” ಯಕ್ಷಸಂಗಮ ಮೂಡುಬಿದಿರೆ ” ಪ್ರಶಸ್ತಿ ಪುರಸ್ಕೃತ ಸೀತಾರಾಮ ಕುಮಾರ್ ಕಟೀಲು

ಯಕ್ಷರಂಗದ ತೆಂಕು – ಬಡಗು ಉಭಯತಿಟ್ಟುಗಳ ಸುಪ್ರಸಿಧ್ಧ ಹಾಸ್ಯ ಕಲಾವಿದ , ಪ್ರಸ್ತುತ ಹಲವಾರು ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸೀತಾರಾಮ ಕುಮಾರ್ ಕಟೀಲು ರವರು ಈ ಸಾಲಿನ ” ಯಕ್ಷಸಂಗಮ ಮೂಡುಬಿದಿರೆ ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ . ರಂಗದಲ್ಲಿ ಪಾದರಸದಂತೆ ಚುರುಕಾಗಿ ನಟಿಸುವ ಈ ವಾಮನ ಯಕ್ಷರಂಗದಲ್ಲಿ ತ್ರಿವಿಕ್ರಮನಂತೆ ಬೆಳೆದು ” ಯಕ್ಷರಂಗದ ಚಾರ್ಲೀ ಚಾಪ್ಲೀನ್ ” ಎಂಬ ಬಿರುದನ್ನು ಪಡೆದು ಹಾಸ್ಯದಲ್ಲಿ ಸೃಜನಶೀಲತೆಯ ಸೃಷ್ಟಿಗೆ ಕಾರಣನಾಗಿ ಸದಾ ಹೊಸತನ್ನು ಆನ್ವೇಷಿಸುತ್ತಾ , ಹಾಸ್ಯದಲ್ಲಿ ತನ್ನದೇ ಛಾಪನ್ನು ಮೂಡಿಸಿದವರು . ಬಣ್ಣಗಾರಿಕೆ , ಸಂಭಾಷಣೆ , ವಾದ ಸಂವಾದಗಳಲ್ಲಿ ತೋರುವ ಪ್ರತ್ಯುತ್ಪನ್ನಮತಿ , ಸೃಜನಶೀಲತೆಯ ಶುಧ್ಧ ಹಾಸ್ಯ ಸೀತಾರಾಮರನ್ನು ಶ್ರೇಷ್ಟ ಹಾಸ್ಯಗಾರರೆಂದು ಪ್ರಸಿದ್ಧಿಕ್ಕೇರಿಸಿದ ಅಂಶಗಳು . ಹಾಸ್ಯ ಪಾತ್ರವನ್ನು ಪ್ರಧಾನ ಪಾತ್ರವನ್ನಾಗಿ ಚಿತ್ರಿಸಿದ ಹಿರಿಮೆ ಸೀತಾರಾಮರದು.

10.10.1955 ರಲ್ಲಿ ಶ್ರೀನಿವಾಸ — ಕಲ್ಯಾಣಿ ದಂಪತಿಗಳ ಸುಪುತ್ರರಾಗಿ ಜನಿಸಿದ ಸೀತಾರಾಮರದು ಬಡತನದ ಕುಟುಂಬ. ಯಕ್ಷಗಾನದ ಅತೀವ ಹಂಬಲ ಹೊಂದಿ ಬಾಲ್ಯದಲ್ಲೇ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ನೋಡಿಯೇ ಕಲಿತರು.

” ಏಕಲವ್ಯ ” ನಂತೆ ಗುರುವಿಲ್ಲದೆಯೇ ಯಕ್ಷಗಾನ ಕಲಾವಿದರಾದರು. ಮುಂದಕ್ಕೆ ಉದ್ಯೋಗ ಅರಸಿ ಮುಂಬೈಯತ್ತ ಮುಖ ಹೊರಳಿಸಿದರು . ಮುಂಬೈಯಲ್ಲಿ ದುಡಿಯುತ್ತಾ , ಅಲ್ಲಿಯ ಸಂಘಸಂಸ್ಥೆಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡತೊಡಗಿದರು. ಮುಂಬೈಯಲ್ಲಿದ್ದ ಸೀತಾರಾಮರನ್ನು ಯಕ್ಷಗಾನ ಮೇಳಕ್ಕೆ ತಂದದ್ದು ದಿ. ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟರು .1981- 82 ರಲ್ಲಿ ಚೆನ್ನಪ್ಪ ಶೆಟ್ಟರು ಮುಂಬೈಯಲ್ಲಿ ಸೀತಾರಾಮರ ವೇಷ ನೋಡಿ ಅವರನ್ನು ತಾನು ತಿರುಗಾಟ ನಡೆಸುತ್ತಿದ್ದ ಕದ್ರಿ ಮೇಳಕ್ಕೆ ಸೇರಿಸಿದರು. ಸೀತಾರಾಮರು ಮೂಲತಃ ಪುಂಡುವೇಷಧಾರಿಯಾದ ಕಾರಣ ಕದ್ರಿ ಮೇಳದಲ್ಲಿ ಪುಂಡುವೇಷಗಳನ್ನೇ ನಿರ್ವಹಿಸುತ್ತಿದ್ದರು . ಹಾಸ್ಯಗಾರರಾಗಲು ಪ್ರೇರೇಪಿಸಿದವರು ಮಲ್ಪೆ ವಾಸುದೇವ ಸಾಮಗರು . ಆ ವರ್ಷದ ಕದ್ರಿ ಮೇಳದ” ಮದ್ರೆಂಗಿ ಮದ್ಮಲ್ ” ತುಳುಪ್ರಸಂಗದಲ್ಲಿ ಸಾಮಗರ ಉಪ್ಪಣ್ಣ ದೀಕ್ಷಿತನ ಪಾತ್ರದ ಹೆಡ್ಡ ಸ್ವಭಾವದ ಮಗ ಜನ್ನಮಾಣಿ ಎಂಬ ಹಾಸ್ಯ ಪಾತ್ರಕ್ಕೆ ಸೀತಾರಾಮರನ್ನು ಆಯ್ಕೆ ಮಾಡಿದಾಗ , ಹೆಡ್ಡನಾಗಿ ಸಹಜ ಅಭಿನಯ , ಮಾತುಗಾರಿಕೆಯಿಂದ ಸೀತಾರಾಮರು ಯಶಸ್ವಿಯಾದರು .ಮುಂದಿನ ವರ್ಷ ಡಿ.ಮನೋಹರ್ ಕುಮಾರರ ” ಗೆಜ್ಜೆದ ಪೂಜೆ ” ತುಳು ಪ್ರಸಂಗದಲ್ಲಿ ಬರುವ ಕುಡುಕ ಕಾಳು ಪಾತ್ರದಲ್ಲಿ ಸೀತಾರಾಮರ ಹಾಸ್ಯ ಪ್ರಜ್ಞೆ ಪ್ರಕಟಗೊಂಡಿತು . ಉತ್ತಮ ಸಂಭಾಷಣೆ , ನಟನೆಯಿಂದ ಕಾಳು ಪಾತ್ರ ಪ್ರೇಕ್ಷಕರನ್ನು ರಂಜಿಸಿತು . ನಂತರ ಹಾಸ್ಯ ಪಾತ್ರಗಳಲ್ಲೇ ಮಿಂಚಿ , ಮುಂದೆ ಕಾಲಾನುಕ್ರಮದಲ್ಲಿ ಮೇಳದ ಪ್ರಧಾನ ಹಾಸ್ಯಗಾರರಾದರು . ತೆಂಕು ತಿಟ್ಟಿನಲ್ಲಿ ಮಿಂಚಿದ ಸೀತಾರಾಮರ ಕಲಾ ಬದುಕಿನ ಎರಡನೇ ಅಧ್ಯಾಯ ಬಡಗು ತಿಟ್ಟನ್ನು ಸೇರಲು ಪ್ರೇರೇಪಿಸಿತು .ಬಡಗು ತಿಟ್ಟನ್ನು ಸೇರಲೂ ಚೆನ್ನಪ್ಪ ಶೆಟ್ಟರೇ ಕಾರಣರಾದುದು ಯೋಗಾಯೋಗ ಅನ್ನಬಹುದು . ಶೆಟ್ಟರು ಆ ವರ್ಷ ಬಡಗು ತಿಟ್ಟಿನ ಪೆರ್ಡೂರು ಮೇಳದ ತಿರುಗಾಟದಲ್ಲಿದ್ದರು .ಪೆರ್ಡೂರು ಮೇಳಕ್ಕೆ ಒಬ್ಬ ಹಾಸ್ಯಗಾರರ ಅವಶ್ಯಕತೆ ಬಂತು . ಚೆನ್ನಪ್ಪ ಶೆಟ್ಟರ ಮುತುವರ್ಜಿಯಿಂದ ಸೀತಾರಾಮರು ಪೆರ್ಡೂರು ಮೇಳ ಸೇರಿದರು .ಹೀಗೆ ತೆಂಕು – ಬಡಗು ಎರಡೂ ತಿಟ್ಟುಗಳ ಪ್ರವೇಶಕ್ಕೆ ಚೆನ್ನಪ್ಪ ಶೆಟ್ಟರೇ ಪ್ರೇರಕರಾದರು .ಚೆನ್ನಪ್ಪ ಶೆಟ್ಟರನ್ನು ಸೀತಾರಾಮರು ಗುರುಭಾವದಿಂದ ಕಾಣುತ್ತಿದ್ದರು . ಚೆನ್ನಪ್ಪಶೆಟ್ಟರಲ್ಲೇ ಅರ್ಥಗಾರಿಕೆ , ಸಾಹಿತ್ಯ ಅಭ್ಯಾಸ ಮಾಡಿದರು. ಸೀತಾರಾಮರು ” ಏಕಪಾಠಿ ” ಗಳಾದ ಕಾರಣ ಚೆನ್ನಪ್ಪ ಶೆಟ್ಟರು ಕಲಿಸಿ ಕೊಟ್ಟ ಸಂಸ್ಕ್ರತ ಶ್ಲೋಕ , ಪ್ರಕೃತಿವರ್ಣನೆ , ಸೌಂದರ್ಯ ವರ್ಣನೆ , ಸಂವಾದ ಬೆಳೆಸುವ ವಿಧಾನ ಎಲ್ಲವನ್ನೂ ಕರಗತ ಮಾಡಿಕೊಂಡರು.
