ಯೋಜನೆಯ ಹಳಿ ತಪ್ಪಿಸಿಕೊಂಡ ಬಿಕರ್ನಕಟ್ಚೆ-ಸಾಣೂರು 169NH

Picture of RB NEWS

RB NEWS

Bureau Report


ಮಂಗಳೂರಿನ ಬಿಕರ್ನಕಟ್ಟೆಯಿಂದ ಮೂಡುಬಿದಿರೆಯಾಗಿ ಸಾಣೂರುಗೆ ತಲುಪುವ 169ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಜಾಗವೊಂದು ಗುರುತಿಸಲ್ಪಟ್ಟು ಅಲ್ಲಿ ಸಂಭವಿಸುತ್ತಿರುವ ಅಪಘಾತ ಹಾಗೂ ಸಾವು ನೋವುಗಳು ಭಾರೀ ದೊಡ್ಡ ಆಘಾತಕರ ಸುದ್ದಿಯಾಗಿ ಪ್ರಸಾರಗೊಳ್ಳುತ್ತಿದೆ.
ಬೆಳುವಾಯಿ,ಕೆಸರುಗದ್ದೆ,ಪಡುಮಾರ್ನಾಡು,ಬನ್ನಡ್ಕ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಾಹನ ಸಂಚಾರಕ್ಕೆ ರಸ್ತೆ ತೆರವುಗೊಳಿಸಿದ ನಂತರದಿಂದ ಇವತ್ತಿನ ತನಕ ಸುಮಾರು ಇಪ್ಪತ್ತನಾಲ್ಕು ಅಪಘಾತಗಳಲ್ಲಿ ಅನೇಕ ಮಂದಿಗೆ ನೋವು,ಅಂಗವೈಕಲ್ಯಗಳುಂಟಾಗಿರುವುದು ಮತ್ತು ಒಟ್ಟು ಅದೇ ಪರಿಸರದ ಐದು ಮಂದಿ ಸಹಿತ ಒಟ್ಟು ಒಂಭತ್ತು ಮಂದಿ ಸಾವನ್ನಪ್ಪಿದ್ದು ಪರಿಸರ ನಿವಾಸಿಗಳಿಗೆ ಇದು ಹೆದ್ದಾರಿಯಲ್ಲ ಮರಣದಾರಿಯೇ ಅನ್ನುವ ಭಯ ಶುರುವಾಗಿದೆ.

NHAIಪಿಡಿ

ರಾಷ್ಟ್ರೀಯ ಹೆದ್ದಾರಿ ವಿಭಾಗದ ಪಿ. ಡಿ(project director) ಯ ಬೇಜವಾಬ್ದಾರಿ ಹಾಗೂ ಮಹಾನಗರದಲ್ಲಿ ಹವಾನಿಯಂತ್ರಿತ ಕಚೇರಿಯೊಳಗೇ ಕುಳಿತುಕೊಂಡು ರಸ್ತೆ ನಿರ್ಮಾಣದ ಉಸ್ತುವಾರಿ ಅಭಿಯಂತರುಗಳಿಗೆ ಪಾಠ ಹೇಳಿರುವುದರ ಪರಿಣಾಮವೇ ಈ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಪ್ರಧಾನ ಕಾರಣ. ಬಹುಶಃ ಆ #ಪರಮಾತ್ಮ ನಿಗೆ ಬಿಕರ್ನಕಟ್ಟೆ-ಸಾಣೂರು ರಸ್ತೆಯನ್ನೂ ನೋಡುವ ಅಗತ್ಯ ಮತ್ತು ಅವಕಾಶ ಇನ್ನೂ ಒದಗಿ ಬರಲಿಲ್ಲ ಎಂತಲೇ ಹೇಳಬೇಕು. ಆತನು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ಈ 169ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣ ಮೃದಂಗ ಬಾರಿಸುವುದಕ್ಕೆ ಅಪಘಾತಗಳೇ ನಡೆಯುತ್ತಿಲ್ಲ ಸ್ಪಷ್ಟ.
ಕಾರ್ಕಳದ ರಸ್ತೆಯಲ್ಲಿ ಬನ್ನಡ್ಕ ದೈವಸ್ಥಾನದ ಹತ್ತಿರ ಬರುವಾಗಲ್ಲಿಂದ ಮುಂದೆ ನೋಡುತ್ತ ಸಾಗಿದರೆ ಎದುರು ಭಾರೀ ಎತ್ತರದ ಡಾಮಾರು ದಿನ್ನೆಯ ಹಾಗೆ ರಸ್ತೆ ಕಾಣುತ್ತದೆ. ಕಾರ್ಕಳದಿಂದ ಮೂಡುಬಿದಿರೆಗೆ ಬರುವಾಗಲೂ ಹಾಗೇ ಭಯಂಕರ ದೃಶ್ಯ ಗೋಚಾರವಾಗುತ್ತದೆ.
ಸರಿಯಾಗಿ ಮಣ್ಣು ತೆಗೆದು ಸಮತಟ್ಚು ಮಾಡದೆ ಎಷ್ಟಾಗಿದೆಯೋ ಅಲ್ಲಿಗೇ ತಳಪಾಯ ಹಾಕಿ ರಸ್ತೆ ನಿರ್ಮಾಣ ಮಾಡಿರುತ್ತಾರೆ. ಇನ್ನು ಕೆಲವೆಡೆ ಕಪ್ಪೆ ನುಂಗಿದ ಕೇರೆ ಹಾವಿನ ಹೊಟ್ಟೆಯ ರೀತಿ ಇದೆ!

