ವಾರದ ಬೆಳಕು

ಯುದ್ಧ ಬೇಡ
ಮನುಕುಲದ ಚರಿತ್ರೆ – ಇತಿಹಾಸಗಳಲ್ಲೂ, ವೇದಾದಿ ವೈದಿಕ ಗ್ರಂಥಗಳಲ್ಲೂ, ಕಾಲ್ಪನಿಕ ಪುರಾಣ ಕೃತಿಗಳಲ್ಲೂ ಯುದ್ಧಗಳ ಕಥೆಯೇ ಬಹುತೇಕ ಪುಟಗಳನ್ನು ಅಲಂಕರಿಸಿವೆ. ಅಮಾಯಕರ, ಮುಗ್ದರ ರಕ್ತ ಹರಿಸಿದ್ದಷ್ಟೇ ಯುದ್ಧಕೋರರ ನಿಜವಾದ ಸಾಧನೆ.
ಬಹುತೇಕ ಯುದ್ಧಗಳ ಹಿಂದಿರುವುದು ವಯುಕ್ತಿಕ ಸ್ವಾರ್ಥ, ಕೌಟುಂಬಿಕ ಪ್ರತಿಷ್ಠೆಗಳೇ ಹೊರತು ಬೇರೇನೂ ಅಲ್ಲ. ಸಾಮ್ರಾಜ್ಯ ವಿಸ್ತರಣೆ, ಸರ್ವಾಧಿಕಾರದ ಮದ ಇತ್ಯಾದಿಗಳೂ ಯುದ್ಧಗಳಿಗೆ ಮೂಲ. ಇಲ್ಲಿ ಗೆದ್ದವರಾರೂ ನಿಜವಾದ ಅರ್ಥದಲ್ಲಿ ಗೆದ್ದವರಲ್ಲ, ಸೋತವರೇ.
ಯುದ್ಧಕ್ಕೆ ಬಲಿಯಾಗುವವರು ಹೆಚ್ಚಾಗಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಬಡವರು, ಮಧ್ಯಮ ವರ್ಗದವರು ಮತ್ತು ಬ್ರಾಹ್ಮಣೇತರರೇ. ಯುದ್ಧದ ಕಥೆ ಬರೆದವರಾರೂ ಯುದ್ಧದಲ್ಲಿ ಮಡಿದವರ ಪತ್ನಿಯರ, ತಂದೆ – ತಾಯಿಯರ, ಅಕ್ಕ ,- ತಂಗಿಯರ, ಅಣ್ಣ – ತಮ್ಮಂದಿರ, ಬಂಧು – ಬಳಗದವರ ಕಣ್ಣೀರಿನ ವ್ಯಥೆಯನ್ನು ಚಿತ್ರಿಸುವ ಕರ್ತವ್ಯವನ್ನೂ, ಜವಾಬ್ದಾರಿಯನ್ನೂ ನಿರ್ವಹಿಸಲೇ ಇಲ್ಲ.
ವೇದಗಳಲ್ಲಿ ಅಲಂಕಾರಿಕವಾಗಿ, ರೂಪಕಗಳಾಗಿ ಕಾಲ್ಪನಿಕ ಯುದ್ಧಗಳನ್ನು ಸೃಷ್ಟಿಸಲಾಗಿದೆ. ಪುರಾಣ ಕಥೆಗಳ ಯುದ್ಧಗಳಲ್ಲಿ ಮೋಸ – ವಂಚನೆ, ಸ್ವಾರ್ಥದ ಪರಾಕಾಷ್ಠೆಗಳಾಗಿ ಯುದ್ಧಗಳನ್ನು ವರ್ಣಿಸಲಾಗಿದೆ. ಇತಿಹಾಸದ ಯುದ್ಧಗಳು ಯುದ್ಧದ ನಂತರ ನಡೆಸಲಾಗುವ ಲೂಟಿ, ಅತ್ಯಾಚಾರಗಳನ್ನು ರಾಕ್ಷಸೀಯ ಮುಖವನ್ನು ಬಯಲುಮಾಡಿದೆ.
ನಿನ್ನೆ ಮೊನ್ನೆಯ ಉದಾಹರಣೆ ಕೊಡುವುದಾದರೆ, ಇಸ್ರೇಲ್ ಸೈನ್ಯ ಪ್ಯಾಲೇಸ್ತೇನಿನ ಗಾಝಾದಲ್ಲಿ ನಡೆಸಿದ ಸಾವಿರಾರು ಅಮಾಯಕ ಮಹಿಳೆಯರು ಹಾಗೂ ಮಕ್ಕಳ ಹತ್ಯಾಕಾಂಡ ಮತ್ತು ಅಮೇರಿಕಾ – ಇಸ್ರೇಲ್ ಜಂಟೀ ಸೈನಿಕ ಪಡೆಗಳು ಇರಾನಿನ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಕ್ಷಿಪಣಿ ಉಡಾಯಿಸುವ ಮೂಲಕ ಇನ್ನೂರಕ್ಕೂ ಅಧಿಕ ಮುಗ್ದ ಶಾಲಾ ಮಕ್ಕಳ ಹತ್ಯಾಕಾಂಡ ನಡೆಸಿರುವುದನ್ನು ನೋಡಿದರೆ ಯುದ್ಧ ಮಾನವೀಯತೆಯ, ಮನುಷ್ಯತ್ವದ ಶತ್ರು ಎಂಬುದನ್ನು ಅಂಗೈ ಹುಣ್ಣಿನಂತೆ ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಸ್ಪಷ್ಟವಾಗುತ್ತದೆ.