ಯಾವುದೇ ಹಾಸ್ಯಗಾರರನ್ನು ಅನುಕರಿಸದೇ , ತಮ್ಮ ಸ್ವಂತಿಕೆಯನ್ನು ಹಾಸ್ಯರಂಗಕ್ಕೆ ತಂದ ಹೆಗ್ಗಳಿಕೆ ಸೀತರಾಮರದು . ಉತ್ತಮ ಸಾಹಿತ್ಯವನ್ನು ಅಭ್ಯಸಿಸಿ ತನ್ನ ಪಾತ್ರಗಳಿಗೆ ಅಳವಡಿಸುವಲ್ಲಿ ಸೀತಾರಾಮರು ಸಿಧ್ಧಹಸ್ತರು . ನಿರರ್ಗಳವಾಗಿ ಶ್ಲೋಕ , ವರ್ಣನೆ, ಹೊಗಳಿಕೆಯನ್ನು ಹೇಳುವಲ್ಲಿ ಸೀತಾರಾಮರ ವಿದ್ವತ್ತನ್ನು ಗಮನಿಸಬಹುದು. ಶ್ರೀಕೃಷ್ಣ , ಶ್ರೀರಾಮನನ್ನು ಸ್ತುತಿಸುವಾಗ ಪಟಪಟನೇ ನೂರಕ್ಕೂ ಹೆಚ್ಚು ಹೆಸರನ್ನು ಹೇಳುವುದು , ಪ್ರಕೃತಿಯನ್ನು ವರ್ಣಿಸುವ ಶ್ಲೋಕ , ಅರಸನಿಗೆ ಬಹುಪರಾಕು ಹೇಳುವ ಬಿರುದುಬಾವಲಿಗಳು ಸೀತಾರಾಮರ ಅರ್ಥಗಾರಿಕೆಯ ಮೆರುಗನ್ನು ಹೆಚ್ಚಿಸಿವೆ.
ಬಡಗಿನಲ್ಲಿ ಹಲವಾರು ವರ್ಷಗಳ ತಿರುಗಾಟ ನಡೆಸಿದ ಸೀತಾರಾಮರು ಇದೀಗ ಸುಮಾರು 19 ವರ್ಷಗಳಿಂದ ತೆಂಕಿನ ಹೊಸನಗರ , ಪ್ರಸ್ತುತ ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .44 ವರ್ಷಗಳಿಂದ ಯಕ್ಷರಂಗದ ತಿರುಗಾಟದಲ್ಲಿರುವ ಸೀತಾರಾಮರು ತಾಳಮದ್ದಳೆ ಹಾಗೂ ಶನಿ ಪೂಜೆಯ ತಾಳಮದ್ದಳೆ ಕೂಟಗಳಲ್ಲೂ ಪ್ರಸಿದ್ಧರಾಗಿದ್ದಾರೆ . ಇವರ ವಿಜಯ , ಮಕರಂದ , ಕಾಶಿಮಾಣಿ , ದಾರುಕ , ವೃದ್ಧ ಬ್ರಾಹ್ಮಣ , ರಾಕ್ಷಸ ದೂತ , ಕೌಕ ಭಟ್ಟ , ಕುದುರೆ ವ್ಯಾಪಾರಿ , ಮುದುಕಿ , ದಿತಿಯ ದೂತ , ಬೆಸ್ತ , ಅಗಸ ಮುಂತಾದ ಪಾತ್ರಗಳು ಅಪಾರ ಹೆಸರನ್ನು ತಂದಿವೆ .” ಸಿಯಾಳವನ್ನು ಹಲ್ಲಿನಿಂದ ಕಚ್ಚಿ ಸುಲಿದು , ಹಣೆಗೆ ಬಡಿದು ಭಾಗ ಮಾಡುವ ” ಶ್ರೀದೇವಿ ಮಹಾತ್ಮೆ ” ಯ ರಕ್ತೆರಶ್ವರಿಯ ಪಾತ್ರಿಯ ಪಾತ್ರ ಇವರಿಗೆ ಅಪಾರ ಜನಪ್ರಿಯತೆ ತಂದಿದ್ದು , ಅದನ್ನು ವೀಕ್ಷಿಸಲೆಂದೇ ಪ್ರೇಕ್ಷಕರು ಕೊನೆಯ ತನಕ ಪ್ರದರ್ಶನ ನೋಡಲು ನಿಲ್ಲುತ್ತಿರುವುದು ಉಲ್ಲೇಖನೀಯ .
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ




































