ಕಾಂತಾವರ, ಜು.22: ಯಕ್ಷದೇಗುಲ ಕಾಂತಾವರ ಇದರ ಇಪ್ಪತ್ತ್ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ “ಯಕ್ಷೋಲ್ಲಾಸ 2026” ಕಾರ್ಯಕ್ರಮವು ಜು.26ರಂದು (ಭಾನುವಾರ) ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ತಿಳಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುವ ಈ ಹನ್ನೆರಡು ತಾಸಿನ ಕಾರ್ಯಕ್ರಮವನ್ನು ಬಾರಾಡಿಬೀಡು ಸುಮತಿ ಆರ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂತಾವರ ಯುವಸಂಗಮದ ಅಧ್ಯಕ್ಷ ವಿಜಯ ಸಾಲ್ಯಾನ್, ಬೇಲಾಡಿ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಕುಲಾಲ್, ಕೇಮಾರ್ ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಉಪಸ್ಥಿತರಿದ್ದು, ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಶುಭಾಶಂಸನೆ ಸಲ್ಲಿಸಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ಡಾ. ಜೀವಂಧರ್ ಬಲ್ಲಾಳ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮೂಡಬಿದ್ರೆ ಶ್ರೀಪತಿ ಭಟ್ ಮತ್ತು ಕಾರ್ಕಳದ ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಗೌರವ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಪುತ್ತೂರು ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪೂಕಳ ಲಕ್ಷ್ಮೀನಾರಾಯಣ ಭಟ್ ಹಾಗೂ ಬಾಯಾರು ದಿ. ಪ್ರಕಾಶ್ ಚಂದ್ರ ರಾವ್ ಸ್ಮರಣಾರ್ಥ ಬಾಯಾರು ರಮೇಶ್ ಶೆಟ್ಟಿಗೆ “ಯಕ್ಷದೇಗುಲ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಬಾರಾಡಿ ಫ್ರೆಂಡ್ಸ್ ಅಧ್ಯಕ್ಷ ಸನತ್ ಕುಮಾರ್ ಮತ್ತು ಕಾಂತಾವರ ಗೆಳೆಯರ ಬಳಗದ ಅಧ್ಯಕ್ಷ ಆಶಿಕ್ ಸಾಲ್ಯಾನ್ ಉಪಸ್ಥಿತರಿರುತ್ತಾರೆ. ನಂತರ ಪ್ರಸಿದ್ಧ ಕಲಾವಿದರಿಂದ “ಸುಧನ್ವಾರ್ಜುನ” ತಾಳಮದ್ದಳೆ ಹಾಗೂ ಕಾಂತಾವರ ಯಕ್ಷಬಾಲಕರಿಂದ “ಮತ್ಸ್ಯಾವತಾರ”, “ವರಾಹವತಾರ”, “ಮಾರಣಾದ್ವರ” ಬಯಲಾಟ ಪ್ರದರ್ಶನಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.