ರಾಜ್ಯಮಟ್ಟದ ಉತ್ತಮ ಶಿಕ್ಷಕಿ: ನೀರ್ಕೆರೆ ಯಮುನಾ ಕೆ
ಫೋಟೋ ಮಾಹಿತಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಕಾಳಿಕಾಂಬ ದೇಗುಲದ ಬಳಿಯ ಯಮುನಾ ಕೆ ಗ್ರಾಮೀಣ ಪ್ರದೇಶದ ನೀರ್ಕೆರೆ ಶಾಲೆಯ ಮುಖ್ಯ ಶಿಕ್ಷಕಿ. 1988ರಲ್ಲಿ ನವೆಂಬರ್ 30ರಂದು ಶಿಕ್ಷಕ ವೃತ್ತಿಗೆ ಸೇರಿದ ಈಕೆ ಪ್ರಸ್ತುತ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿ ಮನೆ ಭೇಟಿಯನ್ನು ಇವರು ನಡೆಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿದರು. ತಮ್ಮ ಶಾಲೆಯಲ್ಲಿ ಶಿಕ್ಷಕರ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರತಿ ವಿದ್ಯಾರ್ಥಿಗೂ ನೀಡುತ್ತಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಸಹಕಾರದಿಂದ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದರು.
ದಾನಿಗಳ ಸಹಕಾರದಿಂದ ತರಗತಿ ಕೊಠಡಿಗಳನ್ನು ನಿರ್ಮಿಸಿ, ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಿ, ಶೌಚಾಲಯವನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತಗೊಳಿಸಿದರು.
ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಪೀಠೋಪಕರಣ, ಪಠೋಪಕರಣಗಳನ್ನು ಲೈಯನ್ಸ್ ಕ್ಲಬ್ ಸಹಕಾರದಿಂದ ಉತ್ತಮಗೊಳಿಸಿದ್ದರು. ಕಂಪ್ಯೂಟರ್ ಲ್ಯಾಪ್ಟಾಪ್ ಗಳ ಮೂಲಕ ಸ್ಮಾರ್ಟ್ ಕ್ಲಾಸ್ ಲ್ಯಾಬನ್ನು ನಿರ್ಮಿಸಿ ಪ್ರಸ್ತುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಶಾಲಾ ಆಟದ ಮೈದಾನವನ್ನು ಜಿಲ್ಲಾ ಪಂಚಾಯತ್ನ ಅನುದಾನದಲ್ಲಿ ಮೈದಾನವನ್ನು ವಿಸ್ತರಿಸಿದ್ದರು.
ವಿಜ್ಞಾನದ ಹಬ್ಬ, ವಿವಿಧ ಸುರಕ್ಷಾ ರಕ್ಷಣೆಯ ಮಾಹಿತಿ, ಕ್ರೀಡಾಕೂಟ ಸಂಯೋಜನೆ, ವಿದ್ಯಾರ್ಥಿಗಳಿಗೆ ವ್ಯವಹಾರಿಕ ಅಗತ್ಯದ ಮಾಹಿತಿ, ತ್ಯಾಜ್ಯ ನೀರು, ಕಸ ಸಮರ್ಪಕವಾಗಿ ವಿಲೇವಾರಿ ಮಾಡಿದ್ದಾರೆ. ಪರಿಸರ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸಿ, ಕಸದಿಂದ ರಸದಂತಹ ಪಾಠಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವವನ್ನು ನಡೆಸಿ ವಿದ್ಯಾರ್ಥಿಗಳ ಪ್ರತಿಯೊಂದು ಪ್ರತಿಭೆಗೆ, ಸ್ವ ಅಧ್ಯಯನಕ್ಕೆ ಪೂರಕ ಅವಕಾಶಗಳನ್ನು ನೀಡಿದ ಕಾರಣ ಶ್ರೀಮತಿ ಯಮುನಾ ಕೆ ಅವರನ್ನು ಪ್ರಶಸ್ತಿ ಅರಸಿಕೊಂಡು ಬಂದಿದೆ. ಈ ಪ್ರಶಸ್ತಿ ಇನ್ನಷ್ಟು ಅಭಿವೃದ್ಧಿಗೆ ತನಗೆ ಅವಕಾಶವನ್ನು ನೀಡಿದೆ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.





































