ರಾಜ್ಯ ಸರ್ಕಾರದ ವಿರುದ್ಧ ಮೊಳಗಿದ ಆಕ್ರೋಶ; ‘ಝೀರೋ ಬ್ಯಾಲೆನ್ಸ್ ಸರ್ಕಾರ’ : ಶಾಸಕ ಸುನಿಲ್ ಕುಮಾರ್

Picture of RB NEWS

RB NEWS

Bureau Report


ಕಾರ್ಕಳ, ಅ.5: ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ನೀತಿಗಳು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಭಾರಿ ಮಳೆಯ ನಡುವೆಯೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ₹32 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಿರುವುದನ್ನು ಪ್ರಶ್ನಿಸಿದರು.
“ಝೀರೋ ಬ್ಯಾಲೆನ್ಸ್‌ನಲ್ಲಿರುವ ಸರ್ಕಾರ ₹32 ಸಾವಿರ ಕೋಟಿ ಹಣವನ್ನು ಎಲ್ಲಿಂದ ತರುತ್ತದೆ?” ಎಂದು ಪ್ರಶ್ನಿಸಿದ ಸುನಿಲ್ ಕುಮಾರ್, ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ಬಿಪಿಎಲ್ ಕಾರ್ಡ್ ರದ್ದತಿಗೆ ಆಕ್ಷೇಪ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೊಸ ರೇಷನ್ ಕಾರ್ಡ್‌ಗಳನ್ನು ನೀಡಿಲ್ಲ. ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ಹೆಸರಿನಲ್ಲಿ ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಹಣ ದೊರೆಯದೆ ಸಮಸ್ಯೆಯಾಗಿದೆ ಎಂದರು. ಪರಿಷ್ಕರಣೆ ಹೆಸರಿನಲ್ಲಿ ಜಿಲ್ಲೆಯಲ್ಲಿ 47,475 ಪಿಂಚಣಿಗಳನ್ನು ರದ್ದುಪಡಿಸುವ ಪ್ರಯತ್ನ ನಡೆಯುತ್ತಿದ್ದು, ಕಾರ್ಕಳದಲ್ಲೇ 10,700 ಪಿಂಚಣಿಗಳನ್ನು ರದ್ದು ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಗೃಹಲಕ್ಷ್ಮಿ, ಮನೆ ಮಂಜೂರಾತಿ ವಿಚಾರ ಪ್ರಸ್ತಾಪ
ಗೃಹಲಕ್ಷ್ಮಿ ಯೋಜನೆಯ ಹಣ ಹಲವು ತಿಂಗಳಿಂದ ಬಾಕಿಯಿದೆ ಎಂದು ಆರೋಪಿಸಿದ ಸುನಿಲ್ ಕುಮಾರ್, ಜಿಎಸ್‌ಟಿ ಹಾಗೂ ಸಾಲದ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತಿದೆ ಎಂದು ದೂರಿದರು.
ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಿಂದೆ ಬಡವರಿಗೆ ಮನೆಗಳ ಮಂಜೂರಾತಿ ನಡೆಯುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನೆಗಳ ಮಂಜೂರಾತಿಯಲ್ಲಿ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಮರಳು ಹಾಗೂ ಕೆಂಪುಕಲ್ಲಿನ ದರ ಏರಿಕೆಯಿಂದ ಕಟ್ಟಡ ನಿರ್ಮಾಣ ಸೇರಿದಂತೆ ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕೂಲಿ ಕಾರ್ಮಿಕರ ವಿರುದ್ಧ 70ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.
‘ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸರ್ವರ್ ಸಮಸ್ಯೆ ಏಕೆ?’
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಸರ್ವರ್ ಸಮಸ್ಯೆ ಇಲ್ಲದಿದ್ದರೂ, ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿರುವುದು ಏಕೆ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು. ಉಡುಪಿ ಜಿಲ್ಲೆಯಲ್ಲಿ 1.64 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು ದೊರೆಯುತ್ತಿದೆ ಎಂದರು.
ಪ್ರಾಕೃತಿಕ ವಿಕೋಪದಿಂದ ಕಳೆದ ಎರಡು ವರ್ಷಗಳಲ್ಲಿ ಉಂಟಾದ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಕೇಳುತ್ತಿರುವ ರಾಜ್ಯ ಸರ್ಕಾರ, ತನ್ನ ಪಾಲಿನಿಂದ ಎಷ್ಟು ಹಣವನ್ನು ನೀಡಿದೆ ಎಂಬುದನ್ನು ಜನರಿಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
94ಸಿ ಹಾಗೂ ಬಗರ್‌ಹುಕುಂ ಅರ್ಜಿಗಳ ತಿರಸ್ಕಾರದ ಮೂಲಕ ಬಡವರ ಜಮೀನು ಹಕ್ಕಿಗೂ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
‘ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಚುನಾವಣೆ ಎದುರಿಸಲಿ’
“ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ಬದಲು ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ” ಎಂದು ಸುನಿಲ್ ಕುಮಾರ್ ಆಗ್ರಹಿಸಿದರು. ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳನ್ನು ಹಳ್ಳಿಹಳ್ಳಿಗೆ ತಲುಪಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟೆಹೊಳೆ, ಬೋಳ ಪ್ರಭಾಕರ್ ಕಾಮತ್, ಮುಟ್ಲಾಪಾಡಿ ಸತೀಶ್ ಶೆಟ್ಟಿ, ನವೀನ್ ಶೆಟ್ಟಿ ಕುತ್ಯಾರು, ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top