DBLCom

ರಾಷ್ಚ್ರೀಯ ಹೆದ್ದಾರಿ ನಿರ್ಮಾಣ ಪ್ರಾರಂಭವಾಗುವುದಕ್ಕೆ ಶೇ ಎಂಭತ್ತರಷ್ಟು ಜಾಗ ವಶಕ್ಕೆ ಬಂದಿರಬೇಕು.ಆದರೆ ಈ ರಾ. ಹೆದ್ದಾರಿ ಕಾಮಗಾರಿ ಆರಂಭವಾಗುವಾಗ ಶೇ ಐವತ್ತರಷ್ಟೂ ಜಾಗವನ್ನು ಇಲಾಖೆಯು ವಶಪಡಿಸಿಕೊಳ್ಳುವಲ್ಲಿ ಸಫಲವಾಗಿರಲಿಲ್ಲ. ಆ ಮುಖ್ಯ ಕಾರಣದಿಂದಲೂ ನಿರ್ಮಾಣ ಕಾರ್ಯದಲ್ಲಿ ಅಡೆತಡೆಗಳಾದುವು.
ಡಿಬಿಎಲ್ ಕಂಪನಿಯು ಹೆದ್ದಾರಿ ನಿರ್ಮಾಣದಲ್ಲಿ ಬಲಿಷ್ಠ ಸಾಮರ್ಥ್ಯವನ್ನು ಹೊಂದಿದೆಯಾಗಿದ್ದರೂ 169ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಬಹಳಷ್ಟು ಅಪವಾದಗಳಿಗೆ ಕಾರಣವಾಗಿದೆಯಾದರೆ ಅದಕ್ಕೆ ಹೆದ್ದಾರಿ ಇಲಾಖೆಯವರು ಕಣ್ಮುಚ್ಚಿಕೊಂಡು ಓಡಾಡಿದ್ದೇ ಕಾರಣವೆನ್ನಬಹುದು. ಬಲವಾದ ಕಾರಣಗಳಿಲ್ಲದೇ ಆಗಿದ್ದರೆ ಬನ್ನಡ್ಕದಲ್ಲಿ ರಸ್ತೆ ಹಾಗಾಗುವುದಿಲ್ಲ.
ಹೆದ್ದಾರಿಯ ಯೂ ಟರ್ನ್ ವಿಷಯಕ್ಕಿಂತಲೂ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶ ಮಾಡುವ ಯಾವುದೇ ವಾಹನಕ್ಕೂ ಬೇಕಾದಷ್ಟು ಸ್ಥಳಾವಕಾಶವಿಲ್ಲದೆ ನಡುರಸ್ತೆಗೆ ವಾಹನದ ಮುಖ ತಂದು ಎಡ,ಬಲಕ್ಕೆ ತಿರುಗುವುದೇ ಇಲ್ಲಿಯ ಮತ್ತೊಂದು ಗಂಭೀರ ಸಮಸ್ಯೆ. ರಸ್ತೆಯ ಇಕ್ಕಲದಲ್ಲಿ ಒಂದು ಇಂಚು ಸ್ಥಳವಿಲ್ಲದೆ ಬೇಲಿ ಹಾಕಿದ್ದಾರೆ. ಪ್ರವೇಶ ಮಾಡುವಲ್ಲಿ ವಿಶಾಲ ಜಾಗ ಕೊಡಬೇಕಾದುದನ್ನು ಇಲಾಖೆ ಮರೆತಂತಿದೆ. ಪುಲ್ಗೇರಿ ಬಜಗೋಳಿ ಹೆದ್ದಾರಿಯ ನಿರ್ಮಾಣವನ್ನೊಮ್ಮೆ ಸರಿಯಾಗಿ ಗಮನಿಸಲಿ.
