ಮೊಗವೀರ ಸಮುದಾಯದ ಹೋರಾಟಗಾರ ರಾಮಚಂದ್ರ ಬೈಕಂಪಾಡಿ ನಿಧನ
ಇವತ್ತು (14/04/2026)ಬೆಳಿಗ್ಗೆ ರಾಮಚಂದ್ರ ಬೈಕಂಪಾಡಿಯವರು ದೈವಾಧೀನರಾದರು.
ಕಳೆದೆರಡು ತಿಂಗಳುಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು.ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಚಿಕಿತ್ಸೆ ಹಾಗೂ ಸಲಹೆಯಂತೆ ವಿಶ್ರಾಂತಿಯಲ್ಲಿದ್ದರು.
ಅವರೊಬ್ಬ ಜನಾನುರಾಗಿ ವ್ಯಕ್ತಿಯಾಗಿರುವುದು ಜನರೊಡನೆ ಪ್ರೀತಿಯಿಂದ ಬೆರೆತುಕೊಳ್ಳುತ್ತಿರುವುದರಿಂದಾಗಿಯೆ.
ರಾಮಚಂದ್ರ ಬೈಕಂಪಾಡಿಯವರಂತೆ ಜನರೊಡನೆ ಸ್ನೇಹ ಸಲುಗೆ ಇಟ್ಟುಕೊಳ್ಳುವ ರಾಜಕಾರಣಿ,ಸಾರ್ವಜನಿಕ ವ್ಯಕ್ತಿಗಳು ಬಹು ವಿರಳ.
ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅವರು ಮೀನುಗಾರ ಸಮುದಾಯದ ಹಿತಾಸಕ್ತಿಗಳನ್ನು ಪ್ರತಿಪಾದಿಸುತ್ತಲೇ ಬಂದಿರುವ ಬಿಜೆಪಿ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮೊಗವೀರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ಕೋರಿದ್ದರು.
ಅವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಮೊಗವೀರ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸುತ್ತಿದ್ದರಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಮೀನುಗಾರ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದರೆ ಸಮುದಾಯದಿಂದ ಬಿಜೆಪಿ ವಿರುದ್ಧದ ಹೋರಾಟ ಮಾಡಿಸುವ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯೆಡ್ಯೂರಪ್ಪನವರ ಬಹಳ ಆಪ್ತನಾಗಿದ್ದು ಅವರ ಜೊತೆಗೆನೆ ಗುರುತಿಸಿಕೊಂಡಿದ್ದರು.
-ವಿ. ಕೆ. ವಾಲ್ಪಾಡಿ



































