ಉಡುಪಿ : ಮೂಡಾ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಪ್ರೊಸಿಕ್ಯೂಷನಿಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯ ಹಿಂದೆ ಕೇಂದ್ರ ಸರಕಾರದ ಭ್ರಷ್ಟ ರಾಜಕೀಯ ಶಕ್ತಿಯ ದುರ್ಬಳಕೆ ಅಡಗಿದೆ. ಬಿಜೆಪಿಯ ಈ ಸಂವಿಧಾನ ವಿರೋಧಿ ನಡೆ ಮುಂದೆ ಅದಕ್ಕೇ ಮುಳುವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಹಿಂದಾ ವರ್ಗದ ಶಕ್ತಿ ಕೇಂದ್ರವಾಗಿರುವ ನಾಯಕನೊಬ್ಬನ ವಿರುದ್ಧದ ದುರುದ್ಧೇಶಪೂರಿತ ರಾಜಕೀಯ ಷಢ್ಯಂತ್ರ ದೇಶದ ಪ್ರಜಾತಂತ್ರ ವ್ಯವಸ್ಥೆಯ ಆಶಯದಡಿಯಲ್ಲಿ ಸಂತ್ರಸ್ತ ಸಮಾಜದ ಪ್ರಜಾಕ್ರಾಂತಿಗೆ ಕಾರಣವಾದೀತು. ಇದಕ್ಕೆ ಬಿಜೆಪಿ ಬಹಳಷ್ಟು ಬೆಲೆ ತೆರಬೇಕಾದೀತು. ಊರುಗೋಲಿನ ತಾತ್ಕಾಲೀಕ ಸಿಂಹಾಸನದಲ್ಲಿ ಕುಳಿತುಕೊಂಡು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ದೇಶದ ಸಾಂವಿಧಾನಿಕ ಬದ್ಧತೆಯ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ತನ್ನ ಅಧಿಕಾರ ವಿಸ್ತರಿಸುವ ಗುಂಗಿನಲ್ಲಿರುವ ಬಿಜೆಪಿಗೆ ಬಹು:ಶ ದೇಶದ ಶೋಷಿತ ಅಹಿಂದಾ ವರ್ಗದ ನಾಡಿ ಮಿಡಿತವಾಗಲಿ, ನೆರೆ ದೇಶಗಳ ವರ್ತಮಾನದ ರಾಜಕೀಯ ಪರಿಸ್ಥಿತಿಯ ವಾಸ್ತವತೆಯಾಗಲಿ ಅರ್ಥ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಕುಮಾರ ಸ್ವಾಮಿ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತ ತನಿಖೆ ನಡೆಸಿ ರಾಜ್ಯಪಾಲರಿಗೆ ಪ್ರೋಷಿಕ್ಯೂಶನಿಗೆ ವರದಿ ಸಲ್ಲಿಸಿದೆ. ಆ ಪ್ರಕರಣವನ್ನು ಹಾಗೆಯೇ ಮಡಚಿಟ್ಟುಕೊಂಡ ರಾಜ್ಯಪಾಲರಿಗೆ, ಯಾವುದೇ ಸ್ವಾಯತ್ತ ತನಿಖಾ ಸಂಸ್ಥೆಯಿಂದ ದೂರು ದಾಖಲಾಗದ ಮತ್ತು ಪ್ರಸಕ್ತ ನ್ಯಾಯಮೂತಿಯೊಬ್ಬರಿಂದ ತನಿಖೆ ನಡೆಯುತ್ತಿರುವ ಪ್ರಕರಣದಲ್ಲಿ ಸಿದ್ಧರಾಮಯ್ಯನವರ ವಿರುದ್ದ ರಾಜ್ಯಪಾಲರಿಗೆ ಪ್ರೊಸಿಕ್ಯೂಶನಿಗೆ ಒತ್ತಡ ತಂದು ಬಿಜೆಪಿ ತನ್ನ ಬಾಲಕ್ಕೆ ತಾನೇ ಉರಿಹಚ್ಚಿಕೊಂಡಿದೆ. ಸಚ್ಚಾರಿತ್ರ್ಯವಂತ ಸಿದ್ಧರಾಮಯ್ಯ ಸಂವಿಧಾನದ ರಕ್ಷಣೆಯಡಿಯಲ್ಲಿ ಗೆದ್ದು ಬರುತ್ತಾರೆ ಎಂದು ಅವರು ಹೇಳಿದ್ದಾರೆ.



































