ರಜೆಯ ಮಜಾ ಪೋಷಕರೇ ….ಮಕ್ಕಳಿಗೆ ರಜಾದಿನಗಳು ಆರಂಭಗೊಂಡಿವೆ.. ಅವರ ರಜಾ ದಿನಗಳಲ್ಲಿ ಪೋಷಕರಿಗೆ ಒಂದಿಷ್ಟು ಸಲಹೆಗಳು… ((Summer camp ನಿಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳುವ ಒಂದು ಮಾರ್ಗ ಅಷ್ಟೇ)
ಪ್ರೀತಿಯ ಫೋಷಕರೇ…
ಎರಡು ತಿಂಗಳು ರಜೆಯಲ್ಲಿ ಮಕ್ಕಳು ನಿಮ್ಮೊಂದಿಗಿರುವರು. ಈ ಸಮಯ ನಿಮಗೆ ಆನಂದದಾಯಕವಾಗಿರಲೆಂದು ಕೆಲವು ಸಲಹೆಗಳು..
ಮಕ್ಕಳಿಗೆ ಬಾಲ್ಯ ಎನ್ನುವುದು ಜೀವನದ ಅತ್ಯಂತ ಪ್ರಮುಖ ಘಟ್ಟ.
ದಿನಕ್ಕೆ ಎರಡು ಬಾರಿಯಾದರೂ ಮಕ್ಕಳ ಜೊತೆಗೂಡಿ ಊಟ ಮಾಡಿ. ಊಟ ಮಾಡುವಾಗ ಆ ಊಟದಲ್ಲಿ ಬಳಸುವ ವಸ್ತುಗಳನ್ನು ಬೆಳೆಯಲು ರೈತರು ಸುರಿಸಿದ ಬೆವರಿನ ಬಗ್ಗೆ ಅವರಿಗೆ ತಿಳಿಸಿ. ಹಾಗೆಯೇ ಕೃಷಿಯ ಮಹತ್ವ, ಕೃಷಿಕನ ಜೀವನ ಕ್ರಮ, ಶ್ರಮ ಜೀವನದ ಅರಿವು ನಿಮ್ಮ ಮಗುವಿಗಾಗಲಿ.
ಅವರವರ ಕೆಲಸ ಅವರೇ ಮಾಡಲಿ. ಅವರೇ ಊಟ ಬಡಿಸಿಕೊಳ್ಳುವುದು, ಇತರರಿಗೂ ಬಡಿಸುವುದು. ಊಟದ ನಂತರ ಅವರ ತಟ್ಟೆ ಅವರೇ ತೊಳೆದುಕೊಳ್ಳುವುದು. ಅವರ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾಗಿ ಜೋಡಿಸಿಟ್ಟುಕೊಳ್ಳುವುದು. ಹಾಗೆಯೇ ಅವುಗಳನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವುದನ್ನು ನಿಧಾನವಾಗಿ, ಹಂತ ಹಂತವಾಗಿ ಕಲಿಸಿ..
ದಿನಕ್ಕೊಂದು ಸುಭಾಷಿತವನ್ನೋ, ಒಗಟನ್ನೋ, ವಚನಗಳನ್ನೋ ಕಲಿಯಲು ಪ್ರೇರೇಪಿಸಿ ಹಾಗೂ ಅವುಗಳನ್ನು ಬರೆದಿಡಲು ತಿಳಿಸಿ.
ರಜಾ ದಿನಗಳಲ್ಲಿ ಅಕ್ಕ ಪಕ್ಕದ ಕನಿಷ್ಠ ಮೂರು ಮನೆಗಳಿಗಾದರೂ ಭೇಟಿಮಾಡಿ ಅವರೊಂದಿಗೆ ಸಂವಹನ ಮಾಡಲು ತಿಳಿಸಿ. ಇದರೊಂದಿಗೆ ಎಲ್ಲರೊಡನೆ ಬೆರೆತು ಬಾಳುವ ಕಲೆ ಸಿದ್ಧಿಸುತ್ತದೆ.
ದೊಡ್ಡವರು ಏನೇ ಕೆಲಸ ಮಾಡುತ್ತಿರಲಿ, ಅವರಿಗೆ ಸಹಾಯ ಮಾಡಲು ಕಲಿಸಿ. ಅಡುಗೆ ಮನೆಯಲ್ಲಿ ಅಮ್ಮನಿಗೆ, ಪೂಜೆಯಲ್ಲಿ ಹಿರಿಯರಿಗೆ, ಮನೆ ಸ್ಬಚ್ಛತೆಯಲ್ಲಿ ಇತರರಿಗೆ ಸಹಾಯ ಮಾಡುವುದನ್ನು ಮಕ್ಕಳು ಕಲಿಯಲಿ.