ಎಲ್ಲಿ ಪುನರ್ರಚನೆಯಾಗುತ್ತಿದೆ,ಆಗಬೇಕು,ರಿಪೇರಿ ಮಾಡಬೇಕು ಎನ್ನುವ ಸ್ಪಷ್ಟ ನಿರ್ದೇಶನವಿಲ್ಲದೆ ಗೊಂದಲಕ್ಕೊಳಗಾದವರಂತೆ ಕಂಪನಿಯು ಅಲ್ಲಲ್ಲಿ ಅಗೆಯುತ್ತ ರಸ್ತೆ ಬಂದ್ ಮಾಡಿಕೊಂಡು ರಾದ್ಧಾಂತ ಸೃಷ್ಠಿಸುತ್ತಲೇ ಇದೆ.
ಈ ರಸ್ತೆಯಲ್ಲಿ ಏಕಮುಖ ಯಾವುದು ಎರಡೂ ಮುಖ ರಸ್ತೆ ಯಾವುದು ಅನ್ನುವುದನ್ನು ವಾಹನ ಚಾಲಕರಿಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗದಂತ ಅವ್ಯವಸ್ಥೆ ನಿರ್ಮಾಣವಾಗಿದೆ.ಇನ್ನೊಂದರ್ಥದಲ್ಲಿ ಡಿಬಿಎಲ್ ಕಂಪನಿಯೇ ಇಕ್ಕಟ್ಟಿನಲ್ಲಿ ಸಿಲುಕಿದೆ.
ರಾ. ಹೆದ್ದಾರಿ ನಿರ್ಮಾಣದ ಆರಂಭದಲ್ಲಿ ಯಾವುದೇ ತೊಂದರೆ ತೊಡಕಾಗಲಿಲ್ಲವಾದರೂ ರಸ್ತೆ ನಿರ್ಮಾಣವಾಗುತ್ತಿದ್ದಂತೆ ಸರ್ವಿಸ್ ರಸ್ತೆಯ ಅಗತ್ಯ ಕಾಣಿಸುತ್ತದೆಯಾದರೂ ಹೆದ್ದಾರಿ ಇಲಾಖೆಯ ಪಿ. ಡಿ. ಯು ಅದನ್ನು ಕ್ಷೇತ್ರದ ಸಂಸದನಿಗೆ ತಿಳಿಸಿದ್ದೇ ಇಲ್ಲ. ಡಿಬಿಎಲ್ ಕಂಪನಿಯೇ ಸರಿಯಿಲ್ಲ ಎಂದು ಸಂಸದರಿಗೆ ಮನದಟ್ಟು ಮಾಡಿ ಅವರು ಕೂಡಾ ಇತ್ತ ತಲೆಹಾಕದಂತೆ ಮಾಡಿದ್ದೇ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಎಂದು ಹೇಳಲೇಬೇಕಾಗುತ್ತದೆ.

