ರಾಂಬೂಟನ್ ಬೆಳೆಗಾರರು ಸಂಘಟಿತರಾದರೆ ಉತ್ತಮ ಮಾರುಕಟ್ಟೆ ಸಾಧ್ಯ: ಕ್ಷಮಾ ಪಾಟೀಲ್
RB NEWS
Bureau Report
ರಾಂಬೂಟನ್ ಬೆಳೆಗಾರರು ಸಂಘಟಿತರಾದರೆ ಉತ್ತಮ ಮಾರುಕಟ್ಟೆ ಸಾಧ್ಯ: ಕ್ಷಮಾ ಪಾಟೀಲ್
ಕಾರ್ಕಳ, ಜು.16: ರಾಂಬೂಟನ್ ಬೆಳೆಗಾರರು ಸಂಘಟನಾತ್ಮಕವಾಗಿ ಒಗ್ಗೂಡಿದಲ್ಲಿ ಮಾತ್ರ ಉತ್ತಮ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಉಡುಪಿ ತೋಟಗಾರಿಕೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಅಭಿಪ್ರಾಯಪಟ್ಟರು. ಅವರು ಕಾರ್ಕಳದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ತೋಟಗಾರಿಕೆ ಇಲಾಖೆ ಹಾಗೂ ಬ್ರಹ್ಮಾವರದ ಪ್ರಾದೇಶಿಕ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಂಬೂಟನ್ ಬೆಳೆ ಸವರುವಿಕೆ ತಂತ್ರಜ್ಞಾನ (Pruning Technique) ಮತ್ತು ನಂತರದ ನಿರ್ವಹಣೆ ಕುರಿತು ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಬೆಳೆಗಳಲ್ಲಿ ತಂತ್ರಜ್ಞಾನಗಳ ಹಂಚಿಕೆ, ಅಗತ್ಯ ಪರಿಕರಗಳ ಲಭ್ಯತೆ ಮತ್ತು ಉತ್ತಮ ಮಾರುಕಟ್ಟೆ ಅನ್ವೇಷಣೆಗೆ ರೈತ ಉತ್ಪಾದಕ ಕಂಪನಿಗಳು ಅಥವಾ ಬೆಳೆಗಾರರ ಸಂಘಗಳು ಅಗತ್ಯವಾಗಿದ್ದು, ರಾಂಬೂಟನ್ ಬೆಳೆಯಲ್ಲೂ ಇಂತಹ ಸಂಘಟನೆಗಳ ನಿರ್ಮಾಣ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಪ್ರಾದೇಶಿಕ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಅವರು ರೈತರಿಗೆ ರಾಂಬೂಟನ್ ಬೇಸಾಯ ಕುರಿತು ತಾಂತ್ರಿಕ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಕಾರ್ಕಳದ ಅಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್ ವಹಿಸಿದ್ದರು. ಉಪಾಧ್ಯಕ್ಷ ರವಿರಾಜ್ ಉಪಾಧ್ಯಾಯ, ನಿರ್ದೇಶಕರುಗಳಾದ ಕುಲದೀಪಕ್ ಸುವರ್ಣ, ರಘುವೀರ್ ಶೆಣೈ ಮತ್ತು ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಪ್ರೀತಮ್ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ನಿರ್ವಹಿಸಿದರು.