ಬಹಳ ಮುಖ್ಯವಾದ ಸಲಹೆಯೆಂದರೆ.. ನೀವು ಏನೇ ಕೆಲಸ ಮಾಡಿ ಜೀವನ ಮಾಡುವವರಾಗಿರಲಿ.. ಆ ಸ್ಥಳಕ್ಕೆ ಮಕ್ಕಳನ್ನು ರಜಾ ದಿನಗಳಲ್ಲಿ ಕರೆದೊಯ್ಯಿರಿ. ನೀವು ಹಣ ಸಂಪಾದನೆ ಮಾಡಲು, ಮನೆಯ ಸದಸ್ಯರ ಏಳಿಗೆಗೆ ಶ್ರಮಿಸುವುದು, ನಿಮ್ಮ ಶ್ರಮದ ಬಗ್ಗೆ ಅವರಿಗೆ ಸಂಪೂರ್ಣ ಅರಿವಾಗಲಿ.
ಊರಿನ ಹಬ್ಬ ಹರಿದಿನ, ಜಾತ್ರೆ ಮದುವೆಗಳಿಗೆ ಮುಂಚಿತವಾಗಿಯೇ ಕರೆದುಕೊಂಡು ಹೋಗಿ, ಅದರಲ್ಲಿ ನಿರ್ವಹಿಸುವ ಕೆಲಸಗಳೂ ಹಾಗೂ ಸಂಪ್ರದಾಯಗಳ ಅರಿವು ಮಾಡಿಕೊಡಿ. ಅದರಲ್ಲಿ ಭಾಗವಹಿಸಲು ಅನುವು ಮಾಡಿಕೊಡಿ.
ಸಾಧ್ಯವಾದಷ್ಟು ಮಕ್ಕಳಿಗೆ ಕಥೆ ಹೇಳಿ. ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆತನ, ಹಿರಿಯರ ಬದುಕು ಬವಣೆ, ಸಾಹಸ, ಹಾಗೂ ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತು ಮನೆತನದ ಚರಿತ್ರೆಯನ್ನು ಮನಮುಟ್ಟುವಂತೆ ಹಂಚಿರಿ.. ಇದು ಅವರಿಗೆ ತಮ್ಮ ಮೂಲದ ಅರಿವಾಗುತ್ತದೆ. ತಾನೂ ಮುಂದಿನ ವಾರಸುದಾರ ಎಂಬ ಭಾವನೆ ಬಾಲ್ಯದಿಂದಲೇ ಮೂಡುತ್ತದೆ.
ಸಾಧ್ಯವಾದಷ್ಟು ಟಿವಿ, ಮೊಬೈಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಮಕ್ಕಳು ನಿಮ್ಮೆದುರಿರುವಾಗ ನೀವೂ ದೂರವಿರಿ. ಮಕ್ಕಳನ್ನೂ ದೂರವಿರಿಸಿ.. ಇವುಗಳನ್ನು ಬಳಸಲು ಅವರಿಗೆ ಇಡೀ ಜೀವನವಿರುತ್ತದೆ.
ಮಕ್ಕಳು.. ಜೀವ ಜಗತ್ತಿನ ಅದ್ಭುತ ವ್ಯಕ್ತಿಗಳು. ಅವರು ಚಿಮ್ಮುವ ಚೈತನ್ಯಗಳು. ಈಗ ಅವರಿಗೆ ತಂದೆ-ತಾಯಿ, ಕೇವಲ ತಾತ್ಕಾಲಿಕ ರಕ್ಷಕರಷ್ಟೇ… ಗರಿ ಮೂಡುತ್ತಿದ್ದಂತೆ ಅವರು ಬಾನೆತ್ತರಕ್ಕೆ ಹಾರಿ ಜೀವನದ ಬಾಹ್ಯಾಕಾಶದಲ್ಲಿ ಮಿನುಗುವ ನಕ್ಷತ್ರಗಳಾಗುವರು…
ಅವರ ಪ್ರಭೆ ಹೆಚ್ಚಿಸಲು, ಪೋಷಕರು, ತಂದೆ-ತಾಯಿಗಳು ಈಗಿನಿಂದಲೇ ಈ ಸಲಹೆ ಪಾಲಿಸೋಣ… ಮಕ್ಕಳ ಭವಿಷ್ಯ ಉಜ್ವಲ ಗೊಳಿಸೋಣ





