ಗಡ್ಕರಿಗೆAppeal

169ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಗೆ ಯೋಜನೆ ಮತ್ತು ಅನುದಾನ ಕೊಡುವಂತೆ ಕಳೆದ ವಾರ ಸಂಸದ ಬೃಜೇಶ್ ಚೌಟ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿರುವುದಾಗಿ ಸುದ್ದಿ ಪ್ರಕಟವಾಗಿದೆ. ಅನ್ನ ಬೆಂದು ಅಂಬಲಿಯಾದ ನಂತರ ಈ ಮನವಿಯನ್ನು ಮಾಡಿರುವುದು ಸಂಸದರು ತನ್ನ ಘೋರ ಅಪರಾಧವನ್ನು ಹಾಗೂ ಸಾವಿರಾರು ಕೋಟಿ ಮೊತ್ತಗಳ ಯೋಜನೆಯ ಕಾಮಗಾರಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ನಾಗರಿಕರು ಆರೋಪಿಸುವುದಕ್ಕೆ ಸಾಕ್ಷಿಯಾಗುತ್ತಿದೆ.

ಪಿಡಿ_ವಜಾವಾಗಬೇಕಾಗಿದೆ

169ರಾಷ್ಟ್ರೀಯ ಹೆದ್ದಾರಿಗೆ ಅನ್ವಯಗೊಂಡ ಮಂಗಳೂರು ವಿಭಾಗದ ರಸ್ತೆ ನಿರ್ಮಾಣದ ಪ್ರಾಜೆಕ್ಟ್ ನಿರ್ದೇಶಕರನ್ನು ಸಹಿತ ಇನ್ನಿತರರ ಜವಾಬ್ದಾರಿ ಮರೆತು ಕೆಲಸ ಮಾಡಿದ ಅಭಿಯಂತರುಗಳನ್ನು ಸೇವೆಯಿಂದ ಅಮಾನತ್ತು ಅಥವಾ ವಜಾ ಮಾಡುವಂತೆ ಕೇಂದ್ರ ಸರಕಾರವನ್ನು ಸಂಸದ ಬೃಜೇಶ್ ಚೌಟ ಅವರು ಯಾವುದೇ ಮುಲಾಜಿಲ್ಲದೆ ಒತ್ತಾಯಿಸುವ #ಧರ್ಮಕಾರ್ಯ ಮಾಡಬೇಕಾಗಿದೆ. ಅಷ್ಟಕ್ಕೂ ಪ್ರಯತ್ನಪಡದೇ ಇದ್ದಲ್ಲಿ ತಾವೂ ಕೂಡಾ ಹೊಣೆಹೊತ್ತು ನಾಗರಿಕರ ಕ್ಷಮೆ ಯಾಚಿಸುವ ರಾಜಕಾರಣಕ್ಕೆ ತಯಾರಾಗಲೇಬೇಕು.
ಇಲಾಖೆಯ ಅಧಿಕಾರಿಗಳನ್ನು ಮಂಗಳೂರಿನ ತನ್ನ ಕಚೇರಿಗೆ ಆಹ್ವಾನಿಸಿ ಮಾತುಕತೆ ನಡೆಸಿದ್ದಾಯಿತು ಇನ್ನು ಮುಂದುವರಿದ ಭಾಗವಾಗಿ ಎಲ್ಲ ಅಧಿಕಾರಿಗಳು ಮತ್ತು ಡಿಬಿಎಲ್ ಕಂಪನಿಯ ಅಭಿಯಂತರುಗಳನ್ನು ಸಾಣೂರು,ಬನ್ನಡ್ಕ ಮತ್ತಿತರ ಕಡೆಗಳಿಗೆ ಕರೆತರುವುದು ಹಾಗೂ ಆ ಸಂದರ್ಭದಲ್ಲಿ ನಾಗರಿಕರ ಸಭೆಯನ್ನೂ ಕರೆದು ಅವರಿಗೆ ಧೈರ್ಯ ತುಂಬುವ,ರಸ್ತೆಯ ಗಂಭೀರ ಸಮಸ್ಯೆಗಳನ್ನು ಬಹೆಹರಿಸುವ ಭರವಸೆಯನ್ನು ಕೊಡುವುದು ಬಹಳ ಅಗತ್ಯವಾಗಿದೆ.
169ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣಕ್ಕೆ ಕಾರಣವಾದುದನ್ನು ಯಾರು ಒಪ್ಪಿಕೊಳ್ಳುತ್ತಾರೆ ಎನ್ನುವುದೂ ಮುಖ್ಯವಾಗಿದೆ.
ಕಳೆದ ವಾರ ಸಂಸದ ಬೃಜೇಶ್ ಚೌಟ ಸ್ವತಃ ನನ್ನಲ್ಲೇ ಹೇಳಿದ್ದರು, ಎಲ್ಲ ಕಡೆಯಲ್ಲೂ ಸೂಚನಾ ಪಲಕ ಅಳವಡಿಸುವುದಕ್ಕೆ ಸಲಹೆ ನೀಡಿದ್ದೇನೆ ಎಂದು. ಅವರು ಹೇಳಿದ ನಂತರ ಎರಡು ಅಪಘಾತಗಳಾದುವು ಪಲಕಗಳು ಬಂದಿಲ್ಲ! ಸಂಸದರ ಮಾತಿಗೆ ಹೆದ್ದಾರಿ ಇಲಾಖೆ ಕಿಮ್ಮತ್ತು ಕೊಡದ ಕಾರಣವಾಗಿಯೇ ಅಷ್ಟೊಂದು ಅವ್ಯವಸ್ಥೆ ಉಂಟಾಯಿತೆನ್ನುವುದಕ್ಕೆ ಸಂಕೋಚವಿಲ್ಲವೆನ್ನಬಹುದು.ಸಂಸದರು 169ಹೆದ್ದಾರಿ ಬಗ್ಗೆ ಇಲಾಖಾಧಿಕಾರಿಗಳನ್ನು ಸೂಕ್ತ ರೀತಿಯಲ್ಲಿ ಎಚ್ಚರಿಸಿಲ್ಲ ಹಾಗೂ ಸ್ಥಳಕ್ಕೆ (ಒಮ್ಮೆಯೂ ?)ಭೇಟಿ ನೀಡಿ ಪರಿಶೀಲನೆ ಮಾಡಿಲ್ಲದ್ದೂ ಅಧಿಕಾರಿಗಳು ಇಚ್ಚಾನುಸಾರ ಇರುವುದಕ್ಕೆ ಸಲುಗೆ ದೊರಕಿತು ಅನ್ನಬಹುದು.
ಸಂಸದ ಮತ್ತು ರಾ. ಹೆದ್ದಾರಿ ಪಿ. ಡಿ. ಯವರು ಯಾವುದೇ ಮನಸ್ತಾಪ,ಮುಜುಗರ,ಭಯ ಬಿಟ್ಟು ಒಮ್ಮೆಯಾದರೂ 169ರಾಷ್ಟ್ರೀಯ ಹೆದ್ದಾರಿಗಿಳಿಯಲೇಬೇಕಾಗಿದೆ.

ಸಾರ್ವಜನಿಕ ಗಮನಕ್ಕೆ

169ರಾಷ್ಟ್ರೀಯ ಹೆದ್ದಾರಿಯಲ್ಲಿನ ದೋಷಗಳಿಂದ,ಅಡೆತಡೆಯಿಂದ ವಾಹನ ಅಪಘಾತವಾದಲ್ಲಿ ಪೊಲೀಸ್ ಠಾಣೆಗೆ ದೂರು ಕೊಡುವಾಗ ರಾಷ್ಟ್ರೀಯ ಹೆದ್ದಾರಿಯ ಪ್ರಾಜೆಕ್ಟ್ ಡೈರೆಕ್ಟರನನ್ನೂ ಸೇರಿಸಿ ದೂರು ನೀಡುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದರೆ ಎಲ್ಲ ಬಗೆಯ ತನಿಖೆಗಳೂ ಹತ್ತಿರಕ್ಕೆ ಬರುತ್ತದೆ.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top