ಹೆಣ್ಣಿಗಾಗಿ, ಭೂಮಿಗಾಗಿ, ಚಿನ್ನ ಬೆಳ್ಳಿಯೇ ಮೊದಲಾದ ಸಂಪತ್ತಿಗಾಗಿ, ಅಧಿಕಾರದ ದುರಾಸೆಗಾಗಿ ಯುದ್ಧಗಳ ಜೊತೆಗೆ, ಈಗ ತೈಲಕ್ಕಾಗಿ ಯುದ್ಧವೆಂಬ ಹಂತ ತಲುಪಿದೆ. ಇನ್ನು ಮುಂದೆ ಯಾವುದಕ್ಕಾಗಿಯೆಲ್ಲ, ಯಾವೆಲ್ಲ ರೀತಿಯಯುದ್ಧ ನಡೆಯಬಹುದೆಂದು ಊಹಿಸಲಾಗದ ಪರಿಸ್ಥಿತಿ ಇದೆ.
ಯುದ್ಧದಲ್ಲಿ ಒಳ್ಳೆಯವರೇ ನ್ಯಾಯವೇ ಗೆಲ್ಲಬೇಕೆಂದೇನೂ ಇಲ್ಲ. ಕೆಟ್ಟವರೂ, ಮೋಸ ವಂಚನೆಗಳೂ, ಸಂಖ್ಯಾಬಲದ ಕಾರಣಕ್ಕೇ ಗೆಲ್ಲುವುದಿದೆ.
ವೀರ ಮರಣವನ್ನಪ್ಪಿದ ಒಳ್ಳೆಯವನನ್ನೇ ಕೆಟ್ಟವನೆಂದು ಚಿತ್ರಿಸಿ ಗೆದ್ದ ರಾಜನ ಆಸ್ಥಾನ ವಿದ್ವಾಂಸರು ಮಹಾಕಾವ್ಯ ಬರೆದು ಮುತ್ತು ರತ್ನಾದಿಗಳನ್ನು ದಕ್ಷಿಣೆ ಪಡೆದು ಕೃತಾರ್ಥರಾಗುವುದೂ ಉಂಟು.
ಪ್ರಭುತ್ವದ ಪಠ್ಯಪುಸ್ತಕಗಳನ್ನೇ ಮಕ್ಕಳು ಓದುವಂತೆ, ರಾಜರ ಆದೇಶದಂತೆ ಆಸ್ಥಾನ ವಿದ್ವಾಂಸ ಬರೆದ ಮಹಾಕಾವ್ಯವನ್ನೇ ಪ್ರಜೆಗಳು ಯಕ್ಷಗಾನ, ಹರಿಕಥೆ, ನಾಟಕಾದಿಗಳ ಮೂಲಕ ಪ್ರದರ್ಶಿಸುವುದು, ನಿತ್ಯ ಜೀವನದಲ್ಲಿ ಜನ ಪಾಲಿಸುವಂತೆ ಮಾಡಲಾಗುತ್ತದೆ.
ಶತಶತಮಾನಗಳಿಂದ ಹರಿದುಬಂದ ಸುಳ್ಳುಗಳ ಕಥೆಗಳನ್ನು ಸತ್ಯವೆಂದು ನಂಬಿ ಮೂರ್ಖರಾದದ್ದಿದೆ. ಮುಕ್ತಮನದಿಂದ ಸತ್ಯದ ಹುಡುಕಾಟ ನಡೆಸಿದರೆ ಸತ್ಯದ ಸಾಕ್ಷಾತ್ಕಾರವಾಗದೆ ಇರುವುದಿಲ್ಲ.
ಕಾರಣ ಏನು ಬೇಕಾದರೂ ಕೊಡಲಿ, ನೆಪಗಳು ಏನೇ ಇರಲಿ ಯುದ್ಧ ಮಾತ್ರ ನಿರರ್ಥಕ. ಅಮಾಯಕರ – ಮುಗ್ದರ ರಕ್ತ ಹರಿಸುವ, ಕುಟುಂಬಗಳ ನೆಮ್ಮದಿಯ ಜೀವನಕ್ಕಾಗಿ ಸೈನ್ಯ ಸೇರುವ ಉದ್ಯೋಗಸ್ಥರ ಬಲಿ ಕೇಳುವ ನರಕ ಸದೃಶ ಯುದ್ಧ ಬೇಡವೇ ಬೇಡ.






































