೊಂಡಿರುವ ವಿಚಾರದಲ್ಲಿ ಪುರಸಭೆ ತಡವಾಗಿ ಕ್ರಮಕೈಗೊಂಡಿದೆ ಎಂಬ ಆರೋಪಗಳು ಕೇಳಿಬಂದಿದೆ. ಮಾಲಿನ್ಯಕ್ಕೆ ಕಾರಣವಾಗಿರುವ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಹಾಲ್ ವೊಂದಕ್ಕೆ ನೋಟಿಸ್ ಜಾರಿಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಪುರಸಭೆಯಿಂದ ನಿರ್ದೇಶನ ನೀqಲಾಗಿದೆ ಎಂಬ ಮಾಹಿತಿ ಲಭಿಸಿದೆ.
ದಾನಸಾಲೆ ಪರಿಸರದಲ್ಲಿ ಚರಂಡಿಯ ಮೂಲಕ ತ್ಯಾಜ್ಯ ರಾಮಸಮುದ್ರಕ್ಕೆ ಹರಿದು ಬರುತ್ತಿದ್ದು, ಅದರ ಬಗ್ಗೆ ಪುರಸಭೆ ಗಮನ ಹರಿಸಲೇ ಬೇಕಾಗಿದೆ.
ರಾಮಸಮುದ್ರದ ಎಣ್ಣೆ ನೀರು : ಎಣ್ಣೆಹೊಳೆಗೆ
ರಾಮಸಮುದ್ರ ಹೆಚ್ಚುವರಿ ನೀರು ಗಡಿಬಿಡಿ ಸಂಕವಾಗಿ ಮುಂದೆ ಹರಿದು ಎಣ್ಣೆಹೊಳೆಗೆ ಲೀನವಾಗಿತ್ತದೆ. ರೂ. ೧೦೮ ಕೋಟಿ ವೆಚ್ಚದಲ್ಲಿ ಎಣ್ಣೆಹೊಳೆ ಏತನೀರಾವರಿ ಯೋಜನೆಯನ್ನು ೨೦೨೦ರಲ್ಲಿ ಅನುಷ್ಠಾನಗೊಳಿಸಲಾಗಿತ್ತು.

ಜಲಸಂಪನ್ಮೂಲವಾಗಿರುವ ರಾಮಸಮುದ್ರ ಕೆಸರುಮಯ

ಕ್ರಿ.ಶ 1390ರಿಂದ 1420ರ ತನಕ ಕಾರ್ಕಳವನ್ನಾಳಿದ ವೀರಬೈರರಸನಿಗೆ ಇಬ್ಬರು ಮಕ್ಕಳು. ಮೊದಲನೆಯಾತ ವೀರಪಾಂಡ್ಯ. ನಂತರದವನು ರಾಮನಾಥ. ಸ್ವಾತಿಕ ಸ್ವಭಾವದ ರಾಮನಾಥ ತನ್ನ ತಂದೆಯ ಜೀವಿತಾವಧಿಯಲ್ಲಿಯೇ ವಿಧಿವಶನಾಗಿದ್ದನು. ಆತನ ಸ್ಮರಣಾರ್ಥವಾಗಿ ರಮಣೀಯ ಪರಿಸರದಲ್ಲಿ ನಿರ್ಮಿಸಲಾಗಿರುವುದೇ ರಾಮಸಮುದ್ರ.
ಗೋಮಟ್ಟಬೆಟ್ಟಕ್ಕೆ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವಂತಹ ಈ ರಾಮ ಸಮುದ್ರದಲ್ಲಿ ಮಳೆಗಾಲದ ವೇಳೆಗೆ ಸಂಗ್ರಹವಾಗುವ ಮಳೆನೀರು ಯಾವುದೇ ಋತುವಿನಲ್ಲಿಯೂ ಬತ್ತಿಹೋಗದೇ ಇರುವುದರಿಂದ ಪುರಸಭೆಗೆ ವರದಾನವಾಗಿದೆ. ಗಮನಾರ್ಹವೆಂದರೆ ಮುಂಡ್ಲಿಯಲ್ಲಿ ನೀರು ධර්ෂ ಹೋದ ಹಾಗೂ ಅನಿವಾರ್ಯ ದಿನಗಳಲ್ಲಿ ಇದೇ ರಾಮ ಸಮುದ್ರ ಕೆರೆಯ ನೀರನ್ನು ಶುದ್ದೀಕರಣಗೊಳಿಸಿ ಕುಡಿಯುವ ನೀರನ್ನಾಗಿ ಪೊರೈಕೆ ಮಾಡಲಾಗುತ್ತಿತ್ತು.
ರಾಮಸಮುದ್ರ ಕೆರೆಯ ಆಳ ದಿನದಿಂದ ದಿನಕ್ಕೆ ಕುಗ್ಗತೊಡಗಿದೆ. ಕೆರೆಯಲ್ಲಿ ಹೆಚ್ಚುತ್ತಿರುವ ಹೂಳು ಅದಕ್ಕೆ ಕಾರಣವು ಆಗಿದೆ.
ಮಿಯ್ಯಾರು ಗ್ರಾಮ ಪಂಚಾಯತ್ -ಕಾರ್ಕಳ ಪುರಸಭೆಯ ಗಡಿಭಾಗದಲ್ಲಿ ಇರುವ ರಾಮಸಮುದ್ರ ಕೆರೆಯ ಹೂಳೆತ್ತುವ ಕಾಮಗಾರಿ ನಡೆದಲ್ಲಿ ಪರಿಸರದ ಇತರ ಇನ್ನೂ ಕೆಲ ಗ್ರಾಮಗಳಿಗೆ ಇದೇ ಕೆರೆಯ ನೀರನ್ನು ಸದುಯೋಗ ಪಡಿಸಲು ಅನುಕೂಲವಾಗಲಿದೆ.






































