ಮೂಡುಬಿದಿರೆ: ಪರೀಕ್ಷೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿ ಯೊಬ್ಬ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಯಮರಾಯನಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಬನ್ನಡ್ಕ ಎಂಬಲ್ಲಿ ಸಂಭವಿಸಿದೆ.
ಪಡುಮಾರ್ನಾಡು ಪಂಚಾಯತ್ ಬಳಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ದುರ್ದೈವಿ.
ವಿದ್ಯಾರ್ಥಿ ಆದಿತ್ಯ ಇಂದು ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೋಗಲು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು, ಈ ಸಂದರ್ಭ ಕಾರಿನವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.