ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಬಾಳಿಗೆ ದಾರಿದೀಪ
ಕಾರ್ಕಳ : “ಶಿಕ್ಷಣದ ಉದ್ದೇಶ ಜ್ಞಾನ ನೀಡುವುದರ ಜತೆಗೆ ಜಾಗೃತ ಸಮಾಜವನ್ನು ನಿರ್ಮಿಸುವುದು ಪ್ರಮುಖ ಆಶಯವಾಗಬೇಕು. ಸಮಾಜದಲ್ಲಿ ಕಾಣುವ ಭ್ರಷ್ಟಾಚಾರ, ಅನೈತಿಕತೆ, ಅಶಿಸ್ತು, ಇವುಗಳನ್ನು ದೂರ ಮಾಡುವ ಶಕ್ತಿ ಶಿಕ್ಷಣದಲ್ಲಿದೆ. ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳಿಗೆ ಸರಿಯಾದ ದಾರಿದೀಪವಾಗಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಶ್ರೀ ಭುವನೇಂದ್ರ ರೆಸಿಡನ್ಶಿಯಲ್ ಸ್ಕೂಲ್ ರಜತ ಸಂಭ್ರಮದ ಪ್ರಯುಕ್ತ ಶಾಲೆಯಲ್ಲಿ ಗುರುವಾರ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವ್ಯಕ್ತಿತ್ವ ವಿಕಸನವಿಲ್ಲದೆ ಶಿಕ್ಷಣ ಅಪೂರ್ಣ. ಮನುಷ್ಯನ ನಡೆ-ನುಡಿ, ಮೌಲ್ಯಗಳು, ಸಹಾನುಭೂತಿ, ದೇಶಪ್ರೇಮ ಇವೇ ನಿಜವಾದ ಶಿಕ್ಷಣದ ಬಿಂದುಗಳು. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡರೆ ಮಾತ್ರ ಸಮಾಜ ಸಶಕ್ತವಾಗುತ್ತದೆ. ಕಳೆದ 25 ವರ್ಷಗಳಿಂದ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ನೀಡುತ್ತಿರುವ ನಿಷ್ಠಾವಂತ ಸೇವೆಯನ್ನು ಅವರು ಶ್ಲಾಘಿಸಿದರು.
ಟಿ. ಎಂ. ಎ. ಪೈ ಅವರ ದೂರದೃಷ್ಟಿ, ಅವರ ಸೇವಾಸ್ಫೂರ್ತಿ, ಮೌಲ್ಯಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆ. ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಶಿಕ್ಷಣಕ್ಕಷ್ಟೇ ಸೀಮಿತಗೊಳ್ಳದೆ ಶಿಸ್ತು, ನೈತಿಕತೆ, ಸಾಮಾಜಿಕ ಜವಾಬ್ದಾರಿಗಳನ್ನು ಮಕ್ಕಳಲ್ಲಿ ಬೆಳೆಸುತ್ತಿರುವುದು ವಿಶೇಷ. ಈ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು, ಪೂರ್ವ ವಿದ್ಯಾರ್ಥಿಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಸಿ. ಎ. ಶಿವಾನಂದ ಪೈ ಬಿ. ಅಧ್ಯಕ್ಷತೆ ವಹಿಸಿ, ಶಾಲೆಯ ಬೆಳವಣಿಗೆಯಲ್ಲಿ ಹಿಂದೆ ಶಿಕ್ಷಕರ ಶ್ರಮ, ಪಾಲಕರ ನಂಬಿಕೆ, ಹಾಗೂ ಪೂರ್ವ ವಿದ್ಯಾರ್ಥಿಗಳ ಬೆಂಬಲ ಇವುಗಳ ಸಮೂಹಶಕ್ತಿ ಕಾರ್ಯನಿರ್ವಹಿಸುತ್ತದೆ. ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯ 25 ವರ್ಷಗಳ ಯಾನ ಈ ಸಹಕಾರದ ಅತ್ಯುತ್ತಮ ಉದಾಹರಣೆಯಾಗಿದೆ. ಶಾಲೆಯ ಗುರಿ ಕೇವಲ ಉದ್ಯೋಗ ಅಥವಾ ಅಂಕಪತ್ರ ನೀಡುವುದಾಗಿಲ್ಲ. ಭವಿಷ್ಯದಲ್ಲಿ ಒಂದೊಳ್ಳೆ ವ್ಯಕ್ತಿತ್ವ ಸಮಾಜಕ್ಕೆ ನೀಡುವುದು ನಮ್ಮ ಆಶಯವಾಗಿದೆ. ಇದಕ್ಕಾಗಿ ಕಳೆದ 25 ವರ್ಷಗಳಿಂದ ಭುವನೇಂದ್ರ ಶಾಲೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ, ವಕೀಲ ಎಂ. ಕೆ. ವಿಫುಲ್ತೇಜ್ ಮಾತನಾಡಿ, ಸಾಕಷ್ಟು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪುಗೊಳ್ಳಲು ಕಾರಣವಾದ ಈ ವಿದ್ಯಾ ಸಂಸ್ಥೆಯಲ್ಲಿ ಕಲಿತದ್ದೇ ನಮ್ಮ ಸೌಭಾಗ್ಯ.ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ವಿದ್ಯಾಸಂಸ್ಥೆಯ ಮಹತ್ವದ್ದ ಜವಾಬ್ದಾರಿಯಾಗಿರುತ್ತದೆ. ಈ ಜವಾಬ್ದಾರಿಯನ್ನು ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆ ಅತ್ಯಂತ ಅತ್ಯಂತ ವ್ಯವಸ್ಥಿತ, ಶಿಸ್ತುಬದ್ಧವಾಗಿ ನಿರ್ವಹಿಸಿಕೊಂಡು ಬಂದಿದೆ. ಶಾಲೆಯ ಅಭಿವೃದ್ಧಿಗೆ ಪೂರ್ವ ವಿದ್ಯಾರ್ಥಿ ಸಂಘ ಸದಾ ಬೆಂಬಲವಾಗಿರಲಿದೆ ಎಂದು ಆಶಿಸಿದರು.


























